
ಮಂಗಳೂರು: ಈ ಬಾರಿ ವಾಡಿಕೆಗಿಂತ ನಾಲ್ಕು ಪಟ್ಟು ಹೆಚ್ಚು ಮಳೆ ಸುರಿದಿದೆ. ವಾಡಿಕೆಗಿಂತ ಎಂಟು ದಿನ ಮೊದಲೇ ಆರಂಭವಾದ ಮುಂಗಾರು ಮಳೆಯಿಂದಾಗಿ ಭಾರಿ ನಷ್ಟ ಉಂಟಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಜನವರಿಯಿಂದ ಮೇ ಅಂತ್ಯದ ವರೆಗೆ ಜಿಲ್ಲೆಯಲ್ಲಿ ಸಾಮಾನ್ಯವಾಗಿ 253.2 ಮಿಲಿಮೀಟರ್ ಮಳೆಯಾಗುತ್ತದೆ. ಈ ಬಾರಿ ಇದರ ಪ್ರಮಾಣ 1101.6 ಮಿಮೀ ಆಗಿದೆ. ಆದರೆ ಭಾನುವಾರ ಬೆಳಿಗ್ಗೆ ಮುಕ್ತಾಯಗೊಂಡ 24 ತಾಸುಗಳಲ್ಲಿ ವಾಡಿಕೆಗಿಂತ 2 ಮಿಮೀ ಮಳೆ ಕಡಿಮೆಯಾಗಿದೆ ಎಂದು ತಿಳಿಸಲಾಗಿದೆ.
ಮೂಡುಬಿದಿರೆ, ಬೆಳ್ತಂಗಡಿ, ಕಡಬ, ಸುಳ್ಯ ಮತ್ತು ಪುತ್ತೂರು ತಾಲ್ಲೂಕುಗಳಲ್ಲಿ ಹೆಚ್ಚು ಮಳೆಯಾಗಿದೆ. ಮಂಗಳೂರಿನಲ್ಲಿ ಈ ಅವಧಿಯಲ್ಲಿ ಕಡಿಮೆ ಮಳೆ ಸುರಿದಿದೆ. ಮೂಡುಬಿದಿರೆ ತಾಲ್ಲೂಕಿನಲ್ಲಿ 1193.3 ಮಿಮೀ ಮಳೆಯಾಗಿದೆ. ಜನವರಿಯಿಂದ ಮೇ ವರೆಗೆ ಇಲ್ಲಿ ಸಾಮಾನ್ಯವಾಗಿ 230.4 ಮಿಮೀ ಮಳೆಯಾಗುವುದು ವಾಡಿಕೆ. ಕಡಬ ತಾಲ್ಲೂಕಿನಲ್ಲಿ 1145.7 ಮಿಮೀ (ವಾಡಿಕೆ: 292.5ಮಿಮೀ) ಬೆಳ್ತಂಗಡಿ ತಾಲ್ಲೂಕಿನಲ್ಲಿ 1149.1 ಮಿಮೀ (236.9ಮಿಮೀ), ಬಂಟ್ವಾಳ ತಾಲ್ಲೂಕಿನಲ್ಲಿ 1116.8 ಮಿಮೀ (230.7) ಮಿಮೀ ಮಳೆಯಾಗಿದೆ.
ಸುಳ್ಯದಲ್ಲಿ 1035.3 ಮಿಮಿ (254ಮಿಮೀ) ಪುತ್ತೂರಿನಲ್ಲಿ 1107.3 (228.12ಮಿಮೀ), ಉಳ್ಳಾಲದಲ್ಲಿ1057.7 (285.2ಮಿಮೀ), ಮೂಲ್ಕಿಯಲ್ಲಿ 984.5 ಮಿಮೀ(228.62ಮಿಮೀ) ಮಂಗಳೂರಿನಲ್ಲಿ 909.8 (284.92ಮಿಮೀ) ಮಳೆ ದಾಖಲಾಗಿದೆ. 47 ಮನೆಗಳು ಪೂರ್ತಿಯಾಗಿ, 321 ಮನೆಗಳೂ ಭಾಗಶಃ ನಾಶವಾಗಿವೆ ಎಂದು ತಿಳಿಸಲಾಗಿದೆ.
ಸಾಮಾನ್ಯವಾಗಿ ಮುಂಗಾರು ಆರಂಭವಾಗುವ ಜೂನ್ ಒಂದರಂದು ಈ ಬಾರಿ ಮಳೆಯ ಅಬ್ಬರ ತಗ್ಗಿದೆ. ಜಿಲ್ಲೆಯಲ್ಲಿ ಭಾನುವಾರ ಬಿಟ್ಟುಬಿಟ್ಟು ಮಳೆಯಾಗಿದೆ. ಮಂಗಳೂರು ನಗರದಲ್ಲಿ ಮಧ್ಯಾಹ್ನದ ನಂತರ ಬಿಸಿಲು ಕಾದಿದೆ. ಜೂ.1ರಂದು ಸಾಮಾನ್ಯವಾಗಿ 10.7ಮಿಮೀ ಮಳೆ ಆಗುತ್ತದೆ. ಆದರೆ 8.5 ಮಿಮೀ ಮಳೆಯಾಗಿದೆ ಎಂದು ತಿಳಿಸಲಾಗಿದೆ.