ಇಂದೋರ್: 2025ರಲ್ಲಿ 4 ಗ್ರಹಣಗಳು ಸಂಭವಿಸಲಿದ್ದು, ಭಾರತದಲ್ಲಿ ಒಂದು ಮಾತ್ರ ಗೋಚರಿಸಲಿದೆ ಎಂದು ಉಜೈನ್ ಮೂಲದ ಜಿವಾಜಿ ವೀಕ್ಷಣಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ಚಂದ್ರಗ್ರಹಣ ಮತ್ತು ಎರಡು ಸೂರ್ಯಗ್ರಹಣ ಸಂಭವಿಸಲಿದ್ದು, ಮಾರ್ಚ್ 14 ರಿಂದ ಸಂಪೂರ್ಣ ಚಂದ್ರಗ್ರಹಣ ನಡೆಯಲಿದೆ. ಇದು ಬೆಳಗಿನ ವೇಳೆ ಸಂಭವಿಸುವುದರಿಂದ ಭಾರತದಲ್ಲಿ ಗೋಚರಿಸುವುದಿಲ್ಲ ಎಂದು ವೀಕ್ಷಣಾಲಯದ ಅಧೀಕ್ಷಕ ಡಾ. ರಾಜೇಂದ್ರ ಪ್ರಕಾಶ್ ಗುಪ್ತಾ ಹೇಳಿದ್ದಾರೆ.

ಅಮೆರಿಕ, ಪಶ್ಚಿಮ ಯೂರೋಪ್, ಪಶ್ಚಿಮ ಆಫ್ರಿಕಾ ಮತ್ತು ದಕ್ಷಿಣ ಹಾಗೂ ಉತ್ತರ ಅಂಟ್ಲಾಮಟಿಕ್ ಮಹಾಸಾಗರದ ಬಳಿ ಸಂಪೂರ್ಣ ಗ್ರಹಣ ಗೋಚರಿಸಲಿದೆ.

ಮಾರ್ಚ್ 29 ರಂದು ಭಾಗಶಃ ಸೂರ್ಯಗ್ರಹಣ ಇರುತ್ತದೆ. ಭಾರತದಲ್ಲಿ ಕಾಣುವುದಿಲ್ಲ. ಉತ್ತರ ಅಮೆರಿಕ, ಗ್ರೀನ್‌ಲ್ಯಾಂಡ್, ಐಸ್‌ಲ್ಯಾಂಡ್, ಉತ್ತರ ಅಟ್ಲಾಂಟಿಕ್ ಮಹಾಸಾಗರ, ಇಡೀ ಯುರೋಪ್ ಮತ್ತು ವಾಯುವ್ಯ ರಷ್ಯಾದಲ್ಲಿ ಗ್ರಹಣ ಗೋಚರಿಸಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸೆಪ್ಟೆಂಬರ್ 7 ಮತ್ತು 8ರ ನಡುವೆ ಸಂಭವಿಸುವ ಪೂರ್ಣ ಚಂದ್ರಗ್ರಹಣವು ದೇಶದಲ್ಲಿ ಗೋಚರಿಸುತ್ತದೆ ಎಂಬ ಅಂಶದಿಂದ ಭಾರತೀಯ ಖಗೋಳ ಪ್ರೇಮಿಗಳು ಉತ್ಸುಕರಾಗಬಹುದು. ಇದು ಏಷ್ಯಾದ ಇತರ ದೇಶಗಳ ಜೊತೆಗೆ ಯುರೋಪ್, ಅಂಟಾರ್ಟಿಕಾ, ಪಶ್ಚಿಮ ಪೆಸಿಫಿಕ್ ಮಹಾಸಾಗರ, ಆಸ್ಟ್ರೇಲಿಯಾ ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿಯೂ ಗೋಚರಿಸುತ್ತದೆ’ಎಂದು ಗುಪ್ತಾ ಹೇಳಿದ್ದಾರೆ.

2025ರ ಕೊನೆಯ ಗ್ರಹಣವು ಸೆಪ್ಟೆಂಬರ್ 21 ಮತ್ತು 22ರ ನಡುವೆ ಭಾಗಶಃ ಸೂರ್ಯಗ್ರಹಣವಾಗಿರುತ್ತದೆ. ಭಾರತದಲ್ಲಿ ಈ ಖಗೋಳ ವಿಸ್ಮಯ ವೀಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಈ ಭಾಗಶಃ ಸೂರ್ಯಗ್ರಹಣವು ನ್ಯೂಜಿಲೆಂಡ್, ಪೂರ್ವ ಮೆಲನೇಷಿಯಾ, ದಕ್ಷಿಣ ಪಾಲಿನೇಷ್ಯಾ ಮತ್ತು ಪಶ್ಚಿಮ ಅಂಟಾರ್ಟಿಕಾದಲ್ಲಿ ಗೋಚರಿಸುತ್ತದೆ’ ಎಂದು ತಿಳಿಸಿದ್ದಾರೆ.