ನವದೆಹಲಿ: ದೆಹಲಿ ವಿಧಾನಸಭೆಗೆ ಕೇಂದ್ರ ಚುನಾವಣಾ ಆಯೋಗವು ಮಂಗಳವಾರ ಚುನಾವಣೆಗೆ ದಿನಾಂಕ ಘೋಷಿಸಿದೆ.

2025ರ ಫೆಬ್ರುವರಿ 23ಕ್ಕೆ ವಿಧಾನಸಭೆಯ ಅವಧಿಯು ಕೊನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಮತದಾನಕ್ಕೆ ಫೆ. 5ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಫೆ. 8ಕ್ಕೆ ಎಣಿಕೆ ನಡೆಯಲಿದೆ ಎಂದು ತಿಳಿಸಿದರು.

ಒಟ್ಟು 70 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಇದರಲ್ಲಿ 58 ಸಾಮಾನ್ಯ ಹಾಗೂ 12 ಮೀಸಲು ಕ್ಷೇತ್ರಗಳಿವೆ. ಇದಕ್ಕಾಗಿ 13,033 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಶೇ 100ರಷ್ಟು ವೆಬ್‌ಕಾಸ್ಟಿಂಗ್‌ ನಡೆಸಲಾಗುವುದು ಎಂದು ತಿಳಿಸಿದರು.

ದೆಹಲಿಯಲ್ಲಿ 83 ಲಕ್ಷ ಪುರುಷ ಹಾಗೂ 71 ಲಕ್ಷ ಮಹಿಳೆ ಸೇರಿ ಒಟ್ಟು 1.55 ಕೋಟಿ ಮತದಾರರು ಇದ್ದಾರೆ. 79 ಸಾವಿರ ಅಂಗವಿಕಲ ಮತದಾರರು ಹಾಗೂ 85 ವರ್ಷ ಮೇಲ್ಪಟ್ಟವರು ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿದ್ದಾರೆ. ಇವರಿಗೆ ಮತಗಟ್ಟೆಗೆಯಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.