ಲಕ್ನೋ : ‘ಹೆಲ್ಮೆಟ್ ಇಲ್ಲ, ಪೆಟ್ರೋಲ್ ಇಲ್ಲ’ ನಿಯಮವನ್ನು ಅನುಸರಿಸಲು ಪೆಟ್ರೋಲ್‌ ಪಂಪ್ ಸಿಬ್ಬಂದಿ ಹೇಳಿದ ನಂತರ ಇದು ಯಾರೂ ಊಹಿಸಿರದ ಪರಿಣಾಮಗಳಿಗೆ ಕಾರಣವಾದ ಘಟನೆ ಉತ್ತರ ಪ್ರದೇಶದ ಹಾಪುರ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ ಎಂದು ವರದಿಯಾಗಿದೆ. ಹೆಲ್ಮೆಟ್‌ ಇಲ್ಲದ ಕಾರಣಕ್ಕೆ ಪೆಟ್ರೋಲ್‌ ಪಂಪ್‌ನವರು ಇಂಧನ ನಿರಾಕರಿಸಿದ ನಂತರ ವಿದ್ಯುತ್‌ ಇಲಾಖೆಯ ನೌಕರನಾಗಿದ್ದ ಬೈಕ್ ಸವಾರ ಪೆಟ್ರೋಲ್‌ ಪಂಪ್‌ನ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಮೂಲಕ ಸೇಡು ತೀರಿಸಿಕೊಂಡಿದ್ದಾನೆ…!

ಉತ್ತರ ಪ್ರದೇಶದ ಹಾಪುರ ಜಿಲ್ಲೆಯಲ್ಲಿ ಸೋಮವಾರ ಘಟನೆ ನಡೆದಿದ್ದು, ರಸ್ತೆ ಅಪಘಾತದ ಸಾವುನೋವುಗಳನ್ನು ಕಡಿಮೆ ಮಾಡುವ ಉದ್ದೇಶದ ಅಭಿಯಾನದ ಅಂಗವಾಗಿ ‘ನೋ ಹೆಲ್ಮೆಟ್, ನೋ ಪೆಟ್ರೋಲ್’ ನಿಯಮವನ್ನು ಜಾರಿಗೊಳಿಸುವಂತೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರವು ಜಿಲ್ಲೆಯ ಅಧಿಕಾರಿಗಳಿಗೆ ಸೂಚಿಸಿದೆ. ಅದರ ನಂತರ ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಇಂಧನ ನಿರಾಕರಿಸುವಂತೆ ಪೆಟ್ರೋಲ್ ಪಂಪ್ ಮಾಲೀಕರಿಗೆ ಸೂಚಿಸಲಾಗಿದೆ.

ಪೆಟ್ರೋಲ್ ಪಂಪ್ ಸಿಬ್ಬಂದಿ ಪ್ರಕಾರ, ವಿದ್ಯುತ್ ಸರಬರಾಜು ವಿಭಾಗದ ಲೈನ್‌ಮ್ಯಾನ್ ಸೋಮವಾರ ತನ್ನ ಬೈಕ್‌ಗೆ ಇಂಧನ ತುಂಬಲು ಬಂದಿದ್ದರು. ಆದರೆ, ಅವರು ಹೆಲ್ಮೆಟ್ ಧರಿಸಿರಲಿಲ್ಲ. ಹೆಲ್ಮೆಟ್ ಧರಿಸದ ಯಾವುದೇ ಬೈಕ್ ಸವಾರರಿಗೆ ಇಂಧನ ನಿರಾಕರಿಸುವಂತೆ ಪೆಟ್ರೋಲ್ ಪಂಪ್ ಸಿಬ್ಬಂದಿಗೆ ಸೂಚಿಸಲಾಗಿತ್ತು. ಹೆಲ್ಮೆಟ್ ಧರಿಸದಿದ್ದರೆ ಯಾರಿಗೂ ಇಂಧನ ನೀಡಬಾರದು ಎಂಬ ಜಿಲ್ಲಾಧಿಕಾರಿಗಳ ಆದೇಶದ ಬಗ್ಗೆ ನಮ್ಮ ಮಾಲೀಕರು ಮಾಹಿತಿ ನೀಡಿದರು. ಲೈನ್‌ಮ್ಯಾನ್ ಬಂದಾಗ ಹೆಲ್ಮೆಟ್‌ ಇಲ್ಲದ ಕಾರಣ ನಾವು ಅವರ ಬೈಕ್‌ಗೆ ಇಂಧನ ತುಂಬಿಸಲು ನಿರಾಕರಿಸಿದ್ದೇವೆ, ಅವರು ಗಲಾಟೆ ಮಾಡಿ ಹೋಗಿದ್ದರು. ನಂತರ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು ಎಂದು ಹೇಳಿದ್ದಾನೆ.
ಏಕಾಏಕಿ ವಿದ್ಯುತ್ ಸ್ಥಘಿತಗೊಂಡಿದ್ದು ಪೆಟ್ರೋಲ್ ಪಂಪ್ ಸಿಬ್ಬಂದಿಗೆ ಅಚ್ಚರಿ ಮೂಡಿಸಿದೆ. ಸುಮಾರು 20 ನಿಮಿಷಗಳ ನಂತರ ವಿದ್ಯುತ್ ಪೂರೈಕೆಯನ್ನು ಪುನಃಸ್ಥಾಪಿಸಲಾಯಿತು. ಪೆಟ್ರೋಲ್ ಪಂಪ್ ಮಾಲೀಕರು ಈ ಬಗ್ಗೆ ಪೊಲೀಸ್ ದೂರು ದಾಖಲಿಸಿದ್ದಾರೆ.

ನಂತರ ಪರಿಶೀಲಿಸಿದಾಗ ಲೈನ್‌ಮ್ಯಾನ್ ಟ್ರಾನ್ಸ್‌ಫಾರ್ಮರ್ ಬಳಿ ಬೈಕ್ ನಿಲ್ಲಿಸಿ ಕಂಬ ಏರುತ್ತಿರುವುದು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಂತರ ಕಂಬ ಏರಿ ವಿದ್ಯುತ್ ತಂತಿ ತುಂಡರಿಸಿದ್ದಾನೆ. ಆತ ಕೆಳಗೆ ಇಳಿಯುತ್ತಿದ್ದಂತೆ, ಜನರು ವಿದ್ಯುತ್‌ ಪೂರೈಕೆ ಯಾಕೆ ನಿಲುಗಡೆಯಾಗಿದೆ ಎಂದು ಪರಿಶೀಲಿಸಲು ಟ್ರಾನ್ಸ್‌ಫಾರ್ಮರ್‌ನ ಬಳಿಗೆ ಬರುತ್ತಿರುವುದು ಕಂಡುಬಂದಿದೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರೇರಣಾ ಶರ್ಮಾ ಹೊರಡಿಸಿದ ಆದೇಶದ ಪ್ರಕಾರ, ಹೆಲ್ಮೆಟ್ ಇಲ್ಲದ ಬೈಕ್ ಸವಾರರಿಗೆ ಪೆಟ್ರೋಲ್ ಮಾರಾಟ ಮಾಡದಂತೆ ಹಾಪುರದ ಪೆಟ್ರೋಲ್ ಪಂಪ್ ಮಾಲೀಕರಿಗೆ ತಿಳಿಸಲಾಗಿದೆ. ‘ನೋ ಹೆಲ್ಮೆಟ್, ನೋ ಪೆಟ್ರೋಲ್’ ನಿಯಮದ ಬಗ್ಗೆ ಜಾಗೃತಿ ಮೂಡಿಸಲು ದೊಡ್ಡ ಹೋರ್ಡಿಂಗ್‌ಗಳನ್ನು ಹಾಕುವಂತೆ ತಿಳಿಸಲಾಗಿದೆ. ಈ ನಿಯಮದ ಪ್ರಕಾರ ಹಿಂಬದಿ ಸವಾರರೂ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ.