ಬೆಳಗಾವಿ: ಪಂಚಮಸಾಲಿ ಸಮಾಜದವರು ಶಾಂತಿಯುತವಾಗಿ ಹೋರಾಟ ನಡೆಸಿದ್ದೇವು. ಸಾರ್ವಜನಿಕರ ವೇಷದಲ್ಲಿ ಬಂದ ಪೊಲೀಸರೇ ನಮ್ಮವರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಸಮವಸ್ತ್ರದಲ್ಲಿದ್ದವರು ಲಾಠಿ ಚಾರ್ಜ್ ನಡೆಸಿದ್ದಾರೆ. ಇದು ವ್ಯವಸ್ಥಿತ ಷಡ್ಯಂತ್ರ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆರೋಪಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,
ಈವರೆಗಿನ ಯಾವುದೇ ಸರ್ಕಾರ ಲಿಂಗಾಯತರ ಮೇಲೆ ದಾಳಿ ಮಾಡಿರಲಿಲ್ಲ. ಸಿದ್ದರಾಮಯ್ಯ ಅವರೇ ಲಿಂಗಾಯತರ ಮೇಲೆ ಲಾಠಿ ಎತ್ತಿದ ಮೊದಲ ಮುಖ್ಯಮಂತ್ರಿ. ಇವರೊಬ್ಬ ಲಿಂಗಾಯತ ವಿರೋಧಿ ನಾಯಕ ಎಂದು ದೂರಿದರು.
ಹೋರಾಟಗಾರರಿಗೆ ರಕ್ಷಣೆ ನೀಡಬೇಕಿದ್ದ ಪೊಲೀಸರೇ ಕಲ್ಲು ತೂರಿದ್ದಾರೆ. ಇದರಿಂದ ಹಲವರು ಗಾಯಗೊಂಡಿದ್ದಾರೆ. ಸಾಲದೆಂಬಂತೆ ಕಲ್ಲು ತೂರಿದ ಆರೋಪವನ್ನೂ ನಮ್ಮವರ ಮೇಲೆ ಹೊರಿಸಿ, ಪ್ರಕರಣ ದಾಖಲಿಸಿದ್ದಾರೆ ಎಂದು ಅವರು ದೂರಿದರು.ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದರು. ಆದರೆ,ಅವರ ಅನುಯಾಯಿಗಳ ಮೇಲೆಯೇ ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಸರ್ವಾಧಿಕಾರಿಯಂತೆ ನಡೆದುಕೊಂಡಿದ್ದಾರೆ ಎಂದರು.
ನಾಲ್ಕು ವರ್ಷದಿಂದ ಬಸವಣ್ಣನಂತೆ ಶಾಂತಿಯುತ ಹೋರಾಟ ಮಾಡಿದ್ದೇವೆ. ಇನ್ನು ಮುಂದೆ ರಾಣಿ ಚನ್ನಮ್ಮನಂತೆ ಕ್ರಾಂತಿಯಿಂದ ಹೋರಾಡುತ್ತೇವೆ. ಧೈರ್ಯವಿದ್ದವರು ನಮ್ಮನ್ನು ತಡೆಯಿರಿ ಎಂದು ಸ್ವಾಮೀಜಿ ಸವಾಲು ಎಸೆದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ 6 ಲಕ್ಷಕ್ಕೂ ಹೆಚ್ಚು ಜನ ಇದೇ ಸುವರ್ಣ ಸೌಧದ ಸ್ಥಳದಲ್ಲಿ ಹೋರಾಟ ಮಾಡಿದ್ದೇವು. ಆಗ ಎಡಿಜಿಪಿ ಅಲೋಕ್‌ಕುಮಾರ್ ಸಮಾಧಾನದಿಂದ ಎಲ್ಲ ನಿಯಂತ್ರಣ ಮಾಡಿದ್ದರು. ಈಗಿನ ಎಡಿಜಿಪಿ, ಕಮಿಷನರ್‌ಗಳೇ ಲಾಠಿ ಹಿಡಿದು ಹಲ್ಲೆ ಮಾಡಿದ್ದಾರೆ’ ಎಂದರು.
ಹೋರಾಟ ನಿಯಂತ್ರಣ ತಪ್ಪುವ ಸಾಧ್ಯತೆ ಇದ್ದರೆ ಜಲಫಿರಂಗಿ ಬಳಸಬಹುದಿತ್ತು. ಲಾಠಿಚಾರ್ಜ್ ಮಾಡಲೇಬೇಕು ಎಂದು ಏಕೆ ನಿರ್ಧರಿಸಿದರು? ಸ್ವತಃ ಮುಖ್ಯಮಂತ್ರಿಯೇ ಲಾಠಿಚಾರ್ಜ್‌ಗೆ ಆದೇಶ ನೀಡಿದ್ದಾರೆ. ಅವರು ಆದೇಶ ನೀಡಿಲ್ಲ ಎಂದಾದರೆ ಸಂಬಂಧಿಸಿದ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಿ ಎಂದು ಹೇಳಿದರು.
ಇದು ಸಮಾಜದ ಮೇಲಿನ ದೌರ್ಜನ್ಯವೇ ಸರಿ. ನಮ್ಮವರನ್ನೇ ಹೊಡೆದು ಅವರ ಮೇಲೆಯೇ ಪ್ರಕರಣ ದಾಖಲಿಸಿದ್ದಾರೆ. ಕೂಡಲೇ ಎಲ್ಲರ ಮೇಲಿನ ಪ್ರಕರಣ ಹಿಂಪಡೆಯಬೇಕು. ಇಲ್ಲದಿದ್ದರೆ ಡಿ.16ರಂದು ಇಡೀ ದಿನ ಸುವರ್ಣ ವಿಧಾನಸೌಧದ ಎದುರಿನಲ್ಲಿ ಧರಣಿ ಮಾಡುತ್ತೇನೆ ಎಂದರು.
ಹೋರಾಟಗಾರರನ್ನು ಮಾತುಕತೆಗೆ ಆಹ್ವಾನಿಸಿದರೂ ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದ ಶುದ್ಧ ಸುಳ್ಳು. ನಾವು ಇಡೀ ದಿನ ಕಾದರೂ ಅವರು ಸ್ಥಳಕ್ಕೆ ಬರಲಿಲ್ಲ. ನಾವೇ ಭೇಟಿಯಾಗಲು ಹೊರಟರೆ ಲಾಠಿಚಾರ್ಜ್ ಮಾಡಿಸಿದ್ದಾರೆ. ಸಿದ್ದರಾಮಯ್ಯ ಪರವಾಗಿ ಬಂದಿದ್ದ ನಾಲ್ವರು ಸಚಿವರೂ ನಮ್ಮನ್ನು ಮಾತುಕತೆಗೆ ಆಹ್ವಾನಿಸಿಲ್ಲ ಎಂದರು.
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲು ಆಗದಿದ್ದರೆ; ಈ ಹಿಂದೆ ಬಿಜೆಪಿ ಸರ್ಕಾರ ನೀಡಿದ್ದ 2ಡಿ ಮೀಸಲಾತಿಯನ್ನಾದರೂ ಸದ್ಯಕ್ಕೆ ಜಾರಿಗೆ ಮಾಡಬೇಕು ಎಂದು ಆಗ್ರಹಿಸಿದರು.
ಸರ್ಕಾರ ಏನೇ ಮಾಡಿದರೂ ಹೋರಾಟ ನಿಲ್ಲಿಸುವುದಿಲ್ಲ. ಡಿ.12ರಂದು ಹತ್ತರಗಿ, ಹಿರೇಬಾಗೇವಾಡಿ ಟೋಲ್‌ನಾಕಾ ಬಳಿ ಹೆದ್ದಾರಿ ತಡೆದು ಪ್ರತಿಭಟನೆ ಮಾಡುತ್ತೇವೆ ಎಂದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಪಂಚಮಸಾಲಿ ಸಮಾಜದ ಪ್ರಭಾರಿ ಜಿಲ್ಲಾ ಘಟಕದ ಅಧ್ಯಕ್ಷ ನಿಂಗಪ್ಪ ಪಿರೋಜಿ, ರೋಹಿಣಿ ಪಾಟೀಲ, ಮೃಣಾಲ್ ಹೆಬ್ಬಾಳಕರ, ಕಾಕಾಗೌಡ ಪಾಟೀಲ, ಗುಂಡು ಪಾಟೀಲ, ಆರ್.ಪಿ.ಪಾಟೀಲ ಉಪಸ್ಥಿತರಿದ್ದರು.