ಸಾತ್ಪುರ: ಮಧ್ಯಪ್ರದೇಶದ ಸತ್ಪುರ ಹುಲಿ ಸಂರಕ್ಷಿತ ಪ್ರದೇಶದ ಜಂಗಲ್ ಸಫಾರಿಯ ವೇಳೆ ಮಧೈ ಪ್ರದೇಶದಲ್ಲಿ ಹುಲಿ ಗುಂಪು ಒಟ್ಟಿಗೆ ಕಾಣಿಸಿಕೊಂಡ ನಂತರ ಪ್ರವಾಸಿಗರು ಆಶ್ಚರ್ಯಚಕಿತರಾದರು.

ಸೋಮವಾರ ಮುಂಜಾನೆ 5:00 ಗಂಟೆಯ ಸುಮಾರಿಗೆ ಹುಲಿಗಳ ಗುಂಪು ಸೂರ್ಯನ ಬೆಳಕನ್ನು ಆನಂದಿಸಲು ರಸ್ತೆಯ ಮಧ್ಯದಲ್ಲಿ ಕುಳಿತುಕೊಂಡಿದ್ದವು. ಈ ಅಪರೂಪದ ದೃಶ್ಯವು ಜಂಗಲ್‌ ಸಫಾರಿ ವೇಳೆ ಕಂಡುಬಂದಿದೆ.

ಘಟನೆಯ ವೀಡಿಯೊ ತುಣುಕಿನಲ್ಲಿ ಹುಲಿ ಕುಟುಂಬದಲ್ಲಿದ್ದ ಒಂದು ಹುಲಿ ಮತ್ತು ಅದರ ನಾಲ್ಕು ಮರಿಗಳು ಪ್ರವಾಸಿ ಜೀಪ್‌ಗಳು ಸುತ್ತುವರಿದಿದ್ದರೂ ರಸ್ತೆಯ ಮಧ್ಯದಲ್ಲಿ ಆರಾಮವಾಗಿ ಕುಳಿತುಕೊಂಡು ಆನಂದಿಸುತ್ತಿರುವುದನ್ನು ತೋರಿಸಿದೆ. ಸುರಕ್ಷಿತ ದೂರದಿಂದ ಈ ದೃಶ್ಯವನ್ನು ಎಚ್ಚರಿಕೆಯಿಂದ ರೆಕಾರ್ಡ್‌ ಮಾಡಲಾಗಿದೆ. “ಇದಕ್ಕಿಂತ ಉತ್ತಮವಾದ ದೃಶ್ಯ ಯಾವುದು” ಎಂದು ಉತ್ತೇಜಿತ ಪ್ರವಾಸಿಗರೊಬ್ಬರು ಹಿಂದಿಯಲ್ಲಿ ಹೇಳುವುದನ್ನು ವೀಡಿಯೊದಲ್ಲಿ ಕೇಳಬಹುದು.

ಹುಲಿಗಳ ಗುಂಪು ಅಲ್ಲಿಂದ ಹೊರಡುವ ಮುನ್ನ ಹುಲಿ ಕುಟುಂಬ ಸರಿಸುಮಾರು 15 ನಿಮಿಷಗಳ ಕಾಲ ರಸ್ತೆಯಲ್ಲೇ ಇತ್ತು ಎಂದು ವರದಿ ತಿಳಿಸಿದೆ.
ಸಾತ್ಪುರ ಹುಲಿ ಸಂರಕ್ಷಿತ ಪ್ರದೇಶದ ಇತಿಹಾಸದಲ್ಲಿ ಜಂಗಲ್‌ ಸಫಾರಿ ವೇಳೆ ಐದು ಹುಲಿಗಳು ಒಟ್ಟಿಗೆ ಕಾಣಿಸಿಕೊಂಡಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ. ಈ ದೃಶ್ಯವನ್ನು ಕಾಯ್ದಿಟ್ಟ ಅರಣ್ಯದ ಅಧಿಕಾರಿಗಳು ಉದ್ಯಾನವನದ ಇತಿಹಾಸದಲ್ಲಿ ಮಹತ್ವದ ಕ್ಷಣವೆಂದು ದಾಖಲಿಸಿದ್ದಾರೆ.