ಜಾರ್ಜಿಯಾ : ಜಾರ್ಜಿಯಾ ದೇಶದ ಗುಡೌರಿಯಲ್ಲಿರುವ ಭಾರತೀಯ ಹೋಟೆಲ್ ಒಂದರಲ್ಲಿ ವಿಷಾನಿಲ ಸೋರಿಕೆಯಾಗಿ 12 ಭಾರತೀಯರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಹೋಟೆಲ್ನ 2ನೇ ಮಹಡಿಯಲ್ಲಿರುವ ಕೋಣೆಗಳಲ್ಲಿ 12 ಮಂದಿಯ ಮೃತದೇಹ ಪತ್ತೆಯಾಗಿದೆ.
ಕಾರ್ಬನ್ ಮೊನೋಕ್ಸೈಡ್ ಅನಿಲದಿಂದಾಗಿ ಈ ದುರಂತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಮೃತದೇಹಗಳ ಪರಿಶೀಲನೆ ನಡೆಸಲಾಗಿದ್ದು, ಮೇಲ್ನೋಟಕ್ಕೆ ಯಾವುದೇ ಗಾಯಗಳು ಅಥವಾ ಹಿಂಸಾಚಾರದ ಚಿಹ್ನೆಗಳು ಕಂಡುಬಂದಿಲ್ಲ ಎಂದು ಜಾರ್ಜಿಯಾದ ಆಂತರಿಕ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ.
ಮೃತಪಟ್ಟ ಎಲ್ಲ 12 ಜನರು ಸಹ ಭಾರತೀಯ ಪ್ರಜೆಗಳಾಗಿದ್ದು, ಇವರು ಭಾರತೀಯ ರೆಸ್ಟೋರೆಂಟ್ನ ಉದ್ಯೋಗಿಗಳು ಎಂದು ಟ್ಬಿಲಿಸಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ ವರದಿ ಮಾಡಿದೆ. ಆದಾಗ್ಯೂ ಮೃತರ ಪೈಕಿ ಓರ್ವ ತಮ್ಮ ದೇಶದ ಪ್ರಜೆ ಎಂದು ಜಾರ್ಜಿಯಾದ ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ವಿದ್ಯುತ್ ಜನರೇಟರ್ನಿಂದ ಕಾರ್ಬನ್ ಮೊನೋಕ್ಸೈಡ್ ಅನಿಲವು ಹರಡಿರಬಹುದು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ರಾತ್ರಿ ಮುಚ್ಚಿದ ಒಳಾಂಗಣ ಪ್ರದೇಶದಲ್ಲಿ ಜನರೇಟರ್ ಅನ್ನು ಆನ್ ಮಾಡಲಾಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ ಸಾವಿನ ನಿಖರ ಕಾರಣವನ್ನು ಕಂಡುಹಿಡಿಯಲು ವಿಧಿವಿಜ್ಞಾನ ಪರೀಕ್ಷೆ ನಡೆಯುತ್ತಿದೆ.
“ಜಾರ್ಜಿಯಾದ ಗುಡೌರಿಯಲ್ಲಿ 12 ಭಾರತೀಯ ಪ್ರಜೆಗಳ ಸಾವಿನ ಬಗ್ಗೆ ಮಾಹಿತಿ ಬಂದಿದೆ. ಮೃತ ಭಾರತೀಯ ಪ್ರಜೆಗಳ ವಿವರಗಳನ್ನು ಪಡೆಯಲು ರಾಯಭಾರ ಕಚೇರಿಯು ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ತಮ್ಮ ಬಳಿ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲಾಗುವುದು” ಎಂದು ಭಾರತೀಯ ರಾಯಭಾರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.