
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶನಿವಾರ ಸಂಜೆ 6.48ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ 53ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ನಡೆಯಲಿದ್ದು, ಮದುವೆಯಾಗಲು ಈಗಾಗಲೇ 90ಕ್ಕೂ ಹೆಚ್ಚು ವಧು-ವರರು ಹೆಸರು ನೋಂದಾಯಿಸಿದ್ದಾರೆ.
ದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಯಾಗಿರುವ ಟಿ.ಬಿ.ಜಯಚಂದ್ರ, ಶಾಸಕ ಹರೀಶ್ ಪೂಂಜ ಮತ್ತು ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಅತಿಥಿಗಳಾಗಿ ಭಾಗವಹಿಸಿ, ನೂತನ ದಂಪತಿಗಳಿಗೆ ಶುಭ ಹಾರೈಸುವರು.
ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು 1972 ರಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಆರಂಭಿಸಿದರು. ಅಲ್ಲಿಂದ ಪ್ರತಿ ವರ್ಷ ಏಪ್ರಿಲ್/ಮೇ ತಿಂಗಳಿನಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಕಳೆದ ವರ್ಷದವರೆಗೆ 12,900 ಜೋಡಿ ಸಾಮೂಹಿಕ ವಿವಾಹ
ದಲ್ಲಿ ಮದುವೆಯಾಗಿದ್ದಾರೆ. ಇಲ್ಲಿ ವಿವಾಹವಾದವರ ಪೈಕಿ ಒಂದು ಕೂಡಾ ವಿಚ್ಚೇದನವಾಗಿಲ್ಲ ಎಂಬುದು ಗಮನಾರ್ಹ.
ವಿವಾಹ ಸಮಾರಂಭ: ಶನಿವಾರ ಸಂಜೆ 6.48 ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ವಿಧಿ-ವಿಧಾನಗಳನ್ನು ನಡೆಸಲಾಗುವುದು. ಶುಕ್ರವಾರವೇ ವಧು-ವರರು, ಹಿರಿಯರು ಧರ್ಮಸ್ಥಳಕ್ಕೆ ಆಗಮಿಸುತ್ತಾರೆ. ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ, ದಾಖಲೆಗಳ ಮೂಲಪ್ರತಿಗಳನ್ನು ಪರಿಶೀಲಿಸಿ ಅವಕಾಶ ನೀಡಲಾಗುವುದು. ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ.ಹೆಗ್ಗಡೆ ಶನಿವಾರ ಬೆಳಗ್ಗೆಯಿಂದಲೇ ವರನಿಗೆ ಧೋತಿ, ಶಾಲು ಹಾಗೂ ವಧುವಿಗೆ ಸೀರೆ, ರವಿಕೆ ಮತ್ತು ಮೂಗುತಿ ವಿತರಿಸುವರು. ಮಂಗಳಸೂತ್ರ ವಿವಾಹದ ಶುಭ ಮುಹೂರ್ತದಲ್ಲಿ ವಿತರಿಸಿ ಶುಭ ಹಾರೈಸುವರು.ಸರ್ಕಾರದ ನಿಯಮದಂತೆ ವಿವಾಹ ನೋಂದಣಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದು, ಮುಂದೆ ಅಧಿಕೃತ ವಿವಾಹ ನೋಂದಣಿ ಪ್ರಮಾಣಪತ್ರವನ್ನು ದಂಪತಿಗಳಿಗೆ ನೀಡಲಾಗುವುದು.