ನವದೆಹಲಿ: ಉತ್ತರ ಪ್ರದೇಶದ ಕಾಸ್ಗಂಜ್ನಲ್ಲಿ ಶುಕ್ರವಾರ ಟ್ರ್ಯಾಕ್ಟರ್ ಟ್ರಾಲಿಯೊಂದು ಹೊಂಡಕ್ಕೆ ಬಿದ್ದ ಪರಿಣಾಮ ಏಳು ಮಕ್ಕಳು ಸೇರಿದಂತೆ ಕನಿಷ್ಠ 22 ಜನರು ಸಾವಿಗೀಡಾಗಿದ್ದಾರೆ. ವರದಿಗಳ ಪ್ರಕಾರ, ಟ್ರ್ಯಾಕ್ಟರ್ ಟ್ರಾಲಿಯಲ್ಲಿದ್ದ ಜನರು ‘ಮಾಘ ಪೂರ್ಣಿಮಾ’ ಸಂದರ್ಭದಲ್ಲಿ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಲು ಹೋಗುತ್ತಿದ್ದರು.
ಕಾಸ್ಗಂಜ್ನ ಪಟಿಯಾಲಿ ದರಿಯಾವ್ಗಂಜ್ ರಸ್ತೆಯಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮೃತರಲ್ಲಿ 13 ಮಹಿಳೆಯರು, ಎಂಟು ಮಕ್ಕಳು ಮತ್ತು ಒಬ್ಬ ಪುರುಷ ಸೇರಿದ್ದಾರೆ.ಟ್ರಾಕ್ಟರ್ ಚಾಲಕ ಮತ್ತೊಂದು ವಾಹನವನ್ನು ಹಿಂದಿಕ್ಕಲು ಪ್ರಯತ್ನಿಸುತ್ತಿದ್ದಾಗ ಟ್ರಾಕ್ಟರ್ ಟ್ರಾಲಿ ಪಲ್ಟಿಯಾಗಿ 7-8 ಅಡಿ ಆಳದ ಕೊಳಕ್ಕೆ ಬಿದ್ದಿದೆ ಎಂದು ಅಲಿಗಢ ರೇಂಜ್ ಇನ್ಸ್ಪೆಕ್ಟರ್ ಜನರಲ್ ಶಲಭ ಮಾಥುರ ಹೇಳಿದ್ದಾರೆ. ಘಟನೆ ನಡೆದ ಕೂಡಲೇ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
“ಕಾಸ್ಗಂಜ್ ಅಪಘಾತದಲ್ಲಿ 22 ಸಾವುಗಳು ವರದಿಯಾಗಿವೆ, ಐದು ಜನರನ್ನು ಇಲ್ಲಿ ದಾಖಲಿಸಲಾಗಿದೆ. ಸುಮಾರು 10 ಜನರು ಗಾಯಗೊಂಡಿದ್ದಾರೆ” ಎಂದು ಕಾಸ್ಗಂಜ್ನ ಮುಖ್ಯ ವೈದ್ಯಕೀಯ ಅಧಿಕಾರಿ ರಾಜೀವ ಅಗರವಾಲ್ ಖಚಿತಪಡಿಸಿದ್ದಾರೆ. ಘಟನೆ ನಡೆದಾಗ ಟ್ರ್ಯಾಕ್ಟರ್ನಲ್ಲಿ ಸುಮಾರು 30 ಮಂದಿ ಇದ್ದರು ಎಂದು ಕಸ್ಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸುಧಾ ವರ್ಮಾ ತಿಳಿಸಿದ್ದಾರೆ. ಇಟಾಹ್ನ ಕೆಲವು ಭಕ್ತರು ಇಂದು ಬೆಳಗ್ಗೆ ಕಾಸ್ಗಂಜ್ಗೆ ಪ್ರಯಾಣಿಸುತ್ತಿದ್ದಾಗ ಟ್ರಾಲಿ ಪಲ್ಟಿಯಾಗಿದೆ. ಅಪಘಾತ ಸಂಭವಿಸಿದಾಗ ಸುಮಾರು 25-30 ಜನರು ಟ್ರಾಲಿಯಲ್ಲಿ ಕುಳಿತಿದ್ದರು. ಗ್ರಾಮಸ್ಥರು ಸಂತ್ರಸ್ತರನ್ನು ರಕ್ಷಿಸಿದ್ದಾರೆ,” ವರ್ಮಾ ಹೇಳಿದರು.
ಪರಿಹಾರ ಘೋಷಿಸಿದ ಸಿಎಂ ಯೋಗಿ
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಅಪಘಾತದಲ್ಲಿ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ತಲಾ 50,000 ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ಸಾವಿಗೆ ಸಂತಾಪ ಸೂಚಿಸಿದ ಅವರು, ಗಾಯಾಳುಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.