ಬೆಂಗಳೂರು: 5 ಮತ್ತು 8 ನೇ ತರಗತಿ ಬೋರ್ಡ್‌ ಪರೀಕ್ಷೆಗಳನ್ನು ರದ್ದು ಮಾಡಿ ಕರ್ನಾಟಕ ಹೈಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದೆ.

ರಾಜ್ಯ ಪಠ್ಯಕ್ರಮದ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್‌ ಪರೀಕ್ಷೆ ನಡೆಸುವ ನಿರ್ಧಾರ ಪ್ರಶ್ನಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ನಿರ್ಧಾರ ಪ್ರಕಟಿಸಿದೆ. ರಾಜ್ಯ ಸರ್ಕಾರದ 5 ಮತ್ತು 8 ನೇ ತರಗತಿ ಬೋರ್ಡ್ ಎಕ್ಸಾಂ ಆದೇಶ ರದ್ದು ಪಡಿಸಿ ಕೋರ್ಟ್ ತೀರ್ಪು ಪ್ರಕಟಿಸಿದೆ. ಅನುದಾನ‌ರಹಿತ ಶಾಲೆಗಳ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ ಏಕ ಸದಸ್ಯ ಪೀಠ ಈ ತೀರ್ಮಾನ ಪ್ರಕಟಿಸಿದೆ.

ನ್ಯಾ.ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ಪೀಠದಿಂದ ಈ ಮಹತ್ವದ ಆದೇಶ ಹೊರ ಬಿದ್ದಿದೆ. ಈ ಮೂಲಕ ಸದ್ಯ 5 ಮತ್ತು 8ನೇ ತರಗತಿ ಮಕ್ಕಳಿಗೆ ಇದ್ದ ಪಬ್ಲಿಕ್‌ ಎಕ್ಸಾಂ ಆತಂಕ ದೂರವಾಗಿದೆ. ಅರ್ಜಿದಾರರ ಪರವಾಗಿ ವಕೀಲ ಕೆ.ವಿ.ಧನಂಜಯ್ ಶಾಸಕಾಂಗದಲ್ಲಿ ಚರ್ಚೆ ಆಗದೇ ಅಧಿಕಾರಿಗಳೇ ನಿರ್ಧಾರ ಮಾಡಿದ್ದರು ಎಂದು ವಾದಿಸಿದರು. ಈ ಆದೇಶದ ಬಳಿಕ ಆಯಾಯ ಶಾಲೆಗಳು ಹೊಸದಾಗಿ ಪರೀಕ್ಷೆ ದಿನಾಂಕ ನಿಗದಿಗೆ ಅವಕಾಶ ಮಾಡಿ ಕೊಡಲಾಗಿದೆ. ಜೊತೆಗೆ ನಿಯಮಗಳಿಗನುಸಾರ ಮುಂದಿನ ಶೈಕ್ಷಣಿಕ ವರ್ಷದಿಂದ ಬೋರ್ಡ್ ಪರೀಕ್ಷೆ ನಡೆಸಬಹುದು ಎಂದು ಶಿಕ್ಷಣ ಇಲಾಖೆಗೆ ನ್ಯಾ.ಪ್ರದೀಪ್ ಸಿಂಗ್ ಯೆರೂರ್ ಸೂಚನೆ ನೀಡಿದ್ದಾರೆ.

ಏನಿದು ವಿಚಾರ?
ಮಕ್ಕಳ ಕಲಿಕೆಯನ್ನು ಉತ್ತಮಗೊಳಿಸಲು 2022-23ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮದ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಮಂಡಳಿ (ಬೋರ್ಡ್‌) ಪರೀಕ್ಷೆ ನಡೆಸಲು ನಿರ್ಧರಿಸಿ ವೇಳಾಪಟ್ಟಿ ಪ್ರಕಟಿಸಿತ್ತು. ಮಾ.13ರಿಂದ 18ರವರೆಗೆ ಮೌಲ್ಯಾಂಕನ ಪರೀಕ್ಷೆಗೆ ದಿನ ನಿಗದಿ ಮಾಡಿತ್ತು. ವಿದ್ಯಾರ್ಥಿಗಳ ಸಂಖ್ಯೆಯನ್ನು ಆಧರಿಸಿ ಪರೀಕ್ಷಾ ಕೇಂದ್ರಗಳನ್ನು ರಚಿಸುವಂತೆ ಸೂಚಿಸಲಾಗಿತ್ತು.