ಕಟೀಲು :
ಕಟೀಲು ಸಮೀಪದ ಶ್ರೀ ಕೊಂಡೇಲ್ತಾಯ ದೈವಸ್ಥಾನದದಲ್ಲಿ ಶ್ರೀ ಕೊಂಡೇಲ್ತಾಯ, ರಕೇಶ್ವರೀ ಮತ್ತು ಪಂಜುರ್ಲಿ ದೈವಗಳ ಪ್ರತಿಷ್ಠೆ ಮತ್ತು ಕಲಶಾಭಿಷೇಕ ಸಿತ್ಥ ಮನೆತನದ ರಾಮಚಂದ್ರ ರಾವ್ ಅವರ ಪೌರೋಹಿತ್ಯದಲ್ಲಿ ವಿನಾಯಕ ಕಾರಂತ ನೇತೃತ್ವದಲ್ಲಿ ಸಂಪನ್ನಗೊಂಡಿತು.
ಬುಧವಾರ ಬೆಳಗ್ಗೆ ಗಣಪತಿ ಹೋಮ, ದೈವಗಳ ಕಲಶಾಧಿವಾಸ, ಅಧಿವಾಸ ಹೋಮ, 11. 32ರ ವೃಷಭ ಲಗ್ನದಲ್ಲಿ ಶ್ರೀ ಕೊಂಡೇಲ್ತಾಯ ಹಾಗೂ ಪರಿವಾರ ದೈವಗಳಿಗೆ ಪ್ರತಿಷ್ಠೆ ಕಲಶಾಭಿಷೇಕ, ಶಿಖರ ಪ್ರತಿಷ್ಠೆ ನೆರವೇರಿತು. ದೈವದ ದರ್ಶನ, ಮಧ್ಯಾಹ್ನ ಅನ್ನಸಂತರ್ಪಣೆ ಯ ಪಲ್ಲ ಪೂಜೆ ನಡೆಯಿತು.
ದೈವಶಕ್ತಿಗಳನ್ನು ನಂಬುವ ದೈವಭಕ್ತರ ಅತಿ ಕುತೂಹಲಕ್ಕೆ ಗ್ರಾಸವಾದ ಅಪೂರ್ವ ಸಂದರ್ಭವೊಂದು ನಾಲ್ಕು ಶತಮಾನಗಳ ಬಳಿಕ ಅಂದರೆ ಬರೋಬ್ಬರಿ 400 ವರ್ಷಗಳ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ತಾಲೂಕಿನ ಕಟೀಲು- ಕೊಂಡೇಲ ಎಂಬಲ್ಲಿ ಸಾಕ್ಷಾತ್ಕಾರಗೊಂಡಿತ್ತು.
ಕಾರಣಿಕದ ಶ್ರೀ ಕೊಂಡೇಲ್ತಾಯ ದೈವದ ನೇಮ ಕಂಡು ಕಣ್ಣುಂಬಿಸಿಕೊಳ್ಳುವ ಕುತೂಹಲ ವಿಶ್ವದೆಲ್ಲೆಡೆಯ ತುಳುವ ದೈವಭಕ್ತರಲ್ಲಿದೆ.
ಶ್ರೀ ಕೊಂಡೇಲ್ತಾಯ ದೈವದ ಅಸ್ತಿತ್ವದ ಹಿನ್ನೆಲೆಯ ಪುರಾವೆ ಮನುಷ್ಯರೂಪದ ಶಿಲಾಮೂರ್ತಿಯೊಂದು ದೈವಸ್ಥಾನದ ಬಗೆಗಿನ ದೈವಜ್ಞರಿಂದ ನಡೆಸಲಾದ ಪ್ರಶ್ನಾಚಿಂತನೆಯ ಬಳಿಕ ಜೀರ್ಣೋದ್ದಾರದ ವೇಳೆ ಪತ್ತೆಯಾಗಿದೆ.
ಕೊಡೆತ್ತೂರು ಕುಂಜರಾಯ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವದ ವೇಳೆ ಈಗಲೂ ಕಟ್ಟುಕಟ್ಟಳೆಯ (ಸಾಂಕೇತಿಕ) ಕೊಂಡೇಲ್ತಾಯ ದೈವದ ನೇಮ ಜರುಗುತ್ತಿದೆ.
ಪೂರ್ಣಪ್ರಮಾಣದಲ್ಲಿ ಶ್ರೀ ಕೊಂಡೇಲ್ತಾಯ ದೈವದ ನೇಮ ಕಂಡವರಾಗಲಿ ಯಾವುದೇ ಸಾಕ್ಷಿಗಳಾಗಲಿ ಇಲ್ಲವಾದರೂ ಕುಂಜರಾಯ ಕ್ಷೇತ್ರಕ್ಕೆ ಶ್ರೀ ಕೊಂಡೇಲ ದೈವಸ್ಥಾನದಿಂದಲೇ ಕೊಂಡೇಲ್ತಾಯ ದೈವದ ಭಂಡಾರ ಹೋಗಿ ನೇಮ ನಡೆಯಬೇಕೆಂಬ ಕಟ್ಟಳೆ ಮುಂಬರುವ ವರ್ಷಗಳಲ್ಲಿ ಸಾಕಾರವಾಗಲಿದೆ.
ಸಿರಿಗೋಳಿ ಮರ ವಿಶೇಷ :
ಕೊಂಡೇಲ್ತಾಯ ದೈವ ಲೀನವಾಗಿರುವ ಐತಿಹ್ಯವುಳ್ಳ ಮಾನವರೂಪದ ಶಿಲೆ ಹಾಗೂ ವಿಶೇಷ ಗುಣವುಳ್ಳ ಸಿರಿಗೋಳಿ ಮರ ಇವೆರಡೂ ದೈವದ ಗುಡಿಯ ಅಕ್ಕಪಕ್ಕದಲ್ಲಿಯೇ ಇದ್ದು ಕ್ಷೇತ್ರಕ್ಕೆ ಆಗಮಿಸುವ ಕ್ತರಿಗೆ ಕತೆ ಹೇಳುವ ಸಾಕ್ಷಿಗಳಾಗಿ ಗೋಚರಿಸುತ್ತಿದೆ. ಇಲ್ಲಿಯ ಗದ್ದೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಾಗೆಲ್ಲ ಸಂಬಂಧಪಟ್ಟ ಎಲ್ಲ ಸ್ಥಳಗಳಲ್ಲಿ ನಾಗರಹಾವು ಬಂದು ಎಚ್ಚರಿಸುತ್ತದೆ ಎಂಬುದು ಈಗಲೂ ಇಲ್ಲಿನ ಹಿರಿಯರು ನಂಬುತ್ತಾರೆ. ಅಷ್ಟೇ ಅಲ್ಲದೆ ಇದೇ ಸಿರಿಗೋಳಿ ಮರದ ಎಲೆಯಲ್ಲಿ ಗಂಧಪ್ರಸಾದ ಪಡೆದವನ ಕಷ್ಟಕಾರ್ಪಣ್ಯ ಪರಿಹಾರವಾಗುತ್ತವೆ ಎಂಬ ಪ್ರತೀತಿಯೂ ಇದೆ.