ಬೆಳಗಾವಿ: ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಯುವಕನಿಗೆ ಇಲ್ಲಿಯ ಪೋಕ್ಸೊ ನ್ಯಾಯಾಲಯ 20 ವರ್ಷ ಕಠಿಣ ಶಿಕ್ಷೆ ಮತ್ತು ₹10 ಸಾವಿರ ದಂಡ ವಿಧಿಸಿ ಬುಧವಾರ ಮತ್ತೊಂದು ಮಹತ್ವದ ತೀರ್ಪು ನೀಡಿದೆ.

ಬೆಳಗಾವಿಯ ರುಕ್ಮಿಣಿ ನಗರದ ನಿವಾಸಿ ಚಂದ್ರು ಮೋಹನ ಹರಿಜನ (26) ಶಿಕ್ಷೆಗೆ ಗುರಿಯಾದವ.

ಮದುವೆ ಆಗುವುದಾಗಿ ನಂಬಿಸಿ, ಪ್ರೀತಿ-ಪ್ರೇಮದ ನಾಟಕವಾಡಿ, 2019ರ ಜನವರಿ 14 ರಂದು ಬಾಲಕಿ ಒಡವೆಗಳನ್ನು ಬ್ಯಾಂಕಿನಲ್ಲಿ ಒತ್ತೆ ಇರಿಸಿ ಹಣ ಪಡೆದಿದ್ದ. ನಂತರ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಅಪಹರಿಸಿಕೊಂಡು ಹೋಗಿ, ದಾಬಾವೊಂದರ ಮಾಲಿಕರಿಗೆ ನಾವಿಬ್ಬರೂ ಪ್ರೀತಿಸಿ ಮದುವೆಯಾಗಿರುವುದಾಗಿ ಹೇಳಿ, ಅವರ ಬಳಿ ಆಶ್ರಯ ಕೋರಿದ್ದ. ಸುಮಾರು ಒಂದು ತಿಂಗಳ ಕಾಲ ಅದೇ ದಾಬಾದಲ್ಲಿ ಕೆಲಸ ಮಾಡಿ ಆತ ಅಲ್ಲಿಯೇ ಆಸರೆ ಪಡೆದಿದ್ದ.

ಬಾಲಕಿ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದ. ಈ ಸಂಬಂಧ ಬಾಲಕಿಯ ಪೋಷಕರು ಬೆಳಗಾವಿಯ ಮಾಳಮಾರುತಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆಗಿನ ಖಡಕ್ ತನಿಖಾಧಿಕಾರಿ ಬಿ.ಆ‌ರ್.ಗಡ್ಡೇಕರ ಅವರು, ಹೆಚ್ಚುವರಿ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇನ್ನು ಈ ಪ್ರಕರಣದ ಒಟ್ಟು 20 ಸಾಕ್ಷಿಗಳ ವಿಚಾರಣೆಯಿಂದ 38 ದಾಖಲೆಗಳು ಹಾಗೂ 15 ಮುದ್ದೆ ಮಾಲುಗಳ ಆಧಾರದ ಮೇಲೆ ಆರೋಪಿ ಚಂದ್ರು ಹರಿಜನ ಅತ್ಯಾಚಾರ ಎಸಗಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಸಿ.ಎಂ. ಪುಷ್ಪಲತಾ ಅವರು ಈ ಮಹತ್ವದ ತೀರ್ಪು ಪ್ರಕಟಿಸಿದರು. ಸಂತ್ರಸ್ತೆಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ₹1 ಲಕ್ಷ ಪರಿಹಾರ ಪಡೆಯುವಂತೆ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್‌.ವಿ.ಪಾಟೀಲ ವಾದ ಮಂಡಿಸಿದ್ದರು.