ರಾಂಚಿ: ಮನೆಕೆಲಸದವರ ಬಳಿ ಭಾರೀ ಪ್ರಮಾಣದ ಹಣದ ರಾಶಿ ಪತ್ತೆಯಾದ ಪ್ರಕರಣ ಸಂಬಂಧ ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್ ಆಲಂರ ಆಪ್ತ ಸಹಾಯಕ ಸಂಜೀವ್ ಲಾಲ್ ಮತ್ತು ಸಂಜೀವ್‌ಲಾಲ್‌ನ ಮನೆ ಕೆಲಸದಾಳು ಜಹಾಂಗೀರ್ ಆಲಂರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.

ಭಾರೀ ನಗದು ಪತ್ತೆ ಪ್ರಕರಣದಲ್ಲಿ ಇಬ್ಬರನ್ನೂ ಇ.ಡಿ. ಅಧಿಕಾರಿಗಳು ಸೋಮವಾರ ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಆದರೆ ಇಬ್ಬರೂ ಸೂಕ್ತ ಉತ್ತರ ನೀಡದೇ ಅಧಿಕಾರಿಗಳ ದಾರಿ ತಪ್ಪಿಸುವ ಯತ್ನ ನಡೆಸಿದ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗಾಗಿ ಇಬ್ಬರನ್ನು ಅಧಿಕಾರಿಗಳು ಬಂಧಿಸಿದ್ದಾರೆ.

ಈ ನಡುವೆ ಸಂಜೀವ್ ಆಲಂಗೆ ಸೇರಿದ ಇನ್ನೂ ಹಲವು ಸ್ಥಳಗಳ ಮೇಲೆ ಇ.ಡಿ. ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ. ಈ ವೇಳೆ ಮತ್ತಷ್ಟು ನಗದು ಪತ್ತೆಯಾಗಿದೆ. ಇದರೊಂದಿಗೆ ಕಳೆದ 2 ದಿನಗಳಲ್ಲಿ ದಾಳಿ ವೇಳೆ ವಶಪಡಿಸಿಕೊಂಡ ನಗದಿನ ಮೊತ್ತ 36.75 ಕೋಟಿ ರು. ತಲುಪಿದೆ. ಕೆಲಸದಾಳಿನ ಮನೆಯಲ್ಲಿ 32 ಕೋಟಿ ರು. ಹಾಗೂ ಮಿಕ್ಕ 4.5 ಕೋಟಿ ರು. ಅನ್ಯ ಸ್ಥಳಗಳಲ್ಲಿ ಸಿಕ್ಕಿದೆ.