ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಮತ್ತಿತರರಿಗೆ ರಾಜಾತಿಥ್ಯ ಒದಗಿಸುತ್ತಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡುವಂತೆ ಸೂಚಿಸಿದ್ದಾರೆ.
ದರ್ಶನ್ ಮತ್ತು ಇತರರನ್ನು ಕೂಡಲೇ ಬೇರೆ ಬೇರೆ ಕಾರಾಗೃಹಗಳಿಗೆ ಸ್ಥಳಾಂತರ ಮಾಡುವಂತೆ ಸಿಎಂ ತಾಕೀತು ಮಾಡಿದ್ದಾರೆ.
ಕಾರಾಗೃಹಕ್ಕೆ ಭೇಟಿ ನೀಡಿ ಪ್ರಕರಣದ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಸಿಎಂ ಅವರು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.
ಕೊಲೆ ಆರೋಪಿ ದರ್ಶನ್ ಗೆ ವಿಶೇಷ ಆತಿಥ್ಯ: ಫೋಟೊ ಬಹಿರಂಗವಾಗಿದ್ದು ಹೇಗೆ?
ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ಕೊಲೆ ಆರೋಪಿ ದರ್ಶನ್ ಕುರ್ಚಿ ಮೇಲೆ ಕುಳಿತು ಸಿಗರೇಟ್ ಸೇದುತ್ತಾ ವಿಲ್ಸನ್ ಗಾರ್ಡನ್ ನಾಗನ ಜೊತೆಗೆ ಹರಟೆ ಹೊಡೆಯುತ್ತಿರುವ ಫೋಟೊ ಬಹಿರಂಗವಾಗಿದ್ದಾದರೂ ಹೇಗೆ ಎಂಬ ಪ್ರಶ್ನೆ ಜೈಲಿನ ಸಿಬ್ಬಂದಿಯನ್ನು ಕಾಡುತ್ತಿದೆ.ದರ್ಶನ್, ನಾಗ, ಕುಳ್ಳ ಸೀನ ಹಾಗೂ ದರ್ಶನ್ ಮ್ಯಾನೇಜರ್ ನಾಗರಾಜ್ ಕುಳಿತಿದ್ದ ಫೋಟೊವನ್ನು ರೌಡಿ ವೇಲು ಎಂಬಾತ ತೆಗೆದಿದ್ದ. ಅದನ್ನು ತನ್ನ ಪತ್ನಿಗೆ ಕಳುಹಿಸಿದ್ದ. ಆಕೆ ತಮ್ಮ ಸ್ನೇಹಿತರಿಗೆ ಕಳುಹಿಸಿದ್ದರು. ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಹೀಗೆ ಫೋಟೊ ಬಹಿರಂಗವಾಗಿದೆ ಎಂದು ಮೂಲಗಳು ಹೇಳಿವೆ.
ದರ್ಶನ್‌ಗೆ ಜೈಲಿನಲ್ಲಿ ವಿಶೇಷ ಆತಿಥ್ಯ ನೀಡಿ ಕರ್ತವ್ಯ ಲೋಪ ಎಸಗಿದ ಆರೋಪದ ಅಡಿ 7 ಸಿಬ್ಬಂದಿಯನ್ನು ಸದ್ಯ ಅಮಾನತು ಮಾಡಲಾಗಿದೆ.