ಶ್ರೀನಗರ: 10ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಂದು ‌ಜಮ್ಮು ಮತ್ತು ಕಾಶ್ಮೀರದ ದಾಲ್‌ ಸರೋವರ ತೀರದಲ್ಲಿ ಸಾವಿರಾರು ಜನರೊಂದಿಗೆ ಪಾಲ್ಗೊಂಡು ಯೋಗ ಪ್ರದರ್ಶಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಇಂದು, ಶುಕ್ರವಾರ (ಜೂನ್‌ 21) ಬೆಳಿಗ್ಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನೇತೃತ್ವ ವಹಿಸಿದ್ದರು. ಇದು ರಾಷ್ಟ್ರೀಯ ಮತ್ತು ಜಾಗತಿಕ ಗಮನವನ್ನು ಸೆಳೆದಿದೆ.

ಪ್ರಧಾನಿ ಮೋದಿ ಪಾಲ್ಗೊಂಡ ಯೋಗ ಕಾರ್ಯಕ್ರಮವು ಶ್ರೀನಗರದ ದಾಲ್ ಸರೋವರದ ದಡದಲ್ಲಿ ಶೇರ್-ಎ-ಕಾಶ್ಮೀರ್ ಇಂಟರ್ನ್ಯಾಷನಲ್ ಕನ್ವೆನ್ಷನ್ ಕಾಂಪ್ಲೆಕ್ಸ್‌ನಲ್ಲಿ ನಡೆಯಿತು. ಯೋಗ ದಿನಾಚರಣೆಯ ಈ ವರ್ಷದ ಥೀಮ್, “ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ” ಎಂಬುದಾಗಿದೆ. ವೈಯಕ್ತಿಕ ಯೋಗಕ್ಷೇಮ ಮತ್ತು ಸಾಮಾಜಿಕ ಸಾಮರಸ್ಯವನ್ನು ಬೆಳೆಸುವಲ್ಲಿ ಯೋಗದ ಪ್ರಮುಖ ಪಾತ್ರವನ್ನು ಇದು ಒತ್ತಿಹೇಳುತ್ತದೆ.
ಕಾಶ್ಮೀರ ಕಣಿವೆಯಾದ್ಯಂತ ಮಳೆಯಾಗಿದೆ ಎಂದು ವರದಿಯಾಗಿದೆ. ದಾಲ್ ಸರೋವರದ ಸುತ್ತಮುತ್ತಲೂ ಮಳೆಯಾಗಿದೆ. ಶ್ರೀನಗರದಲ್ಲಿ ಮಳೆಯಿಂದಾಗಿ ಕಡಿಮೆ ಸಂಖ್ಯೆಯ ಅತಿಥಿಗಳ ಜೊತೆಗೆ ಒಳಾಂಗಣ ಸಭಾಂಗಣದಲ್ಲಿ ಪ್ರಧಾನಿ ಮೋದಿ ವಿಭಿನ್ನ ಯೋಗಾಸನಗಳನ್ನು ಮಾಡಿದರು.
30 ನಿಮಿಷಗಳ ಯೋಗಾಭ್ಯಾಸ ಬೆಳಗ್ಗೆ 7 ಗಂಟೆಗೆ ಆರಂಭವಾಗಬೇಕಿತ್ತು ಆದರೆ ಮಳೆಯಿಂದಾಗಿ ತಡವಾಯಿತು. ಈ ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ ಸಿನ್ಹಾ ಮತ್ತು ಆಯುಷ್ ಸಚಿವ ಪ್ರತಾಪರಾವ್ ಜಾಧವ್ ಸೇರಿದಂತೆ ಇತರರು ಭಾಗವಹಿಸಿದ್ದಾರೆ.

10 ವರ್ಷಗಳಲ್ಲಿ, ಕರ್ನಾಟಕದ ಮೈಸೂರು, ದೆಹಲಿಯ ಕರ್ತವ್ಯ ಪಥ, ಚಂಡೀಗಢ, ಡೆಹ್ರಾಡೂನ್, ರಾಂಚಿ ಮತ್ತು ಜಬಲ್ಪುರ್ ಸೇರಿದಂತೆ ವಿವಿಧ ಐಕಾನಿಕ್ ಸ್ಥಳಗಳಲ್ಲಿ ಯೋಗ ದಿನಾಚರಣೆಯನ್ನು ಪ್ರಧಾನಿ ಮೋದಿ ನೇತೃತ್ವ ವಹಿಸಿದ್ದಾರೆ. ಕಳೆದ ವರ್ಷ, ಅವರು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ಯೋಗ ಕಾರ್ಯಕ್ರಮವನ್ನು ಮುನ್ನಡೆಸಿದರು. ಈ ವರ್ಷ ಶ್ರೀನಗರದಲ್ಲಿ ನಡೆದ ಯೋಗ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ತರುವ ನಿರೀಕ್ಷೆಯಿದೆ.
ಜಮ್ಮು ಮತ್ತು ಕಾಶ್ಮೀರ ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯ ದಾಖಲೆಯ ಮತದಾನ ಮತ್ತು ನಂತರದ ಭಯೋತ್ಪಾದನೆಯ ದಾಳಿಯಿಂದಾಗಿ ಇತ್ತೀಚೆಗೆ ಸುದ್ದಿ ಮಾಡಿದೆ. ಈ ತಿಂಗಳು, ಜಮ್ಮು ಪ್ರದೇಶದಲ್ಲಿ ನಾಲ್ಕು ದಾಳಿಗಳು ನಡೆದಿವೆ, ಇದರಲ್ಲಿ 10 ಜೀವಗಳನ್ನು ಬಲಿ ಪಡೆದ ರಿಯಾಸಿ ಜಿಲ್ಲೆಯಲ್ಲಿ ಬಸ್‌ಫುಲ್ ಯಾತ್ರಾರ್ಥಿಗಳ ಮೇಲಿನ ದಾಳಿಯೂ ಸೇರಿದೆ.