ಬೆಳಗಾವಿ :
ಹಿಂದೆಂದಿಗಿಂತ ಈ ವರ್ಷ ಬೆಳಗಾವಿ ಮಹಾನಗರದ ಜನತೆ ಕುಡಿಯುವ ನೀರಿನ ಭವಣೆ ಅನುಭವಿಸುತ್ತಿದ್ದಾರೆ. ಬೆಳಗಾವಿಗೆ ರಕ್ಕಸಕೊಪ್ಪ ಮತ್ತು ಹಿಡಕಲ್ ಜಲಾಶಯದಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಮಳೆಯ ತೀವ್ರ ಅಭಾವದ ನಡುವೆಯೂ ಈ ಸಲ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಬಹುದು ಎಂಬ ಆತಂಕ ಜನರಲ್ಲಿದೆ. ಆದರೆ, ಅಂತಹ ಸಂಕಷ್ಟ ಎದುರಾಗದು ಎನ್ನುತ್ತಾರೆ ಅಧಿಕಾರಿಗಳು.

ಪ್ರಸ್ತುತ ಬೆಳಗಾವಿ ನಗರಕ್ಕೆ 101 ದಿನಕ್ಕೆ ಸಾಕಾಗುವಷ್ಟು ನೀರು ಇಲ್ಲಿನ ರಕ್ಕಸಕೊಪ್ಪ ಜಲಾಶಯದಲ್ಲಿ ಲಭ್ಯವಿದ್ದು, ನಿತ್ಯ 40 ಎಂಎಲ್‌ಡಿ ನೀರು ಹರಿಸಿದರೂ ಜೂನ್ 15 ರವರೆಗೆ ನೀರು ಸಾಕಾಗುತ್ತದೆ ಎಂದು ಎಲ್‌ಅಂಡ್‌ಟಿ ಕಂಪನಿ ಹಾಗೂ ಕರ್ನಾಟಕ ಮೂಲಸೌಕರ್ಯ ಮಂಡಳಿ ಮಾಹಿತಿ ನೀಡಿದೆ. ಇದಲ್ಲದೇ 40ರ ಬದಲು 35 ಎಂಎಲ್ ಡಿ ನೀರು ಹರಿಸಿದರೆ ಜುಲೈ 15ರವರೆಗೆ ನೀರು ಪೂರೈಸಲು ಸಾಧ್ಯ ಎಂದು ವಿವರಿಸಿದ್ದಾರೆ.

ಮೇಯರ್ ಸವಿತಾ ಕಾಂಬಳೆ, ಉಪಮೇಯರ್ ಆನಂದ ಚವ್ಹಾಣ, ಆಯುಕ್ತ ಪಿ. ಎನ್. ಲೋಕೇಶ್ ಅವರ ಸಮ್ಮುಖದಲ್ಲಿ ಬುಧವಾರ ನಡೆದ ನೀರು ಸರಬರಾಜು ಪರಿಶೀಲನಾ ಸಭೆಯಲ್ಲಿ ಈ ಮಾಹಿತಿ ನೀಡಿದರು.

ಸಭೆಯಲ್ಲಿ ಕೆಲ ಕಾರ್ಪೊರೇಟರ್‌ಗಳು ಭಾಗವಹಿಸಿದ್ದರು. ಆಡಳಿತ ಗುಂಪಿನ ಕಾರ್ಪೊರೇಟರ್ ಗಳ ಸಂಖ್ಯೆಯೂ ಹೆಚ್ಚಿತ್ತು. ನಗರದಲ್ಲಿ ಅಸಮರ್ಪಕ ನೀರು ಪೂರೈಕೆ, ಕಾಲುವೆ ಸೋರಿಕೆ ಸೇರಿದಂತೆ ಇತರೆ ಸಮಸ್ಯೆಗಳನ್ನು ಕಾರ್ಪೊರೇಟರ್‌ಗಳು ಪ್ರಸ್ತಾಪಿಸಿದರು.

ಈ ಸಂಬಂಧ ಸಮಸ್ಯೆಗಳನ್ನು ಬಗೆಹರಿಸಿ ನಗರಕ್ಕೆ ಸುಗಮವಾಗಿ ನೀರು ಪೂರೈಕೆ ಮಾಡಬೇಕು ಎಂದು ಎಲ್ ಆ್ಯಂಡ್ ಟಿ ಕಂಪನಿ ಹಾಗೂ ಮೂಲಸೌಕರ್ಯ ಮಂಡಳಿಗೆ ಮೇಯರ್ ಸವಿತಾ ಕಾಂಬಳೆ ಸೂಚಿಸಿದರು. ಸಭೆಯಲ್ಲಿ ನಡೆದ ಚರ್ಚೆಯ ವೇಳೆ ಕಾರ್ಪೊರೇಟರ್‌ಗಳು ಅಧಿಕಾರಿಗಳ ಮೇಲೆ ಪ್ರಶ್ನೆಗಳ ಸುರಿಮಳೆಗೈದರು.

ಕಳೆದ ವರ್ಷ ಮಳೆಗಾಲದಲ್ಲಿ ರಕ್ಕಸಕೊಪ್ಪ ಜಲಾನಯನ ಪ್ರದೇಶದಲ್ಲಿ ಕಡಿಮೆ ಮಳೆಯಾಗಿತ್ತು. 2022 ರಲ್ಲಿ 2277 ಮಿಮೀ ಮಳೆಯಾಗಿದ್ದರೆ, ಕಳೆದ ವರ್ಷ 2023 ರಲ್ಲಿ ಕೇವಲ 1776 ಮಿ.ಮೀ. ಮಳೆಯಾಗಿದೆ. ಆದಾಗ್ಯೂ 509 ಮಿ.ಮೀ. ಕಡಿಮೆ ಮಳೆಯ ನಡುವೆಯೂ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಕ್ಕಸಕೊಪ್ಪ ಜಲಾಶಯದಲ್ಲಿ 2.30 ಅಡಿ ಹೆಚ್ಚುವರಿ ನೀರು ಸಂಗ್ರಹವಾಗಿದೆ.

ಕಳೆದ ಅಕ್ಟೋಬರ್‌ನಿಂದ ನಗರಕ್ಕೆ ಪ್ರತಿದಿನ 32 ಎಂಎಲ್‌ಡಿ ನೀರನ್ನು ಮಾರ್ಕಂಡೇಯ ನದಿ ಪಾತ್ರದಿಂದ ಪಂಪ್ ಮಾಡಲಾಗುತ್ತಿದೆ. ಆದ್ದರಿಂದಲೇ ರಕ್ಕಸಕೊಪ್ಪ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿಲ್ಲ ಎಂದು ಹೇಳಿದರು.