ಶಬರಿಮಲೆ: ಶಬರಿಮಲೆಯಲ್ಲಿ ಸತತ ಮೂರನೇ ದಿನವೂ ಯಾತ್ರಾರ್ಥಿಗಳ ಸಂಖ್ಯೆ 75,000 ದಾಟಿದೆ. ಭಾರಿ ಮಳೆ ನಡುವೆಯೂ ಸಾವಿರಾರು ಭಕ್ತರು ಸನ್ನಿಧಾನಕ್ಕೆ ಆಗಮಿಸುತ್ತಿದ್ದಾರೆ. ವೃಶ್ಚಿಕ ರಾಶಿಯ ಕಾರ್ತಿಕ ದಿನವಾದ ಶುಕ್ರವಾರ(ಡಿ.13) 78,483 ಯಾತ್ರಿಕರು ಭೇಟಿ ನೀಡಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ. ಈ ಪೈಕಿ 12,851 ಮಂದಿ ಸ್ಪಾಟ್ ಬುಕ್ಕಿಂಗ್ ಮೂಲಕ ದರ್ಶನ ಪಡೆದಿದ್ದಾರೆ.ಸನ್ನಿಧಾನದಲ್ಲಿ ಮಧ್ಯಾಹ್ನದ ವರೆಗೂ ಜನ ಸಂದಣಿ ಇರಲಿಲ್ಲ.
ಮಲೆ ಏರಿದವರು ಕಾಯದೆ ನೇರವಾಗಿ 18ನೇ ಮೆಟ್ಟಿಲು ಹತ್ತಿ ದರ್ಶನ ಪಡೆದಿದ್ದಾರೆ. ಆದರೆ ಮಧ್ಯಾಹ್ನದ ಬಳಿಕ ದಟ್ಟಣೆ ಉಂಟಾಗಿದೆ. ಯಾತ್ರಾರ್ಥಿಗಳು ದರ್ಶನ ಪಡೆಯಲು 3 ಗಂಟೆಗಳ ವರೆಗೆ ಕಾಯಬೇಕಾಗಿ ಬಂದಿದೆ. ರಾತ್ರಿ 10 ಗಂಟೆ ವೇಳೆ ಮುಖ್ಯ ಪಾದಚಾರಿ ಮಾರ್ಗದಲ್ಲಿ ಸರತಿ ಸಾಲು ಕಡಿಮೆಯಾಗಿದೆ. ನಡೆ ಮುಚ್ಚುವ ವೇಳೆ ಸರದಿ ಸಾಲು ಒಂದು ಸಾಲಿಗೆ ಇಳಿದಿದೆ. ಮಳೆ ಮತ್ತು ಮಂಜು ಮುಸುಕಿದ ವಾತಾವರಣದಲ್ಲೂ ಭಾರಿ ಸಂಖ್ಯೆಯ ಭಕ್ತರು ಪಂಪಾದಿಂದ ಸನ್ನಿಧಾನದ ವರೆಗೆ ಮಲೆ ಏರುತ್ತಿದ್ದಾರೆ.ಸನ್ನಿಧಾನದಲ್ಲಿ ತುಂತುರು ಮಳೆ ತಡರಾತ್ರಿವರೆಗೂ ಮುಂದುವರಿದಿದೆ. ಯಾತ್ರಾರ್ಥಿಗಳ ಸುರಕ್ಷತೆ ಸಮನ್ವಯಗೊಳಿಸಲು ಜಂಟಿ ಮಟ್ಟದ ಸಭೆ ನಡೆಸಲಾಗಿದೆ.
ಪ್ರಸ್ತುತ, ಯಾತ್ರಾರ್ಥಿಗಳಿಗೆ ಯಾವುದೇ ನಿರ್ಬಂಧ ಹೇರದಿದ್ದರೂ, ಅರಣ್ಯ ಪ್ರದೇಶ ಜಾರುತ್ತಿರುವುದರಿಂದ ಕಾನನ ಮಾರ್ಗದ ಮೂಲಕ ಬರುವ ಭಕ್ತರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಅರಣ್ಯ ದಾರಿಯಲ್ಲಿ ತೆರಳುವ ಭಕ್ತರಿಗೆ ಪೊಲೀಸರಿಂದ ಸೂಚನೆಶಬರಿಮಲೆ ಸನ್ನಿಧಾನಕ್ಕೆ ಅರಣ್ಯ ದಾರಿ ಮೂಲಕ ದರ್ಶನಕ್ಕೆ ಬರುವ ಯಾತ್ರಾರ್ಥಿಗಳು ವೇಳಾಪಟ್ಟಿಯನ್ನು ಅನುಸರಿಸಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಸತ್ರಂ ಪುಲ್ಲುಮೇಡು ಮೂಲಕ ಬೆಳಗ್ಗೆ 7 ರಿಂದ ಮಧ್ಯಾಹ್ನ 1 ರ ವರೆಗೆ ಹಾಗೂ ಮುಕ್ಕುಜಿ ಮೂಲಕ ಬೆಳಗ್ಗೆ 7 ರಿಂದ ಮಧ್ಯಾಹ್ನ 3ರ ವರೆಗೆ ಪ್ರವೇಶವನ್ನು ಅನುಮತಿಸಲಾಗಿದೆ.
ಬೆಳಗ್ಗೆ 8 ರಿಂದ 11ರ ವರೆಗೆ ಪುಲ್ಲುಮೇಡು ಶಬರಿಮಲೆಗೆ ಮೂಲಕ ಪ್ರವೇಶ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ರವಾನಿಸಿದ್ದಾರೆ.ನಿಗದಿತ ಮಾರ್ಗಗಳ ಮೂಲಕ ಯಾತ್ರಾರ್ಥಿಗಳು ಶಬರಿಮಲೆಗೆ ತೆರಳಬೇಕು. ಬೇಗ ತಲುಪಬೇಕೆಂದು ಅರಣ್ಯದ ಮೂಲಕ ಶಾರ್ಟ್ಕಟ್ ದಾರಿಗಳಲ್ಲಿ ಹೋಗಬಾರದು. ಪ್ಲಾಸ್ಟಿಕ್ ಹಾಗೂ ಬಟ್ಟೆಗಳನ್ನು ಕಾಡಿನಲ್ಲಿ ಎಸೆಯಬಾರದು. ಬಯೋ ಟಾಯ್ಲೆಟ್ ಬಳಸಬೇಕು. ಉಳಿದ ಆಹಾರಗಳನ್ನು ವನ್ಯಜೀವಿಗಳಿಗೆ ನೀಡಬಾರದು ಎಂದು ಸೂಚಿಸಲಾಗಿದೆ. ಬೆಂಗಳೂರಿನಿಂದ ವಿಶೇಷ ಬಸ್ ಆರಂಭಬೆಂಗಳೂರಿನಿಂದ ಶಬರಿಮಲೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ಕೆಎಸ್ಆರ್ಟಿಸಿ ವಿಶೇಷ ವೋಲ್ವೋ ಬಸ್ ಆರಂಭವಿಸಿದೆ.
ಬೆಂಗಳೂರು-ನೀಲಕ್ಕಲ್ (ಪಂಪಾ, ಶಬರಿಮಲೆ) ಮಾರ್ಗದ ಬಸ್ಗೆ ಕಳೆದ ನ.29 ರಂದು ಚಾಲನೆ ಸಿಕ್ಕಿದೆ. ಬೆಂಗಳೂರು-ಪಂಪಾ ಬಸ್ ಮಧ್ಯಾಹ್ನ 1.50 ಕ್ಕೆ ಶಾಂತಿನಗರ ಬಸ್ ನಿಲ್ದಾಣದಿಂದ ಹೊರಟು, ಮರುದಿನ ಬೆಳಗ್ಗೆ 6.45ಕ್ಕೆ ಪಂಪಾ ತಲುಪುತ್ತದೆ. ಹಿಂದಿರುಗುವ ದಿಕ್ಕಿನಲ್ಲಿ ಸಂಜೆ 6 ಗಂಟೆಗೆ ಪಂಪಾದಿಂದ ಹೊರಟು, ಮರುದಿನ ಬೆಳಗ್ಗೆ 10 ಗಂಟೆಗೆ ಬೆಂಗಳೂರು ತಲುಪುತ್ತದೆ. ಬೆಂಗಳೂರಿನಿಂದ ಶಬರಿಮಲೆಗೆ 1,750 ರೂ. ಟಿಕೆಟ್ ದರ ನಿಗದಿಪಡಿಸಲಾಗಿದೆ.ಕಾಡು ದಾರಿಯಲ್ಲಿ ಪಾದಯಾತ್ರೆ ಮೂಲಕ ಶಬರಿಮಲೆಗೆ ಬರುವ ಭಕ್ತರಿಗೆ ವಿಶೇಷ ದರ್ಶನ :
ಸಾಂಪ್ರದಾಯಿಕ ಕಾಡುದಾರಿಯಲ್ಲಿ ಪುಲ್ಲುಮೇಡು ಮತ್ತು ಎರುಮೇಲಿ ಮೂಲಕ ಪಾದಯಾತ್ರೆಯಲ್ಲಿ ಶಬರಿಮಲೆಗೆ ಆಗಮಿಸುವ ಭಕ್ತರಿಗೆ ಶೀಘ್ರದಲ್ಲೇ ವಿಶೇಷ ದರ್ಶನದ ವ್ಯವಸ್ಥೆ ಮಾಡಲಾಗುವುದು ಎಂದು ತಿರುವಾಂಕೂರ್ ದೇವಸಂ ಮಂಡಳಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ತಿಳಿಸಿದ್ದಾರೆ.ಅರಣ್ಯ ಇಲಾಖೆ ಜೊತೆಗೆ ಒಡಂಬಡಿಕೆ ಮಾಡಿಕೊಂಡು ಯಾತ್ರಾರ್ಥಿಗಳಿಗೆ ವಿಶೇಷ ಟ್ಯಾಗ್ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ಟ್ಯಾಗ್ ನೀಡುವ ಹೊಣೆ ಅರಣ್ಯ ಅಧಿಕಾರಿಗಳದ್ದೇ ಆಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಪಂಪಾದಿಂದ ಸ್ವಾಮಿ ಅಯ್ಯಪ್ಪನ್ ಮಾರ್ಗವಾಗಿ ಅವರು ಸನ್ನಿಧಾನಕ್ಕೆ ತೆರಳಬಹುದು. ನೀಲಿಮಲೆ ಮಾರ್ಗವಾಗಿ ಬರುವ ಭಕ್ತರಿಗೂ ವಿಶೇಷ ದರ್ಶನ ಸಿಗಲಿದೆ ಎಂದು ಅವರು ಹೇಳಿದ್ದಾರೆ.
‘ಮರಕ್ಕೂಟಂನಲ್ಲಿ ಈ ವಿಶೇಷ ಟ್ಯಾಗ್ಗಳನ್ನು ಹೊಂದಿರುವ ಯಾತ್ರಾರ್ಥಿಗಳು ಶರಣ್ಕುತಿ ಮಾರ್ಗವನ್ನು ತಪ್ಪಿಸಿ ಚಂದ್ರನಂದನ್ ರಸ್ತೆಯ ಮೂಲಕ ಸನ್ನಿಧಾನವನ್ನು ಪ್ರವೇಶಿಸಬಹುದು. ಪುಲ್ಲುಮೇಡು ಮತ್ತು ಎರುಮೇಲಿಯಿಂದ ಈ ಗೊತ್ತುಪಡಿಸಿದ ಅರಣ್ಯ ಮಾರ್ಗಗಳ ಮೂಲಕ ಬರುವವರು ವಿಶೇಷ ಟ್ಯಾಗ್ಗಳನ್ನು ಹೊಂದಿರುವ ಯಾತ್ರಾರ್ಥಿಗಳು ಶರಣ್ಕುತಿ ಮಾರ್ಗವನ್ನು ತಪ್ಪಿಸಿ ಚಂದ್ರನಂದನ್ ರಸ್ತೆಯ ಮೂಲಕ ಸನ್ನಿಧಾನವನ್ನು ಪ್ರವೇಶಿಸಬಹುದು. ಪುಲ್ಲುಮೇಡು ಮತ್ತು ಎರುಮೇಲಿಯಿಂದ ಈ ಗೊತ್ತುಪಡಿಸಿದ ಅರಣ್ಯ ಮಾರ್ಗಗಳ ಮೂಲಕ ಬರುವವರು ವಿಶೇಷ ಟ್ಯಾಗ್ಗಳನ್ನು ಸ್ವೀಕರಿಸುತ್ತಾರೆ. ದರ್ಶನಕ್ಕಾಗಿ ದೇವಾಲಯದಲ್ಲಿ ಮೀಸಲಾದ ಸರದಿಯನ್ನು ಬಳಸಬಹುದು ಎಂದು ಅವರು ಹೇಳಿದ್ದಾರೆ.