October 27, 2021

ಉದಯಪ್ರಭ

ಹೊಸ ಹುರುಪಿನ ಸಂಭ್ರಮ

ಹೊಸ ಶಿಕ್ಷಣ ನೀತಿ ಭಾರತವನ್ನು ಜಾಗತಿಕವಾಗಿ ಬೆಳೆಸುತ್ತದೆ

ಬೆಳಗಾವಿ :
ರಾಷ್ಟೀಯ ಶಿಕ್ಷಣ ನೀತಿ-2020 ಭಾರತವು ಜಾಗತಿಕ ಮಟ್ಟದಲ್ಲಿ ಬೆಳೆಯಲು ಸಹಾಯ ಮಾಡಲಿದೆ. ಈ ನೀತಿಯು ಉತ್ತಮ‌ ಗುಣಮಟ್ಟದ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಇಲಾಖೆಯ ಸಚಿವ ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದರು.

ನೆಹರು ನಗರದ ಕೆ.ಎಲ್.ಇ. ಆವರಣದಲ್ಲಿರುವ ಜೀರಗೆ ಸಭಾಭವನದಲ್ಲಿ ಬುಧವಾರ (ಅ.13) ನಡೆದ ರಾಷ್ಟ್ರೀಯ ಶಿಕ್ಷಣ ನೀತಿ -2020 ಅನುಷ್ಠಾನದ ದಿಟ್ಟ ಹೆಜ್ಜೆ ಕುರಿತು ಆಯೋಜಿಸಲಾದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯ (ಸ್ವಾಯತ್ತ) ಇವರುಗಳ ಸಂಯುಕ್ತ ಆಶ್ರಯದಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ಅಧ್ಯಾಪಕರುಗಳು ಮತ್ತು ಆಡಳಿತ ಮಂಡಳಿಯವರಿಗೆ ರಾಷ್ಟೀಯ ಶಿಕ್ಷಣ ನೀತಿ-2020 ಕುರಿತು ಅರಿವು ಮೂಡಿಸಲು ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

ದೀಪ ಬೆಳಗುವ ಮೂಲಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಸಿ.ಎನ್. ಅಶ್ವತ್ಥ ನಾರಾಯಣ ಅವರು,
ರಾಷ್ಟೀಯ ಶಿಕ್ಷಣ ನೀತಿ-2020 ಕುರಿತು ಅರಿವು ಮೂಡಿಸಲು ಅನೇಕ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸ್ವಾತಂತ್ರ್ಯ ನಂತರ ಅಳವಡಿಸಿಕೊಳ್ಳಲಾಗುತ್ತಿರುವ 3ನೇಯ ಶಿಕ್ಷಣ ನೀತಿ ಇದಾಗಿದೆ. 34 ವರ್ಷಗಳ‌ ನಂತರ ಶಿಕ್ಷಣ ಪದ್ದತಿಯಲ್ಲಿ ಬದಲಾವಣೆ ಮಾಡಲಾಗಿದೆ.

ಇಂದು ತಂತ್ರಜ್ಣಾನದ ಬೆಳವಣಿಗೆಯಿಂದ‌ ಜಗತ್ತೇ ಹಳ್ಳಿಯಂತಾಗಿದೆ. ಹೊಸ ಶಿಕ್ಷಣ ನೀತಿ ಕಲಿಕೆಯಲ್ಲಿ ಮಹತ್ತರವಾದ ಬದಲಾವಣೆ ತರಲಿದೆ. ಹೊಸ ಶಿಕ್ಷಣ ನೀತಿ ಸರ್ವಾಂಗೀಣ ಅಭಿವೃಧ್ಧಿಗೆ ಪೂರಕವಾಗಿದೆ ಹಾಗೂ ಸ್ಪಷ್ಟ ಗುರಿಗಳನ್ನು ಹೊಂದಿದೆ ಎಂದು ತಿಳಿಸಿದರು.

ವಿಶ್ವ ಮಾನವನಾಗಬೇಕಾದರೆ ಎಲ್ಲ ಗುಣಮಟ್ಟದಲ್ಲಿ ಮುಂಚೂಣಿಯಲ್ಲಿ ಇರಬೇಕು. ತಂತ್ರಜ್ಞಾನ ಬೆಳೆದರೆ ಮಾತ್ರ ದೇಶಗಳಿಗೆ ಮಾನ್ಯತೆ ದೊರೆಯುತ್ತದೆ. ಈ ನಿಟ್ಟಿನಲ್ಲಿ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲು ರಾಷ್ಟೀಯ ಶಿಕ್ಷಣ ನೀತಿ-2020 ಸಹಕಾರಿಯಾಗಲಿದೆ.

ಜಾಗತಿಕ ಮಟ್ಟದಲ್ಲಿ ಆವಿಷ್ಕಾರಗಳನ್ನು ಮಾಡಲು ಶಿಕ್ಷಣವೇ ಮೂಲವಾಗಿದೆ. ಜನಸಂಖ್ಯೆ ಹೆಚ್ಚಿನ ಮಟ್ಟದಲ್ಲಿ ಇರುವ ನಮ್ಮ ದೇಶದಲ್ಲಿ ಜನರ ಜೀವನಮಟ್ಟ ಸುಧಾರಿಸಲು ಈ ನೀತಿಯು ಶಿಕ್ಷಣ ದ ಮೂಲಕ ದೇಶದ ಅಭಿವೃದ್ಧಿಗೆ ಅನುಕೂಲಕರವಾಗಿದೆ.

2 ನೇಯ ಮಹಾಯುದ್ಧದ ನಂತರ ಕೊರಿಯಾ,ಚೀನಾ,ಜಪಾನ್, ಜರ್ಮನಿ ದೇಶಗಳು ಪುನರ್ ರಚನೆಗೊಂಡವು. ಇದಕ್ಕೆ ಕಾರಣ ಅವರಲ್ಲಿರುವ ಶಿಕ್ಷಣ ಮತ್ತು ಕೌಶಲ್ಯ ಎಂದು ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಇಲಾಖೆಯ ಸಚಿವ ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದರು.

ಪ್ರಥಮ್ ಸರ್ವೇ ಸಂಸ್ಥೆಯ ಸಮೀಕ್ಷೆಯ ಪ್ರಕಾರ‌ 30% ರಷ್ಟು ಪ್ರಾಥಮಿಕ, ಪ್ರೌಢ ಶಿಕ್ಷಣ ದಾಖಲಾತಿ ಪ್ರಮಾಣವಿದ್ದು, ಉನ್ನತ ಶಿಕ್ಷಣದ ದಾಖಲಾತಿ ಪ್ರಮಾಣದ ಮೊತ್ತವು 26%ರಷ್ಟಿದೆ.
ಇದರ ಪ್ರಮಾಣವನ್ನು ಹೆಚ್ಚಿಸಲು ಸೂಕ್ತ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುವುದು. 2030 ರ ಒಳಗಾಗಿ ಎಲ್ಲರಿಗೂ ಅಕ್ಷರ ಜ್ಞಾನ ನೀಡಲಾಗುವುದು ಎಂದು ಭರವಸೆ ನೀಡಿದರು.

ರಾಷ್ಟೀಯ ಶಿಕ್ಷಣ ನೀತಿ-2020 ಯಲ್ಲಿ ಮೆರಿಟ್‌, ವಿದ್ಯಾರ್ಥಿ ವೇತನ ಹಾಗೂ ಮೀಸಲಾತಿಗಳನ್ನು ತೆಗೆದು ಹಾಕಲಾಗುವುದಿಲ್ಲ. ಶಿಕ್ಷಕರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಮತ್ತು ಪಾಲಕರು ಈ ನೀತಿಯ ಕುರಿತು ಯಾವುದೇ ಗೊಂದಲಗಳಿಗೆ ಒಳಗಾಗಬಾರದು. ಈಗಾಗಲೇ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಿಗೆ ನೀಡಿರುವ ಮಾಹಿತಿಯನ್ನು ಪಡೆದುಕೊಳ್ಳಿ ಎಂದು ಅವರು ಸಲಹೆ ನೀಡಿದರು.

ವಿದ್ಯಾರ್ಥಿಗಳಿಂದ ಪಡೆದ ಹಣವನ್ನು ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಹಾಗೂ ಪ್ರಾಧ್ಯಾಪಕರ ವೇತನಕ್ಕೆ ಮಾತ್ರ ಬಳಸಬೇಕು. ಈ ರಾಷ್ಟೀಯ ಶಿಕ್ಷಣ ನೀತಿಯಲ್ಲಿ ಪಬ್ಲಿಕ್ ಡೊಮೇನ್ ನಲ್ಲಿ ಮಾಹಿತಿ ದೊರಕುವಂತೆ ಮಾಡಿ, ಪಾರದರ್ಶಕತೆಯನ್ನು ಕಾಪಾಡಲಾಗುವುದು ಎಂದು ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಇಲಾಖೆಯ ಸಚಿವರಾದ ಸಿ.ಎನ್. ಅಶ್ವತ್ಥ ನಾರಾಯಣ ಅವರು ತಿಳಿಸಿದರು.

ಪ್ರತಿ ವರ್ಷ ಪ್ರಾ‌ಧ್ಯಾಪಕರ ನೇಮಕಾತಿ ಮಾಡಿಕೊಳ್ಳಲಾಗುವುದು. ಶಿಕ್ಷಕರ ಪ್ರಾಧ್ಯಾಪಕರಿಗೆ ತರಬೇತಿ ನೀಡಲಾಗುವುದು. ಅಧಿಕಾರದ ವಿಕೇಂದ್ರೀಕರಣ ಮಾಡಲಾಗುವುದು. ಗುಣಮಟ್ಟದ ಶಿಕ್ಷಣ ಹಾಗೂ ಸಂಪನ್ಮೂಲ ನೀಡಲಾಗುವುದು.

ಈ ಹಿನ್ನೆಲೆಯಲ್ಲಿ ಭಾರತ ಮತ್ತು ನೆಸ್ಕಾಂ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರತಿ ವರ್ಷ‌ 5 ಲಕ್ಷ ಜನರಿಗೆ ಡಿಜಿಟಲ್‌ ತರಬೇತಿ ನೀಡಲಾಗುವುದು ಎಂದು ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಇಲಾಖೆಯ ಸಚಿವ ಸಿ.ಎನ್. ಅಶ್ವತ್ಥ ನಾರಾಯಣ ಅವರು ತಿಳಿಸಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಪ್ರೊ.ಗಂಗಾಧರಯ್ಯ ಅವರು ಜ್ಞಾನ, ಉದ್ಯೋಗ, ಕೌಶಲ್ಯ ಶಿಕ್ಷಣದ ಮೂಲ‌ ಉದ್ದೇಶ. 34 ವರ್ಷಗಳ ನಂತರ ಹೊಸ ಶಿಕ್ಷಣ ಪದ್ಧತಿ ಜಾರಿಗೆ ಬರುತ್ತಿದೆ. ಮೊದಲ ಬಾರಿಗೆ ಕರ್ನಾಟಕದಲ್ಲಿ ಅನುಷ್ಠಾನಕ್ಕೆ ಬರುತ್ತಿರುವುದು ನಮ್ಮ ಹೆಮ್ಮೆ. ಹೊಸ ರಾಷ್ಟ್ರೀಯ ನೀತಿ ವೃತ್ತಿಪರತೆಯನ್ನು ಅವಲಂಬಿಸಿದೆ ಎಂದರು.

ಇದು ಕರ್ನಾಟಕವೇ‌ ರೂಪಿಸಿದ ನೀತಿ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಅಳವಡಿಸಿಕೊಳ್ಳುತ್ತಿರುವುದು ಸಂತೋಷದ ಸಂಗತಿ. ಮುಂದೆ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಮಾತನಾಡಿ, ಶಿಕ್ಷಣ ನೀತಿಯನ್ನು ಕಾರ್ಯ ರೂಪಕ್ಕೆ ತರುವ ಕೆಲಸ ರಾಜ್ಯಗಳಿಗೆ ವಹಿಸಿದಾಗ ಮುಂದೆ ಬಂದದ್ದು ಕರ್ನಾಟಕ. ಇದರ ಕೀರ್ತಿ ಸಚಿವರಾದ .ಎನ್. ಅಶ್ವತ್ಥ ನಾರಾಯಣ ಅವರಿಗೆ ಸಲ್ಲುತ್ತದೆ ಎಂದರು.

ನಾಡಿನ ನೆಲ,‌ ಜಲ, ಸಂಸ್ಕೃತಿಯ ಬಗ್ಗೆ ಇರುವ ಶಿಕ್ಷಣ ಬೇಕಿದೆ. ನರೇಂದ್ರ ಮೋದಿ ಅವರ ಸರ್ಕಾರ ಗುಣಾತ್ಮಕ ಹಾಗೂ ಮಾನವ ಸಂಪನ್ಮೂಲಗಳ ಆದಾಯವನ್ನು ದ್ವಿಗುಣ ಮಾಡುವುದು ಎಂದು ಅವರು ತಿಳಿಸಿದರು.

ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಮಾತನಾಡಿ, ಇದು ಕಸ್ತೂರಿ ರಂಗನ್ ಅವರು ಮಂಡಿಸಿದ ವರದಿಯಾಗಿದೆ. 2014 ರಲ್ಲಿ ನರೇಂದ್ರ ಮೋದಿಯವರರು ಸರ್ಕಾರದ ರಚನೆ ‌ಮಾಡಿದರೆ ಹೊಸ ಶಿಕ್ಷಣ ನೀತಿ ಜಾರಿಗೆ ತರುವುದಾಗಿ ಭರವಸೆ ನೀಡಿದ್ದರು. ಈಗ ಅದನ್ನು
ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.

ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರು, 50-60 ವರ್ಷಗಳ ಹಿಂದೆ ಜನಸಂಖ್ಯೆ ಶಾಪವಾಗಿತ್ತು. ಅಬ್ದುಲ್ ಕಲಾಂ ಅವರ ಪ್ರಕಾರ 2021 ಭಾರತದ ಸಮಯವಾಗಿದೆ. ಮೆಕಾಲೆ ಅವರ ಶಿಕ್ಷಣ ಪದ್ಧತಿಯ ಅನುಕರಣೆ ಮಾಡಲಾಗುತ್ತಿತ್ತು. ಈಗ ಇದೊಂದು ಹೊಸ ಆವಿಷ್ಕಾರ ಎಂದರು.

ಸಚಿವ ಸಿ.ಎನ್. ಅಶ್ವತ್ಥ ನಾರಾಯಣ ಅವರನ್ನು
ಅವರನ್ನು ಸನ್ಮಾನಿಸಲಾಯಿತು.

ನಂತರ ಪ್ರಾಧ್ಯಾಪಕರೊಂದಿಗೆ ಸಂವಾದ ನಡೆಸಿ, ಅವರ ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದರು.

ಸಂಪನ್ಮೂಲ ವ್ಯಕ್ತಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ. ಗೋಪಾಲಕೃಷ್ಣ ಜೋಶಿ ಹಾಗೂ ರಾಮಯ್ಯ ಪಬ್ಲಿಕ್ ಪಾಲಿಸಿ ಸೆಂಟರ್ ನ ಉಪನಿರ್ದೇಶಕ ಡಾ.ಚೇತನ್ ಸಿಂಗಯ್ ರಾಷ್ಟೀಯ ಶಿಕ್ಷಣ ನೀತಿ-2020 ಉಪನ್ಯಾಸ ನೀಡಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಬಸವರಾಜ ಪದ್ಮಶಾಲಿ ಸ್ವಾಗತಿಸಿದರು. ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯೆ ಪ್ರೊ.ಜ್ಯೋತಿ ಕವಳೇಕರ ವಂದಿಸಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ರಾಮಚಂದ್ರ ಗೌಡ,ಹಣಕಾಸು ಅಧಿಕಾರಿ ಪ್ರೊ.ಡಿ.ಎನ್.ಪಾಟೀಲ, ಮೌಲ್ಯ ಮಾಪನ ಕುಲಸಚಿವ ಪ್ರೊ. ಎಸ್.ಎಂ.ಹುರಕಡ್ಲಿ, ಮಾಜಿ ಶಾಸಕ ಸಂಜಯ ಪಾಟೀಲ ಹಾಗೂ ಸಿಂಡಿಕೇಟ್ ಸದಸ್ಯರು, ವಿದ್ಯಾ ವಿಷಯಕ ಪರಿಷತ್ತಿನ ಸದಸ್ಯರು ಮತ್ತು ವಿವಿಧ ಕಾಲೇಜುಗಳ ಪ್ರಾಧ್ಯಾಪಕರು ಉಪಸ್ಥಿತರಿದ್ದರು.