ಅಹಮದಾಬಾದ್ : ಗುಜರಾತಿನ ಅಮ್ರೇಲಿ ಜಿಲ್ಲೆಯಲ್ಲಿ ಅಪರೂಪದಲ್ಲಿ ಅಪರೂಪದ ವಿದ್ಯಮಾನ ನಡೆದ ವರದಿಯಾಗಿದೆ. ಮಾರುತಿ ಸುಜುಕಿ ವ್ಯಾಗನ್ ಆರ್ ಮಾಲೀಕರೊಬ್ಬರು ತಮ್ಮ ಪ್ರೀತಿಯ ಕಾರಿಗೆ ‘ಸಮಾಧಿ ಸಮಾರಂಭ’ ಅಥವಾ ಅಂತ್ಯಕ್ರಿಯೆ ನಡೆಸುವ ಮೂಲಕ ಸುದ್ದಿಯಾಗಿದ್ದಾರೆ…!
ಈ ಅಂತ್ಯಕ್ರಿಯೆಯಲ್ಲಿ ಬರೋಬ್ಬರಿ 1,500 ಜನರ ಬೃಹತ್ ಜನಸ್ತೋಮ ಸೇರಿತ್ತು. ಕಾರಿನ ಮಾಲೀಕರ ಪ್ರಕಾರ, ವ್ಯಾಗನ್ ಆರ್ 12 ವರ್ಷಗಳಿಂದ ಅವರ ಬಳಿ ಇದೆ. ಇದು ಅವರ “ಅದೃಷ್ಟದ ಕಾರು”. ಹೀಗಾಗಿ ಅವರು ಅದಕ್ಕೆ ಅದ್ಧೂರಿಯಾಗಿ ಅಂತ್ಯಕ್ರಿಯೆ ಕಾರ್ಯಕ್ರಮ ನೆರವೇರಿಸಿದ್ದಾರೆ. ಭವ್ಯ ಸಮಾಧಿ ಸಮಾರಂಭದಲ್ಲಿ ಧಾರ್ಮಿಕ ವ್ಯಕ್ತಿಗಳು ಮತ್ತು ಆಧ್ಯಾತ್ಮಿಕ ಮಾರ್ಗದರ್ಶಕರು ಸಹ ಪಾಲ್ಗೊಂಡಿದ್ದರು ಎಂದು ಹೇಳಲಾಗಿದೆ.
2012ರಲ್ಲಿ ಈ ಕಾರನ್ನು ಖರೀದಿಸಿದ್ದ ಸಂಜಯ ಪೋಲಾರ ಮತ್ತು ಅವರ ಕುಟುಂಬದವರು ಗುರುವಾರ ಲಾಠಿ ತಾಲೂಕಿನ ಪಾದರ್ಶಿಂಗ ಗ್ರಾಮದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸುಮಾರು 20 ವರ್ಷ ಹಳೆಯದಾದ ಈ ಕಾರಿಗೆ ಸಮಾಧಿ ಮಾಡಿದರು. ಇವರು ಈ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರಿನ ಎರಡನೇ ಮಾಲೀಕರು. ಕಾರಿನ ಅಂತ್ಯಕ್ರಿಯೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಕುಟುಂಬವು ಕಾರಿಗೆ ಹೂಮಾಲೆ ಮತ್ತು ಹೂವುಗಳನ್ನು ಹಾಕಿದ್ದನ್ನು ತೋರಿಸುತ್ತದೆ. ಟೈಮ್ಸ್ ಆಫ್ ಇಂಡಿಯಾ (TOI) ವರದಿಯ ಪ್ರಕಾರ, ಕುಟುಂಬದ ಕೃಷಿ ಭೂಮಿಯಲ್ಲಿ ವಾಹನವನ್ನು ಇರಿಸಲು 15 ಅಡಿ ಆಳದ ಹೊಂಡವನ್ನು ಸಿದ್ಧಪಡಿಸಲಾಗಿತ್ತು.
ಕಾರನ್ನು ಹಸಿರು ಬಟ್ಟೆಯಿಂದ ಹೊದಿಸಲಾಗಿತ್ತು ಮತ್ತು ನಂತರ ಪುರೋಹಿತರು ಮಂತ್ರಗಳನ್ನು ಪಠಿಸುವುದರೊಂದಿಗೆ ಅದಕ್ಕೆ ಧಾರ್ಮಿಕ ವಿಧಿ ವಿಧಾನದ ಮೂಲಕ ಅಂತ್ಯಕ್ರಿಯೆ ನಡೆಸಲಾಯಿತು.ನಂತರ ಕಾರು ಇರಿಸಿದ್ದ ಹೊಂಡವನ್ನು ಮಣ್ಣಿನಿಂದ ಮುಚ್ಚಲಾಯಿತು. ಕುಟುಂಬವು ಸಮಾಧಿ ಮಾಡಿದ ಕಾರಿನ ಮೇಲೆ ಮರಗಳನ್ನು ನೆಡಲು ಯೋಜಿಸಿದೆ. ಕುಟುಂಬದ ಮುಖ್ಯಸ್ಥರಾದ ಸಂಜಯ ಪೋಲಾರ ಅವರು ಈ ಕಾರಿನ ಬಗ್ಗೆ “ಭವಿಷ್ಯದ ಪೀಳಿಗೆಗೆ ಶಾಶ್ವತವಾದ ನೆನಪು” ಇರಲು ಬಯಸಿದ್ದೆ ಎಂದು ಹೇಳಿದ್ದಾರೆ. ಈ ಕಾರು ಅವರಿಗೆ “ಅದೃಷ್ಟವನ್ನು ತಂದಿದೆ” ಎಂದು ಅವರು ಹೇಳಿದ್ದಾರೆ.
“ನಾನು ಈ ಕಾರನ್ನು ಸುಮಾರು 12 ವರ್ಷಗಳ ಹಿಂದೆ ಖರೀದಿಸಿದೆ, ಮತ್ತು ಇದು ಕುಟುಂಬಕ್ಕೆ ಸಮೃದ್ಧಿಯನ್ನು ತಂದಿತು. ನನ್ನ ವ್ಯಾಪಾರವು ಅಭಿವೃದ್ಧಿ ಹೊಂದಿತು ಮತ್ತು ನನ್ನ ಕುಟುಂಬವು ಗೌರವವನ್ನು ಗಳಿಸಿತು. ಈ ಕಾರು ನಮಗೆ ಅದೃಷ್ಟ ಎಂದು ಸಾಬೀತಾಯಿತು. ಆದ್ದರಿಂದ, ಅದನ್ನು ಮಾರಾಟ ಮಾಡುವ ಬದಲು, ನಾನು ಅದನ್ನು ಶಾಸ್ತ್ರೋಕ್ತವಾಗಿ ಸಮಾಧಿ ಮಾಡಲು ನಿರ್ಧರಿಸಿದೆ. ಗೌರವಾರ್ಥವಾಗಿ ನನ್ನ ಜಮೀನಿನಲ್ಲಿ ಅದರ ಅಂತ್ಯಕ್ರಿಯೆ ನಡೆಸಿ ಸಮಾಧಿ ಮಾಡಿದ್ದೇನೆ ಎಂದು ಸಂಜಯ ಪೋಲಾರ ಹೇಳಿದ್ದಾರೆ.