ನವದೆಹಲಿ: ಕೋವಿಡ್‌-19 (COVID-19) ಸಾಂಕ್ರಾಮಿಕ ರೋಗವು ಪ್ರಾರಂಭವಾದ ಐದು ವರ್ಷಗಳ ನಂತರ, ಚೀನಾ ಈಗ ಉಸಿರಾಟದ ತೊಂದರೆಗೆ ಕಾರಣವಾಗುವ ಹ್ಯುಮನ್‌ ಮೆಟಾಪ್ನ್ಯೂಮೋ ವೈರಸ್ (human metapneumovirus) ವಿರುದ್ಧ ಹೋರಾಡುತ್ತಿದೆ. ಡಚ್ ಸಂಶೋಧಕರು 2001 ರಲ್ಲಿ ಮೊದಲ ಬಾರಿಗೆ ಇದನ್ನು ಗುರುತಿಸಿದ್ದಾರೆ, ಈ ಎಚ್‌ಎಂಪಿವಿ (hMPV) ಇಂದ ಬರುವ ಈ ರೋಗವು ವಿಶೇಷವಾಗಿ ಚಳಿಗಾಲದ ಅವಧಿಯಲ್ಲಿ ಚೀನಾದಲ್ಲಿ ಪ್ರಮುಖ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಇನ್ಫ್ಲುಯೆಂಜಾ ಜ್ವರ ಮತ್ತು ಕೋವಿಡ್‌-19 ತರಹದ ರೋಗ ಲಕ್ಷಣಗಳಿಗೆ ಕಾರಣವಾಗುವ ಈ ವೈರಸ್ ನಿಂದ ಉಸಿರಾಟದ ತೊಂದರೆಗಳು ಕಾಣಿಸಿಕೊಳ್ಳುತ್ತವೆ.

ವರದಿಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಈ ವೈರಸ್ ವೇಗವಾಗಿ ಹರಡುತ್ತಿದೆ ಎಂದು ಸೂಚಿಸುತ್ತವೆ, ಕೆಲವರು ಆಸ್ಪತ್ರೆಗಳು ಮತ್ತು ಸ್ಮಶಾನಗಳು ತುಂಬಿಹೋಗಿವೆ ಎಂದು ಹೇಳಿಕೊಂಡಿದ್ದಾರೆ. ಆನ್‌ಲೈನ್‌ನಲ್ಲಿ ಹಂಚಿಕೊಂಡ ವೀಡಿಯೊಗಳು ಜನರು ಕಿಕ್ಕಿರಿದು ತುಂಬಿರುವ ಆಸ್ಪತ್ರೆಗಳನ್ನು ತೋರಿಸುತ್ತವೆ, ಕೆಲವು ಬಳಕೆದಾರರು ಇನ್ಫ್ಲುಯೆನ್ಸ್‌ A, ಎಚ್‌ಎಂಪಿವಿ (hMPV), ಮೈಕೋಪ್ಲಾಸ್ಮಾ ನ್ಯುಮೋನಿಯಾ, ಮತ್ತು ಕೋವಿಡ್-19 ಸೇರಿದಂತೆ ಅನೇಕ ವೈರಸ್‌ಗಳು ಪರಿಚಲನೆಗೊಳ್ಳುತ್ತಿವೆ ಎಂದು ಹೇಳುತ್ತಾರೆ.

ಚೀನಾ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ ಎಂದು ಹೇಳಲಾಗಿದೆ, ಆದರೂ ಇದು ದೃಢೀಕರಿಸಲ್ಪಟ್ಟಿಲ್ಲ. ಎಚ್‌ಎಂಪಿ ವೈರಸ್‌ (hMPV) ಇದು ಜ್ವರ ತರಹದ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ ಮತ್ತು ಕೋವಿಡ್‌-19 ನಂತಹ ರೋಗಲಕ್ಷಣಗಳನ್ನು ಸಹ ತೋರಿಸಬಹುದು. ವೈರಸ್ ಹರಡುತ್ತಿದ್ದಂತೆ ಆರೋಗ್ಯ ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
‘SARS-CoV-2 (Covid-19)’ ಎಂದು ಕರೆಯಲ್ಪಡುವ X ಹ್ಯಾಂಡಲ್‌ನ ಸಾಮಾಜಿಕ ಮಾಧ್ಯಮ ಪೋಸ್ಟ್ ಪೋಸ್ಟ್‌ನಲ್ಲಿ “ಚೀನಾ ಇನ್ಫ್ಲುಯೆನ್ಸ A, HMPV, ಮೈಕೋಪ್ಲಾಸ್ಮಾ ನ್ಯುಮೋನಿಯಾ ಮತ್ತು ಕೋವಿಡ್ -19 ಸೇರಿದಂತೆ ಅನೇಕ ವೈರಸ್‌ಗಳ ಉಲ್ಬಣವನ್ನು ಎದುರಿಸುತ್ತಿದೆ. ವಿಶೇಷವಾಗಿ ಹೆಚ್ಚುತ್ತಿರುವ ನ್ಯುಮೋನಿಯಾ ಮತ್ತು “ಬಿಳಿ ಶ್ವಾಸಕೋಶ” ಪ್ರಕರಣಗಳಿಂದ ಆಸ್ಪತ್ರೆಗಳು ಮತ್ತು ಸ್ಮಶಾನಗಳು ತುಂಬಿ ತುಳುಕುತ್ತಿವೆ ಎಂದು ಬರೆಯಲಾಗಿದೆ.

ಏತನ್ಮಧ್ಯೆ, ಚೀನಾದ ರೋಗ ನಿಯಂತ್ರಣ ಪ್ರಾಧಿಕಾರವು ಶುಕ್ರವಾರ ಅಜ್ಞಾತ ಮೂಲದ ನ್ಯುಮೋನಿಯಾಕ್ಕೆ ಮೇಲ್ವಿಚಾರಣೆ ಮಾಡುತ್ತಿದೆ ಎಂದು ರಾಯಿಟರ್ಸ್ ವರದಿ ಹೇಳಿದೆ, ಚಳಿಗಾಲದಲ್ಲಿ ಉಸಿರಾಟದ ಕಾಯಿಲೆಗಳ ಪ್ರಕರಣಗಳು ಹೆಚ್ಚಾಗುವ ನಿರೀಕ್ಷೆಯಿದೆ. ಅಜ್ಞಾತ ರೋಗಕಾರಕಗಳನ್ನು ನಿಯಂತ್ರಿಸಲು ಚೀನಾವು ನಿಗದಿ ಪಡಿಸಲಾದ ವೈದ್ಯಕೀಯ ವ್ಯವಸ್ಥೆಯನ್ನು ಸ್ಥಾಪಿಸುತ್ತಿದೆ.

ತೀವ್ರ ಉಸಿರಾಟದ ಕಾಯಿಲೆಗಳ ಡಾಟಾಗಳು ಡಿಸೆಂಬರ್ 16 ರಿಂದ 22ರ ಮಧ್ಯೆ ಒಟ್ಟಾರೆ ಸೋಂಕುಗಳು ಹೆಚ್ಚಳದ ಪ್ರವೃತ್ತಿಯನ್ನು ತೋರಿಸಿದೆ ಎಂದು ಗುರುವಾರ ಬಿಡುಗಡೆಯಾದ ಅಧಿಕೃತ ಹೇಳಿಕೆಯೊಂದು ತಿಳಿಸಿದೆ.
ಚಳಿಗಾಲ ಮತ್ತು ವಸಂತಕಾಲದಲ್ಲಿ ಚೀನಾವು ವಿವಿಧ ಉಸಿರಾಟದ ಸಾಂಕ್ರಾಮಿಕ ರೋಗಗಳಿಂದ ಪ್ರಭಾವಿತವಾಗಿರುತ್ತದೆ ಎಂದು ಇನ್ನೊಬ್ಬ ಅಧಿಕಾರಿ ಕಾನ್ ಬಿಯಾವೊ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಇತ್ತೀಚೆಗೆ ಪತ್ತೆಯಾದ ಪ್ರಕರಣಗಳಲ್ಲಿ ರೈನೋವೈರಸ್ ಮತ್ತು ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್‌ನಂತಹ ರೋಗಕಾರಕಗಳು ಸೇರಿವೆ, ಇತ್ತೀಚಿನ ಮಾಹಿತಿಯು ಸೋಂಕುಗಳು ಪ್ರಧಾನವಾಗಿ 14 ವರ್ಷದೊಳಗಿನ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಸೂಚಿಸುತ್ತದೆ. ಇದು ವಿಶೇಷವಾಗಿ ಚೀನಾದ ಉತ್ತರ ಪ್ರಾಂತ್ಯಗಳಲ್ಲಿ ಹೆಚ್ಚಳದ ಪ್ರವೃತ್ತಿಯನ್ನು ತೋರಿಸಿವೆ.

ಸರ್ಕಾರಿ ಬೆಂಬಲಿತ ನ್ಯಾಷನಲ್ ಬ್ಯುಸಿನೆಸ್ ಡೈಲಿಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ, ಶಾಂಘೈ ಆಸ್ಪತ್ರೆಯ ಉಸಿರಾಟದ ತಜ್ಞರು ಮಾನವ ಮೆಟಾಪ್ನ್ಯೂಮೋವೈರಸ್ ವಿರುದ್ಧ ಹೋರಾಡಲು ಆಂಟಿವೈರಲ್ ಔಷಧಿಗಳನ್ನು ಬೇಕಾಬಿಟ್ಟಿ ಬಳಸುವುದರ ವಿರುದ್ಧ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಇದಕ್ಕಾಗಿ ಯಾವುದೇ ಲಸಿಕೆ ಇಲ್ಲ ಆದರೆ ಅದರ ಲಕ್ಷಣಗಳು ಶೀತದ ಲಕ್ಷಣಗಳನ್ನು ಹೋಲುತ್ತವೆ.
ವೈರಸ್ ಪ್ರಾಥಮಿಕವಾಗಿ ಕೆಮ್ಮುವುದು ಅಥವಾ ಸೀನುವ ಸಮಯದಲ್ಲಿ ಬಿಡುಗಡೆಯಾದ ಹನಿಗಳು ಅಥವಾ ಏರೋಸಾಲ್‌ಗಳ ಮೂಲಕ ಹರಡುತ್ತದೆ ಎಂದು ಹೇಳಲಾಗಿದೆ. ಇದು ನಿಕಟ ಸಂಪರ್ಕ ಮತ್ತು ಜನದಟ್ಟಣೆಯು ಇದರ ಹರಡುವುದಕ್ಕೆ ಪ್ರಮುಖ ಅಂಶಗಳು ಎಂದು ಹೇಳಲಾಗುತ್ತಿದೆ. ತಜ್ಞರು ಇದರ ತೀವ್ರತೆ ಮೂರರಿಂದ ಐದು ದಿನಗಳವರೆಗೆ ಇರಬಹುದು ಅಂದಾಜು ಮಾಡುತ್ತಾರೆ.