ರಾಯಬಾಗ: ರಾಜ್ಯ ಸರ್ಕಾರ ಜಾರಿಗೊಳಿಸಿರುವ 7ನೇ ವೇತನ ಆಯೋಗದಲ್ಲಿ ನಿವೃತ್ತ ಸರ್ಕಾರಿ ನೌಕರರಿಗೆ ಅನ್ಯಾಯವಾಗಿದ್ದು, ಪರಿಷ್ಕೃತ ವೇತನಕ್ಕೆ ಅನುಗುಣವಾಗಿ ನಿವೃತ್ತಿ ಉಪಧನ, ಪಿಂಚಣಿ ಮತ್ತು ಗಳಿಕೆ ರಜೆಯ ನಗದೀಕರಣದ ಸೌಲಭ್ಯಗಳಲ್ಲಿ ಅನ್ಯಾಯವಾಗಿದೆ’ ಎಂದು ಆರೋಪಿಸಿ ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ಪದಾಧಿಕಾರಿಗಳು ಆರೋಪಿಸಿದರು.

ಅನ್ಯಾಯ ಸರಿಪಡಿಸಲು ಒತ್ತಾಯಿಸಿ ಶಾಸಕ ಡಿ.ಎಂ.ಐಹೊಳೆ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಕರ್ನಾಟಕ ನಿವೃತ್ತ ನೌಕರ ಸಂಘದ ರಾಜ್ಯ ಸಂಚಾಲಕ ಚಂದ್ರಶೇಖರ ಅರಭಾವಿ ಮಾತನಾಡಿ, 7ನೇ ವೇತನ ಆಯೋಗದ ವರದಿ 2022ರ ಜುಲೈಗೆ ಅನ್ವಯವಾಗುವಂತೆ ಅಂಗೀಕರಿಸಬೇಕಿತ್ತು. ಆದರೆ ಸರ್ಕಾರ ಈ ಶಿಫಾರಸನ್ನು ಗಣನೆಗೆ ತೆಗೆದುಕೊಂಡಿಲ್ಲ. 2022ರ ಜುಲೈನಿಂದ 2024ರ ಜುಲೈ ವರೆಗಿನ ಅವಧಿಯಲ್ಲಿ ನಿವೃತ್ತರಾದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 1,200 ನೌಕರರಿಗೆ ಅನ್ಯಾಯವಾಗಿದ್ದು, ಸರ್ಕಾರ ಕೂಡಲೇ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಹೇಳಿದರು.

ಶಾಸಕ ಡಿ.ಎಂ.ಐಹೊಳೆ ಮಾತನಾಡಿ, ಮುಂಬರುವ ಸಚಿವ ಸಂಪುಟದಲ್ಲಿ ಪಕ್ಷಾತೀತವಾಗಿ ಈ ಸಮಸ್ಯೆ ಬಗ್ಗೆ ಧ್ವನಿ ಎತ್ತುವೆ ಎಂದರು.

ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಿ.ಎಸ್.ಡಿಗ್ರಜ, ತಾಲೂಕು ನಿವೃತ್ತ ನೌಕರರ ಸಂಘದ ಸಂಚಾಲಕ ಬಸವರಾಜ ಕುಂದರಗಿ, ಜೆ.ಎಸ್.ಜುಮ್ಮಾಯಿ, ಎಂ.ಆ‌ರ್.ಮಠದ, ಸಿ.ಎಂ.ಸಾಂಗ್ಲಿ, ಜೆ.ಆರ್.ದಿನಕರ, ಪಿ.ಎಂ.ಪಾಟೀಲ, ಎಸ್.ಟಿ.ಮಾಡಲಗಿ, ಎ.ಬಿ.ದೊಡಮನಿ ಉಪಸ್ಥಿತರಿದ್ದರು.