ಬೆಳಗಾವಿ : ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ನಡೆದ ಬೀರೇಶ್ವರ, ಕರೆಮ್ಮ ಜಾತ್ರೆಯಲ್ಲಿ ಪ್ರಸಾದ ಸೇವಿಸಿದ್ದ 46 ಜನ ಭಕ್ತರು ಅಸ್ವಸ್ಥಗೊಂಡಿದ್ದು, ಐವರ ಸ್ಥಿತಿ ಗಂಭೀರವಾಗಿದೆ.
ಪ್ರಸಾದ, ಮನೆಯಲ್ಲಿ ಮಾವಿನ ಹಣ್ಣಿನ ಶಿಖರಣಿ ಸೇವಿಸಿದ್ದವರಲ್ಲಿ ಏಕಾಏಕಿ ವಾಂತಿ-ಭೇದಿ ಕಾಣಿಸಿಕೊಂಡಿದ್ದು ಅಸ್ವಸ್ಥಗೊಂಡಿದ್ದಾರೆ. ಸದ್ಯ ಅಸ್ತವ್ಯಸ್ಥಗೊಂಡವರನ್ನು ಸವದತ್ತಿ ಸಾರ್ವಜನಿಕ ಆಸ್ಪತ್ರೆ ಹಾಗೂ ಬೆಳಗಾವಿ ಜಿಲ್ಲಾಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಗ್ರಾಮದಲ್ಲಿನ ಪರಿಸ್ಥಿತಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿಯೇ ಬೀಡುಬಿಟ್ಟಿದ್ದಾರೆ. ತೀವ್ರ ಅಸ್ವಸ್ಥಗೊಂಡ ಐವರನ್ನ ಧಾರವಾಡ ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತಾಲೂಕು ವೈದ್ಯರು ಅಹಿತಕರ ಘಟನೆ ಆಗದಂತೆ ಗ್ರಾಮದಲ್ಲಿ ಕ್ಯಾಂಪ್ ತೆರೆದು ಪ್ರತಿಯೊಬ್ಬರ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಮಾಹಿತಿ ಸಿಗುತ್ತಿದ್ದಂತೆ ಸ್ಥಳೀಯ ಶಾಸಕ ವಿಶ್ವಾಸ ವೈದ್ಯ ಆಸ್ಪತ್ರೆಗೆ ದೌಡಾಯಿಸಿ ಅಗತ್ಯ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದ್ದಾರೆ.