ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ-ಪಾಕಿಸ್ತಾನ ಯುದ್ಧದ ಬೆದರಿಕೆಯ ನಡುವೆ, ಆರ್ಥಿಕ ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನದ ಹಣದುಬ್ಬರವು ನಿರ್ಣಾಯಕ ಮಟ್ಟವನ್ನು ತಲುಪಿದೆ. ಆಹಾರದ ಬೆಲೆಗಳು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದ್ದು, ಮಾಧ್ಯಮ ವರದಿಗಳ ಪ್ರಕಾರ, ಅಕ್ಕಿ, ಹಿಟ್ಟು, ತರಕಾರಿಗಳು, ಹಣ್ಣುಗಳು ಮತ್ತು ಕೋಳಿಮಾಂಸದಂತಹ ಅಗತ್ಯ ಆಹಾರ-ವಸ್ತುಗಳ ಬೆಲೆಗಳು ತೀವ್ರವಾಗಿ ಏರಿವೆ.
ಪಹಲ್ಗಾಮ್ ದಾಳಿಯ ನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಭಾರತ-ಪಾಕಿಸ್ತಾನ ದ್ವಿಪಕ್ಷೀಯ ವ್ಯಾಪಾರವನ್ನು ನಿಲ್ಲಿಸಿದ್ದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ವಿವರಗಳ ಪ್ರಕಾರ, ಕಳೆದ ಹಣಕಾಸು ವರ್ಷದಲ್ಲಿ ಭಾರತ-ಪಾಕಿಸ್ತಾನ ದ್ವಿಪಕ್ಷೀಯ ವ್ಯಾಪಾರವು 3838.53 ಕೋಟಿ ರೂ.ಗಳ ಮೌಲ್ಯದ್ದಾಗಿದ್ದು, ಹೆಚ್ಚಿನ ವ್ಯಾಪಾರವು ಪಂಜಾಬ್‌ನ ಅಮೃತಸರದಲ್ಲಿರುವ ಈಗ ಮುಚ್ಚಲ್ಪಟ್ಟ ಅಟ್ಟಾರಿ-ವಾಘಾ ಗಡಿಯ ಮೂಲಕ ನಡೆದಿದೆ. ಭಾರತದ ಭೂ ಬಂದರು ಪ್ರಾಧಿಕಾರದ ಪ್ರಕಾರ, ಈ ಅಂಕಿ ಅಂಶವು ಅಫ್ಘಾನಿಸ್ತಾನ ಮತ್ತು ಇತರ ದೇಶಗಳಿಂದ ಪಾಕಿಸ್ತಾನದ ಮೂಲಕ ಭಾರತಕ್ಕೆ ಬರುವ ಆಮದುಗಳನ್ನು ಸಹ ಒಳಗೊಂಡಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತವು ಅಟ್ಟಾರಿ-ವಾಘಾ ಗಡಿಯನ್ನು ಮುಚ್ಚಿದೆ. ಹೀಗಾಗಿ ಈ ಲಾಭದಾಯಕ ವ್ಯಾಪಾರ ಮಾರ್ಗವನ್ನು ಸ್ಥಗಿತಗೊಂಡಿದೆ, ಇದು ಈಗಾಗಲೇ ಕುಸಿಯುತ್ತಿರುವ ಪಾಕಿಸ್ತಾನದ ಆರ್ಥಿಕತೆಗೆ ಇದು ಮತ್ತಷ್ಟು ಹಾನಿಯನ್ನುಂಟುಮಾಡಬಹುದು ಎಂದು ತರ್ಕಿಸಲಾಗಿದೆ.ಪಾಕಿಸ್ತಾನದಲ್ಲಿ ಔಷಧಿಗಳು ಮತ್ತು ಇತರ ವಸ್ತುಗಳ ಕೊರತೆ ಸಾಧ್ಯತೆ….
ಭಾರತವು ದ್ವಿಪಕ್ಷೀಯ ವ್ಯಾಪಾರವನ್ನು ಸ್ಥಗಿತಗೊಳಿಸುವುದರಿಂದ ಪಾಕಿಸ್ತಾನದ ಆರ್ಥಿಕತೆಗೆ ಹಾನಿ ಮಾಡುವುದರ ಜೊತೆಗೆ, ಔಷಧಿಗಳು ಮತ್ತು ಆಹಾರ ಪದಾರ್ಥಗಳು ಸೇರಿದಂತೆ ಅಗತ್ಯ ವಸ್ತುಗಳ ಕೊರತೆ ಉಂಟಾಗಲಿದೆ ಎಂದು ಹೇಳಲಾಗುತ್ತಿದೆ. ಭಾರತವು ಜಿಪ್ಸಮ್ ಮತ್ತು ಕಲ್ಲು ಉಪ್ಪನ್ನು ಹೊರತುಪಡಿಸಿ ನಿರ್ಣಾಯಕ ಹಾಗೂ ತುರ್ತು ಅಗತ್ಯದ ಔಷಧಗಳು, ರಾಸಾಯನಿಕಗಳು, ಹಣ್ಣುಗಳು, ತರಕಾರಿಗಳು, ಕೋಳಿ ಆಹಾರ ಮತ್ತು ಒಣ ಹಣ್ಣುಗಳನ್ನು ಪಾಕಿಸ್ತಾನಕ್ಕೆ ಬೃಹತ್ ಪ್ರಮಾಣದಲ್ಲಿ ರಫ್ತು ಮಾಡುತ್ತದೆ.
ಗಡಿಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದ್ದು ಮತ್ತು ಭಾರತದೊಂದಿಗಿನ ವ್ಯಾಪಾರವನ್ನು ಸ್ಥಗಿತಗೊಳಿಸಿರುವುದರಿಂದ ಪಾಕಿಸ್ತಾನವು ಔಷಧಿಗಳು ಮತ್ತು ಇತರ ಅಗತ್ಯ ವಸ್ತುಗಳ ತೀವ್ರ ಕೊರತೆಯನ್ನು ಎದುರಿಸಲಿದೆ ಎಂದು ತಜ್ಞರು ನಂಬುತ್ತಾರೆ. ಅಲ್ಲದೆ, ನಿಗದಿತ ಪ್ರಮಾಣಕ್ಕಿಂತ ಕಡಿಮೆ ಪೂರೈಕೆಯಿಂದಾಗಿ ಈ ಸರಕುಗಳ ಬೆಲೆಗಳು ತೀವ್ರವಾಗಿ ಏರುತ್ತವೆ, ಇದು ಪಾಕಿಸ್ತಾನದಲ್ಲಿ ಮತ್ತಷ್ಟು ಹಣದುಬ್ಬರಕ್ಕೆ ಕಾರಣವಾಗಬಹುದು ಎಂಬುದು ಮಾರುಕಟ್ಟೆ ಪರಿಣತರ ಅಭಿಪ್ರಾಯ.
ವರದಿಗಳ ಪ್ರಕಾರ, ಭಾರತದೊಂದಿಗಿನ ವ್ಯಾಪಾರ ಸಂಬಂಧಗಳನ್ನು ಸ್ಥಗಿತಗೊಳಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನದ ಆರೋಗ್ಯ ಅಧಿಕಾರಿಗಳು ಔಷಧ ಸರಬರಾಜುಗಳನ್ನು ಪಡೆಯಲು ತುರ್ತು ಕ್ರಮಗಳನ್ನು ಪ್ರಾರಂಭಿಸಿದ್ದಾರೆ. ಪಾಕಿಸ್ತಾನವು ತನ್ನ ಔಷಧೀಯ ಕಚ್ಚಾ ವಸ್ತುಗಳಲ್ಲಿ ಸುಮಾರು 30% ರಿಂದ 40% ರಷ್ಟನ್ನು ಭಾರತದಿಂದ ಆಮದು ಮಾಡಿಕೊಳ್ಳುತ್ತದೆ ಎಂದು ವರದಿಗಳು ಹೇಳುತ್ತವೆ.ಪಾಕಿಸ್ತಾನವನ್ನು ಕುಗ್ಗಿಸಿದ ಹಣದುಬ್ಬರ
ವಿವಿಧ ವರದಿಗಳ ಪ್ರಕಾರ ಪಾಕಿಸ್ತಾನದಲ್ಲಿ ಆಹಾರ ಅಗತ್ಯ ವಸ್ತುಗಳ ಬೆಲೆಗಳು ವಿಪರೀತ ಹೆಚ್ಚಳವಾಗಿದೆ. ಈಗ ಭಾರತದ ಜೊತೆಗೆ ಎಲ್ಲ ತರಹದ ವ್ಯಾಪಾರ-ವ್ಯವಹಾರ ಸ್ಥಗಿತಗೊಳಿಸಿದ್ದರಿಂದ ಅದು ಇನ್ನಷ್ಟು ಹೆಚ್ಚಳವಾಗುವ ಆತಂಕ ಎದುರಾಗಿದೆ.
ವಸ್ತುವಿನ ಬೆಲೆ -ಪಾಕಿಸ್ತಾನದ ರೂಪಾಯಿಗಳಲ್ಲಿ (PKR)
ಅಕ್ಕಿ -339.56 ಪಾಕಿಸ್ತಾನಿ ರೂಪಾಯಿ /ಕೆಜಿ
ಕೋಳಿ ಮಾಂಸ- 798.89 ಪಾಕಿಸ್ತಾನಿ ರೂಪಾಯಿ/ಕೆಜಿ
ಮೊಟ್ಟೆಗಳು-332 ಪಾಕಿಸ್ತಾನಿ ರೂಪಾಯಿ/ಡಜನ್
ಸೇಬು ಹಣ್ಣು- 288 ಪಾಕಿಸ್ತಾನಿ ರೂಪಾಯಿ/ಕೆಜಿ
ಹಾಲು-224 ಪಾಕಿಸ್ತಾನಿ ರೂಪಾಯಿ/ಲೀಟರ್
ಬ್ರೆಡ್ -161.28 ಪಾಕಿಸ್ತಾನಿ ರೂಪಾಯಿ/500 ಗ್ರಾಂ
ಬಾಳೆಹಣ್ಣು-176 ಪಾಕಿಸ್ತಾನಿ ರೂಪಾಯಿ/ಕೆಜಿ
ಟೊಮೆಟೊ-150 ಪಾಕಿಸ್ತಾನಿ ರೂಪಾಯಿ/ಕೆಜಿ
ಆಲೂಗಡ್ಡೆ-105 ಪಾಕಿಸ್ತಾನಿ ರೂಪಾಯಿ/ಕೆಜಿ
ಕಿತ್ತಳೆ ಹಣ್ಣು- 216 ಪಾಕಿಸ್ತಾನಿ ರೂಪಾಯಿ/ಕೆಜಿ1 ಕೋಟಿಗೂ ಹೆಚ್ಚು ಜನರು ಹಸಿವಿನಿಂದ ಬಳಲುತ್ತಿದ್ದಾರೆ…
ಏತನ್ಮಧ್ಯೆ, ಇತ್ತೀಚಿನ ವಿಶ್ವಬ್ಯಾಂಕ್ ವರದಿಯು ಭೀಕರ ಮುನ್ಸೂಚನೆಯನ್ನು ನೀಡಿದ್ದು, ಪ್ರಸ್ತುತ ಹಣಕಾಸು ವರ್ಷದಲ್ಲಿ ತೀವ್ರ ಆಹಾರ ಅಭದ್ರತೆ ಮತ್ತು ಬಡತನದ ಮಟ್ಟದಲ್ಲಿ ತೀವ್ರ ಏರಿಕೆಯ ಅಪಾಯದಿಂದಾಗಿ 1 ಕೋಟಿಗಿಂತಲೂ ಹೆಚ್ಚು ಪಾಕಿಸ್ತಾನಿಗಳು ಹಸಿವಿನಿಂದ ಬಳಲುತ್ತಿದ್ದಾರೆ ಎಂದು ಹೇಳಿದೆ.
ವರದಿಯ ಪ್ರಕಾರ, ಹವಾಮಾನ ಪರಿಸ್ಥಿತಿಗಳು ಭತ್ತ ಮತ್ತು ಜೋಳದಂತಹ ಪ್ರಮುಖ ಬೆಳೆಗಳ ಕೃಷಿ ಉತ್ಪಾದನೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ, ಇದರಿಂದಾಗಿ ಪಾಕಿಸ್ತಾನದಲ್ಲಿ ಆರ್ಥಿಕ ವರ್ಷ 2025-26ರಲ್ಲಿ ತೀವ್ರ ಆಹಾರ ಅಭದ್ರತೆಯನ್ನು ಎದುರಿಸಬೇಕಾಗಬಹುದು ಎಂದು ಹೇಳಿದೆ.
ವಿಶ್ವಬ್ಯಾಂಕ್ ವರದಿಯು ದೇಶದ ಪ್ರಸ್ತುತ ಆರ್ಥಿಕ ನೀತಿಗಳು ಮತ್ತು ಸಾಲವನ್ನು ಉಲ್ಲೇಖಿಸಿ ಪಾಕಿಸ್ತಾನದ ಆರ್ಥಿಕ ಬೆಳವಣಿಗೆಯ ಮುನ್ಸೂಚನೆಯನ್ನು ಶೇಕಡಾ 2.7 ಕ್ಕೆ ಪರಿಷ್ಕರಿಸಿದೆ. ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ಸರ್ಕಾರವು ತನ್ನ ವಾರ್ಷಿಕ ಬಜೆಟ್ ಕೊರತೆಯ ಗುರಿಯನ್ನು ಪೂರೈಸಲು ವಿಫಲವಾಗಬಹುದು, ಆದರೆ ಇದೇ ವೇಳೆ ಪಾಕಿಸ್ತಾನದ ಸಾಲ-ಜಿಡಿಪಿ ಅನುಪಾತವು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿ ಎಚ್ಚರಿಸಿದೆ.
ಈ ವರದಿಯು ಸುಮಾರು 2% ರಷ್ಟು ಜನಸಂಖ್ಯಾ ಬೆಳವಣಿಗೆಯೊಂದಿಗೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಸುಮಾರು 1.9 ಕೋಟಿ ಜನರು ತೀವ್ರ ಬಡತನ ಅನುಭವಿಸಬೇಕಾಗಬಹುದು ಎಂದು ಮುನ್ಸೂಚನೆ ನೀಡಿದೆ. ಹೆಚ್ಚುವರಿಯಾಗಿ, ಪಾಕಿಸ್ತಾನವು 49.7% ಉದ್ಯೋಗ-ಜನಸಂಖ್ಯೆ ಅನುಪಾತವನ್ನು ಹೊಂದಿರುವ ಕಾರ್ಮಿಕ ಮಾರುಕಟ್ಟೆಯಲ್ಲಿ ಮಹಿಳೆಯರು ಮತ್ತು ಯುವಕರ ಅತ್ಯಂತ ಕಡಿಮೆ ಭಾಗವಹಿಸುವಿಕೆಯನ್ನು ವರದಿಯು ಎತ್ತಿ ತೋರಿಸಿದೆ.