ಮಣಿಪಾಲ: ಪ್ರಧಾನಮಂತ್ರಿ ಸೂರ್ಯ ಘರ್‌ ಯೋಜನೆಯಡಿ ಮಾದರಿ ಸೋಲಾರ್‌ ಪಂಚಾಯತ್‌ಗಳಾಗಿ ರೂಪಿಸಲು ಜಿಲ್ಲೆಯ 5 ಗ್ರಾಮ ಪಂಚಾಯತಿಗಳನ್ನು ಮೆಸ್ಕಾಂಗೆ ಶಿಫಾರಸು ಮಾಡಲಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಈ ಸಂಬಂಧ ಜಿಪಂ ಮಿನಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೋಟತಟ್ಟು, ಬೈಂದೂರಿನ ಕಿರಿಮಂಜೇಶ್ವರ, ಕಾರ್ಕಳದ ನಿಟ್ಟೆ, ಕಾಪುವಿನ ಮಜೂರು ಹಾಗೂ ಉಡುಪಿಯ ಉಪ್ಪೂರು ಗ್ರಾಮ ಪಂಚಾಯತ್‌ಗಳನ್ನು ಶಿಫಾರಸು ಮಾಡಲಾಗಿದೆ ಎಂದರು.

ಪ್ರಧಾನಮಂತ್ರಿ ಸೂರ್ಯಘರ್‌ ಯೋಜನೆಯಡಿ ಮನೆ ಮನೆಯಲ್ಲೂ ವಿದ್ಯುತ್‌ ಉತ್ಪಾದಿಸಿಕೊಳ್ಳಲು 300 ಯೂನಿಟ್‌ ವಿದ್ಯುತ್‌ ಉತ್ಪಾದನೆ ಗುರಿಯೊಂದಿಗೆ 2.20 ಲಕ್ಷ ರೂ. ಸಾಲ ಸೌಲಭ್ಯವನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳು ನೀಡುತ್ತಿದ್ದು, ಸೋಲಾರ್‌ ಅಳವಡಿಕೆ ಮಾಡಿಕೊಂಡ ಕುಟುಂಬಗಳಿಗೆ 78 ಸಾವಿರ ರೂ. ಸಬ್ಸಿಡಿ ನೀಡಲಾಗುತ್ತಿದೆ. ಈ ಯೋಜನೆ ಪ್ರತಿ ಪಂಚಾಯತ್‌ ಮತ್ತು ನಗರಾಡಳಿತ ಸಂಸ್ಥೆಗಳ ಎಲ್ಲ ಫ‌ಲಾನುಭವಿಗಳಿಗೆ ಪೂರ್ಣ ಪ್ರಮಾಣದ ಯೋಜನೆ ಅಳವಡಿಕೆಗೆ ಶ್ರಮಿಸಲಾಗುವುದು ಎಂದರು.

ಪ್ರಥಮ ಹಂತದಲ್ಲಿ ಆಯ್ಕೆ ಮಾಡಲಾದ 5 ಪಂಚಾಯತ್‌ಗಳ ಪ್ರಗತಿ ಪರಿಗಣಿಸಿ, ಎರಡನೇ ಹಂತದಲ್ಲಿ ಇನ್ನುಳಿದ ಪಂಚಾಯತ್‌ಗಳಿಗೆ ವಿಸ್ತರಿಸಲಾಗುವುದು. ಆಯ್ಕೆಯಾದ ಗ್ರಾಪಂ ವಿಶೇಷ ಅನುದಾನ ನೀಡಲು ಶಿಫಾರಸ್ಸು ಮಾಡುವುದಾಗಿ ತಿಳಿಸಿದರು.