Join The Telegram | Join The WhatsApp |
ಬೆಂಗಳೂರು-
ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯವು ನಗರದಲ್ಲಿ ಭಯೊತ್ಪಾದಕ ಚಟುವಟಿಕೆಯಲ್ಲಿ ತೊಡಗಿದ್ದ ನಾಲ್ವರು ಆರೋಪಿಗಳಿಗೆ ಏಳು ವರ್ಷ ಶಿಕ್ಷೆ ಪ್ರಕಟಗೊಳಿಸಿ ಆದೇಶ ಹೊರಡಿಸಿದೆ. ಬೆಂಗಳೂರಿನ ಸೋಲದೇವನಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್, ಕಡೋರ್ ಕಾಜಿ ಅಲಿಯಾಸ್ ಮಿಜನೂರ್ ರಹಮಾನ್, ಆದಿಲ್ ಶೇಖ್ ಅಲಿಯಾಸ್ ಅಸಾದುಲ್ಲಾ, ಅಬ್ದುಲ್ ಕರೀಮ್ ಅಲಿಯಾಸ್ ಕೊರಿಮ್, ಲಾಲ್ಜನ್ ಶೇಖ್ ಎಂಬ ಆರೋಪಿಗಳಿಗೆ 7 ವರ್ಷ ಶಿಕ್ಷೆ ವಿಧಿಸಿ ಆದೇಶಿಸಿದೆ. ಬಾಂಬ್‌ಗಳು ಮತ್ತು ಐಇಡಿಗಳ ತಯಾರಿಕೆಗೆ ಬಳಸುವ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳು, ಉಪಕರಣಗಳು, ರಾಸಾಯನಿಕ ಸ್ಪೂಟಕಗಳನ್ನು ಆರೋಪಿಗಳು ಅಪಾರ ಪ್ರಮಾಣದಲ್ಲಿ ಸಂಗ್ರಹಣೆ ಮಾಡಿದ್ದರು.
ರಾಜ್ಯದಲ್ಲಿ ರಾಕೇಟ್ ಲಾಂಚರ್ ಅನ್ನು ಪರೀಕ್ಷೆಯನ್ನೂ ಈ ಆರೋಪಿಗಳು ನಡೆಸಿದ್ದರು. ಈ ಎಲ್ಲಾ ಕುಕೃತ್ಯಗಳಿಗೆ ಡಕಾಯಿತಿ ಮುಖಾಂತರ ಹಣ ಸಂಗ್ರಹಣೆ ಮಾಡುತ್ತಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಎನ್‌ಐಎ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಒಟ್ಟು 11 ಶಂಕಿತ ಉಗ್ರರರನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿತ್ತು. ಅಲ್ಲದೆ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ನಾಲ್ವರು ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಪ್ರಕರಣವನ್ನು ಆಲಿಸಿದ ಕೋರ್ಟ್, ಆರೋಪಿಗಳಿಗೆ ಇಂದು ಏಳು ವರ್ಷ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
Join The Telegram | Join The WhatsApp |