ಬೆಂಗಳೂರು : ನನ್ನ ಹಾಗೂ ಮುಖ್ಯಮಂತ್ರಿಗಳ ವಿರುದ್ಧ ಕೇರಳದಲ್ಲಿ ತಂತ್ರಿಗಳನ್ನು ಬಳಸಿಕೊಂಡು ಶತ್ರು ಭೈರವಿ ಯಾಗ” ಪ್ರಯೋಗ ನಡೆಸಲಾಗುತ್ತಿದೆ. ಈ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ನಾವು ನಂಬಿರುವ ಶಕ್ತಿ, ದೇವರು ಹಾಗೂ ಜನರ ಆಶೀರ್ವಾದ ನಮ್ಮನ್ನು ಕಾಪಾಡಲಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಜತೆ ಗುರುವಾರ ಮಾತನಾಡಿದ ಸಂದರ್ಭದಲ್ಲಿ ಶಿವಕುಮಾರ್ ಅವರು ಈ ವಿಷಯ ತಿಳಿಸಿದರು.

“ಕೇರಳದಲ್ಲಿ ನನ್ನ, ಮುಖ್ಯಮಂತ್ರಿಗಳ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ಯಾಗ ಮಾಡಲಾಗುತ್ತಿದೆ. ಕೇರಳದ ರಾಜರಾಜೇಶ್ವರಿ ದೇವಾಲಯದ ಆಸುಪಾಸಿನ ನಿರ್ಜನ ಪ್ರದೇಶದಲ್ಲಿ ಶತ್ರು ಸಂಹಾರ ಉದ್ದೇಶದ “ರಾಜಕಂಟಕ”, “ಮಾರಣ ಮೋಹನ ಸ್ತಂಭನ” ಯಾಗ ಪ್ರಯೋಗ ನಡೆಸಲಾಗುತ್ತಿದೆ. ಯಾರು ಈ ಯಾಗ ಮಾಡಿಸುತ್ತಿದ್ದಾರೆ ಎಂಬ ವಿವರವನ್ನು ಈ ಯಾಗದಲ್ಲಿ ಪಾಲ್ಗೊಂಡವರೇ ನಮಗೆ ತಿಳಿಸಿದ್ದಾರೆ ಎಂದರು.

ಅಘೋರಿಗಳ ಮೂಲಕ ಈ ಯಾಗ ನಡೆಯುತ್ತಿದೆ. ಇದಕ್ಕಾಗಿ ಪಂಚ ಬಲಿ ನೀಡಲಾಗುತ್ತಿದ್ದು, ಕೆಂಪು ಬಣ್ಣದ 21 ಮೇಕೆ, 3 ಎಮ್ಮೆ, ಕಪ್ಪು ಬಣ್ಣದ 21 ಕುರಿ ಹಾಗೂ 5 ಹಂದಿಗಳ ಬಲಿ ಮೂಲಕ ಈ ಮಾಂತ್ರಿಕಯಾಗ ನಡೆಯುತ್ತಿದೆ.

ಅವರ ಪ್ರಯತ್ನ ಅವರು ಮಾಡಲಿ, ಆ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಅವರವರ ನಂಬಿಕೆ ಅವರದು. ಹೀಗಾಗಿ ಇಂತಹ ಪ್ರಯತ್ನ ಮಾಡುತ್ತಾರೆ. ಅವರು ನಮ್ಮ ಮೇಲೆ ಏನೇ ಪ್ರಯೋಗ ಮಾಡಿದರೂ ನಾನು ನಂಬಿರುವ ಶಕ್ತಿ ನಮ್ಮನ್ನು ಕಾಪಾಡಲಿದೆ. ನಾನು ಪ್ರತಿನಿತ್ಯ ಮನೆಯಿಂದ ಹೊರಡುವ ಮುನ್ನ ದೇವರಿಗೆ ಒಂದು ನಿಮಿಷ ಕೈಮುಗಿದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.

ಈ ಪ್ರಯೋಗ ಮಾಡಿಸುತ್ತಿರುವುದು ಬಿಜೆಪಿಯವರಾ ಅಥವಾ ಜೆಡಿಎಸ್ ನವರಾ ಎಂದು ಕೇಳಿದಾಗ, “ಯಾರು ಮಾಡಿಸುತ್ತಿದ್ದಾರೆ ಎಂಬುದು ನಮಗೆ ಗೊತ್ತಿದೆ” ಎಂದರು.

“ನಿಂಬೆ ಹಣ್ಣು ನಿಪುಣರು” ಇದನ್ನು ಮಾಡಿಸುತ್ತಿದ್ದಾರೆಯೇ ಎಂದು ಮಾಧ್ಯಮದವರು ಕೇಳಿದಾಗ, “ನನ್ನ ಬಾಯಿಂದ ಹೇಳಿಸುವುದರ ಬದಲು ನೀವೇ ಈ ಬಗ್ಗೆ ತನಿಖಾ ವರದಿ ಮಾಡಿ ಎಂದರು.

ನಿಮ್ಮನ್ನೇ ಏಕೆ ಗುರಿ ಮಾಡುತ್ತಾರೆ, ನಿಮ್ಮ ರಕ್ಷಣೆಗಾಗಿ ನೀವೂ ವಾಪಾಸ್ ಏನಾದರೂ ಮಾಡುತ್ತಿರಾ ಎಂದು ಕೇಳಿದಾಗ, “ಯಾವಾಗಲೂ ರಾಜಕೀಯವಾಗಿ ಚಟುವಟಿಕೆಯಿಂದ ಇರುವವರು ವಿರೋಧಿಗಳ ಕೆಂಗಣ್ಣಿಗೆ ಗುರಿ ಆಗುತ್ತಾರೆ. ಅವರು ಮಾಡೋದು ಮಾಡಲಿ, ನನ್ನ ಶಕ್ತಿ ನನ್ನ ರಕ್ಷಣೆಗೆ ಇದೆ. ನಾನು ಅಂತಹ ಯಾವುದೇ ಚಟುವಟಿಕೆ ಮಾಡುವುದಿಲ್ಲ. ದೇವರನ್ನು ಮಾತ್ರ ನಂಬಿದ್ದೇನೆ” ಎಂದರು.