ಬೆಂಗಳೂರು :
ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 19 ರಂದು ಶುಕ್ರವಾರ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಎರಡು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ಮೋದಿ, ರೋಡ್ ಶೋ ನಡೆಸುವ ಸಾಧ್ಯತೆ ಇದೆ.
ಖೇಲೋ ಇಂಡಿಯಾ ಹಾಗೂ ಏರೋನಾಟಿಕ್ಸ್ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ತೆರಳುವ ಸಂದರ್ಭದಲ್ಲಿ ಮೋದಿ ಅವರು ಬೆಂಗಳೂರಿಗೂ ಭೇಟಿ ನೀಡಲಿದ್ದಾರೆ. ಪ್ರಧಾನಿ ಭೇಟಿಯ ಕಾರಣ ಜನವರಿ 19ರಂದು ನಿಗದಿಯಾಗಿದ್ದ ಬಿಜೆಪಿ ಕಾರ್ಯಕಾರಿಣಿ ಸಭೆ ಮುಂದೂಡಿಕೆ ಮಾಡಲಾಗಿದೆ.
ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಂತೆಯೇ ಪ್ರಧಾನಿ ಬೆಂಗಳೂರಿಗೆ ಬರುತ್ತಿದ್ದಾರೆ. ಆದರೆ, ರೋಡ್ ಶೋ ಸಂಬಂಧ ಬಿಜೆಪಿಯ ನಾಯಕರು ಅಧಿಕೃತ ಹೇಳಿಕೆ ನೀಡಿಲ್ಲ.
ಪ್ರಧಾನಿಯವರು ಬೆಂಗಳೂರಿಗೆ ಭೇಟಿ ನೀಡುವ ಸಂಬಂಧ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಬಿ.ವೈ. ವಿಜಯೇಂದ್ರ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಸೋಮವಾರ ಸಂಜೆ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.
ಪ್ರಧಾನಿ ಕಾರ್ಯಾಲಯದಿಂದ ಹೆಚ್ಚಿನ ಮಾಹಿತಿಯ ನಿರೀಕ್ಷೆಯಲ್ಲಿ ಬಿಜೆಪಿ ರಾಜ್ಯ
ನಾಯಕರು ಇದ್ದಾರೆ ಎನ್ನಲಾಗಿದೆ.
ಈ ಹಿಂದೆ ಚಂದ್ರಯಾನ ಯೋಜನೆಯ ಯಶಸ್ಸಿನ ಬಳಿಕ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸುವುದಕ್ಕೆಂದೇ ಪ್ರಧಾನಿ ಬೆಂಗಳೂರಿಗೆ ಬಂದಿದ್ದರು. ಆ ಸಂದರ್ಭ ಪ್ರಧಾನಿಯವರು ರೋಡ್ ಶೋ ಮಾಡಲಿದ್ದಾರೆ ಎಂದು ರಾಜ್ಯ ಬಿಜೆಪಿ ನಾಯಕರು ಹೇಳಿಕೆ ನೀಡಿ ನಂತರ ಮುಜುಗರಕ್ಕೀಡಾದ ಸನ್ನಿವೇಶ ಸೃಷ್ಟಿಯಾಗಿತ್ತು. ಯಾಕೆಂದರೆ, ಬಿಜೆಪಿ ನಾಯಕರ ಹೇಳಿಕೆಗಳ ಬೆನ್ನಲ್ಲೇ ರೋಡ್ ಶೋ ಉದ್ದೇಶವಿಲ್ಲ ಎಂದು ಪ್ರಧಾನಿ ಕಾರ್ಯಾಲಯದಿಂದ ಮಾಹಿತಿ ಬಂದಿತ್ತು.