ಮಂಗಳೂರು: ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ಸುವರ್ಣ ಮಹೋತ್ಸವದ ಸಂಭ್ರಮ ‘ಸುವರ್ಣ ಪಥ’ ಕಾರ್ಯಕ್ರಮ ಡಿ. 14 ಮತ್ತು 15ರಂದು ನಗರದ ಟಿ.ಎಂ.ಎ. ಪೈ ಸಭಾಂಗಣದಲ್ಲಿ ನಡೆಯಲಿದೆ.
ಡಿ. 14ರಂದು ಬೆಳಗ್ಗೆ 10ಕ್ಕೆ ಸ್ಥಾಪಕರ ದಿನಾಚರಣೆ ನಡೆಯಲಿದೆ. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಉಪಸ್ಥಿತಿಯಲ್ಲಿ ಕೇರಳ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು, ಎಸ್.ಡಿ. ಎಂ. ಕಾನೂನು ಕಾಲೇಜಿನ ಹಳೆ ವಿದ್ಯಾರ್ಥಿ ನ್ಯಾ. ಮುರಳೀಕೃಷ್ಣ ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ಕಾನೂನು ವಿವಿ ಕುಲಪತಿ ಪ್ರೊ. ಬಸವರಾಜು ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ವಕೀಲ ಉದಯ ಹೊಳ್ಳ ಪ್ರಧಾನ ಭಾಷಣ ಮಾಡಲಿದ್ದಾರೆ. ಭಾರತದ ಸರ್ವೋಚ್ಚ ನ್ಯಾಯಾಲಯದ ಹಿರಿಯ ವಕೀಲ, ಕಾಲೇಜಿನ ಹಳೆ ವಿದ್ಯಾರ್ಥಿ ರೋಹಿತ್ ರಾವ್ ವಸ್ತು ಪ್ರದರ್ಶನ ಉದ್ಘಾಟಿಸಲಿದ್ದಾರೆ. ತಮಿಳುನಾಡಿನ ರಾಷ್ಟ್ರೀಯ ಕಾನೂನು ವಿವಿ ಕುಲಪತಿ ಪ್ರೊ.ವಿ. ನಾಗರಾಜ್ ಸ್ಥಾಪಕ ದಿನದ ಭಾಷಣ ಮಾಡಲಿದ್ದಾರೆ ಎಂದು ಕಾಲೇಜು ಪ್ರಾಂಶುಪಾಲ ಡಾ. ತಾರಾನಾಥ
ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಶಿಕ್ಷಣಕ್ಕೆ ಎಸ್ ಡಿಎಂ ಕಾನೂನು ಕಾಲೇಜು ಹೆಸರುವಾಸಿ.
1974ರಲ್ಲಿ ಮೈಸೂರು ವಿವಿಯ ಸಂಯೋಜನೆಗೆ ಒಳಪಟ್ಟು ಆರಂಭಗೊಂಡು ಇಂದು ದೇಶದ ಪ್ರತಿಷ್ಠಿತ 40 ಕಾನೂನು ಕಾಲೇಜುಗಳ ಹಾಗೂ ರಾಜ್ಯದ 5 ಉನ್ನತ ಕಾಲೇಜುಗಳ ಸಾಲಿನಲ್ಲಿ ಎಸ್‌ಡಿಎಂ ಕಾನೂನು ಕಾಲೇಜು ಸ್ಥಾನ ಪಡೆದುಕೊಂಡಿದೆ. ಗುಣಮಟ್ಟದ ಶಿಕ್ಷಣಕ್ಕೆ ಎಸ್‌ಡಿಎಂ ಕಾನೂನು ಕಾಲೇಜು ಹೆಸರುವಾಸಿಯಾಗಿದ್ದು, ರಾಜ್ಯದಲ್ಲೇ ಅತ್ಯಂತ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಏಕೈಕ ಕಾನೂನು ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅನೇಕ ಕಾನೂನು ಸಾಧಕರನ್ನು ದೇಶಕ್ಕೆ ನೀಡಿರುವ ಹಿರಿಮೆಯನ್ನು ಸಂಸ್ಥೆ ಹೊಂದಿದೆ. ಕಾನೂನು ಸಂಶೋಧನಾ ಕೇಂದ್ರ ಹೊಂದಿರುವ ರಾಜ್ಯದ ಏಕೈಕ ಕಾಲೇಜು. ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ ಕಾನೂನು ವಿವಿಯ ಮಟ್ಟದಲ್ಲಿ ನಿರಂತರ ಅಗ್ರಸ್ಥಾನ ಪಡೆಯುತ್ತಿದೆ ಎಂದು ಡಾ. ತಾರಾನಾಥ ತಿಳಿಸಿದರು.ಡಿ. 15ರಂದು ಬೆಳಗ್ಗೆ 10ಕ್ಕೆ ಪೂರ್ವ ವಿದ್ಯಾರ್ಥಿ ಪುನರ್ ಮಿಲನ ಕಾರ್ಯಕ್ರಮ ನಡೆಯಲಿದ್ದು, ಆಂಧ್ರ ಪ್ರದೇಶದ ರಾಜ್ಯಪಾಲ ಹಾಗೂ ಕಾಲೇಜಿನ ಪೂರ್ವ ವಿದ್ಯಾರ್ಥಿ ನ್ಯಾ. ಎಸ್. ಅಬ್ದುಲ್ ನಜೀರ್ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಉಪಸ್ಥಿತಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾರತ ಸರಕಾರದ ಆಟಾರ್ನಿ ಜನರಲ್ ಡಾ. ಆರ್. ವೆಂಕಟರಮಣಿ ಪ್ರಧಾನ ಭಾಷಣ ಮಾಡಲಿದ್ದಾರೆ. ವಿಧಾನಸಭೆ ಸ್ಪೀಕರ್ ಹಾಗೂ ಕಾಲೇಜಿನ ಪೂರ್ವ ವಿದ್ಯಾರ್ಥಿ ಯು.ಟಿ. ಖಾದರ್, ಭಾರತ ಸರಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಹಾಗೂ ಕಾಲೇಜಿನ ಪೂರ್ವ ವಿದ್ಯಾರ್ಥಿ ಕೆ.ಎಂ. ನಟರಾಜ್, ಕರ್ನಾಟಕ
ಸರಕಾರದ ಹೆಚ್ಚುವರಿ ಎಡ್ಡಕೇಟ್ ಜನರಲ್ ಹಾಗೂ ಕಾಲೇಜಿನ ಪೂರ್ವ ವಿದ್ಯಾರ್ಥಿ ಶಾಹುಲ್ ಹಮೀದ್ ರಹಮಾನ್ ಹಾಗೂ ಸುಪ್ರೀಂಕೋರ್ಟ್ ಹಿರಿಯ ವಕೀಲ ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿ ಶೇಖರ್ ದೇವಸ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಎರಡೂ ದಿನ ಯಕ್ಷಗಾನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ ಎಂದರು.ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ದೇವರಾಜ್ ಕೆ., ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಭಟ್, ಉಪಪ್ರಾಂಶುಪಾಲೆ ಬಾಲಿಕಾ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತ್ಯಾತ್ಮ ಉಪಸ್ಥಿತರಿದ್ದರು.