ಮುಂಬೈ : ಸೋಮವಾರ ಸಂಜೆ ಮುಂಬೈನ ಘಾಟ್‌ಕೋಪರ್‌ನಲ್ಲಿ ಬಲವಾದ ಧೂಳಿನ ಬಿರುಗಾಳಿಗೆ ಸಿಲುಕಿ ಪೆಟ್ರೋಲ್‌ ಬಂಕ್‌ ಮೇಲೆ ಕುಸಿದುಬಿದ್ದ ಬೃಹತ್ ಜಾಹೀರಾತು ಫಲಕದ ಅವಶೇಷಗಳ ಅಡಿಯಲ್ಲಿ ಹತ್ತಾರು ಜನರು ಸಿಲುಕಿರುವ ಆತಂಕವಿದೆ. ಈ ಘಟನೆಯಲ್ಲಿ 8 ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದ್ದು, 60 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಜೆ 04:30 ರ ಸುಮಾರಿಗೆ ಮುಂಬೈನ ಘಾಟ್‌ಕೋಪರ್‌ನ ಪಂತ್‌ನಗರದ ಪೂರ್ವ ಎಕ್ಸ್‌ಪ್ರೆಸ್ ಹೆದ್ದಾರಿಯ ಉದ್ದಕ್ಕೂ ಪೊಲೀಸ್ ಗ್ರೌಂಡ್ ಪೆಟ್ರೋಲ್ ಪಂಪ್‌ ಮೇಲೆ 100 ಅಡಿಗೂ ಹೆಚ್ಚು ಎತ್ತರದ ಕಬ್ಬಿಣದ ಹೋರ್ಡಿಂಗ್ ಬಿದ್ದು ನಾಲ್ಕು ಜನರು ಸಾವಿಗೀಡಾಗಿದ್ದಾರೆ ಮತ್ತು 100 ಕ್ಕೂ ಹೆಚ್ಚು ಜನರು ಸಿಕ್ಕಿಬಿದ್ದಿರುವ ಭಯವಿದೆ ಎಂದು ಬೆಳವಣಿಗೆಯ ಬಗ್ಗೆ ತಿಳಿದಿರುವ ಬಿಎಂಸಿ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ವರದಿಯೊಂದು ತಿಳಿಸಿದೆ.ಪೆಟ್ರೋಲ್‌ ಬಂಕ್‌ ಎದುರೇ ಜಾಹೀರಾತು ಫಲಕವಿತ್ತು. ಜಾಹೀರಾತು ಫಲಕ ಬೀಳುತ್ತಿರುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದೆ.
ಬಿಲ್‌ಬೋರ್ಡ್‌ನ ಲೋಹದ ಚೌಕಟ್ಟು ಇಂಧನ ಕೇಂದ್ರದಲ್ಲಿದ್ದ ಹಲವಾರು ಕಾರುಗಳನ್ನು ನಿಲ್ಲಿಸಿದ್ದ ಸ್ಥಳದ ಮೇಲ್ಛಾವಣಿ ಮೇಲೆ ಬಿದ್ದು ಅನಾಹುತ ಸಂಭವಿಸಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳು ಸ್ಥಳದಲ್ಲಿದ್ದು, ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ಹುಡುಕಾಟ ನಡೆಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ರಾಜ್ಯ ಸರ್ಕಾರವು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದೆ ಎಂದು ಹೇಳಿದ್ದಾರೆ.
ಮುಂಬೈನಲ್ಲಿ ಉಂಟಾದ ಬಲವಾದ ಧೂಳಿನ ಚಂಡಮಾರುತದಿಂದಾಗಿ ಸಾರಿಗೆ ಅಸ್ತವ್ಯಸ್ತವಾಯಿತು, ಮರಗಳು ಮತ್ತು ವಿವಿಧ ರಚನೆಗಳನ್ನು ಕಿತ್ತುಹಾಕಿತು ಮತ್ತು ಮುಂಬೈನ ಅನೇಕ ಜಿಲ್ಲೆಗಳಲ್ಲಿ ವಿದ್ಯುತ್ ನಿಲುಗಡೆಗೆ ಕಾರಣವಾಯಿತು.
ಸ್ಥಳೀಯ ರೈಲುಗಳು, ಮೆಟ್ರೋ ನೆಟ್‌ವರ್ಕ್‌ನ ಒಂದು ವಿಭಾಗ ಮತ್ತು ವಿಮಾನ ನಿಲ್ದಾಣ ಸೇವೆಗಳನ್ನು ಕತ್ತಲೆಯಾದ ಆಕಾಶದ ಮಧ್ಯೆ ತಾತ್ಕಾಲಿಕವಾಗಿ ನಿಲ್ಲಿಸಲಾಯಿತು.

ಮತ್ತೊಂದು ಘಟನೆಯಲ್ಲಿ, ಬಲವಾದ ಚಂಡಮಾರುತದಿಂದಾಗಿ ವಡಾಲಾದಲ್ಲಿ ಕಟ್ಟಡದ ಎದುರು ನಿಂತಿದ್ದ ಎತ್ತರದ ಲೋಹದ ರಚನೆ ಸಹ ಕುಸಿದಿದೆ. ವಡಾಲಾದಲ್ಲಿ ಸಂಜೆ 4:22 ಕ್ಕೆ, ಶ್ರೀ ಜಿ ಟವರ್ ಬಳಿ ಈ ಲೋಹದ ರಚನೆ ಕುಸಿದಿದೆ. ಹಲವಾರು ವಾಹನಗಳು ರಸ್ತೆಬದಿಯಲ್ಲಿ ನಿಂತಿದ್ದು, ಒಬ್ಬ ವ್ಯಕ್ತಿ ಕಾರಿನೊಳಗೆ ಸಿಕ್ಕಿಹಾಕಿಕೊಂಡಿದ್ದಾನೆ. ಮುಂಬೈ ಅಗ್ನಿಶಾಮಕ ದಳ (ಎಂಎಫ್‌ಬಿ) ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.
ನಗರದಲ್ಲಿನ ಹವಾಮಾನ ವೈಪರೀತ್ಯ ಮತ್ತು ಧೂಳಿನ ಬಿರುಗಾಳಿಯಿಂದಾಗಿ ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (ಸಿಎಸ್‌ಎಂಐಎ) ಕಡಿಮೆ ಗೋಚರತೆ ಮತ್ತು ಬಿರುಸಾದ ಗಾಳಿಯಿಂದಾಗಿ ಸುಮಾರು 66 ನಿಮಿಷಗಳ ಕಾಲ ವಿಮಾನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಸಬೇಕಾಯಿತು ಎಂದು ಮುಂಬೈ ವಿಮಾನ ನಿಲ್ದಾಣವು ಹೇಳಿಕೆಯಲ್ಲಿ ತಿಳಿಸಿದೆ.
ಭಾರತೀಯ ಹವಾಮಾನ ಇಲಾಖೆ ಮುಂಬೈ ಥಾಣೆ, ಪಾಲ್ಘರ್ ಮತ್ತು ಮುಂಬೈನಲ್ಲಿ ಮಿಂಚು ಮತ್ತು ಗುಡುಗಿನಿಂದ ಕೂಡಿದ ಸಾಧಾರಣದಿಂದ ಭಾರೀ ಮಳೆ ಮಳೆಯಾಗುವ ಮುನ್ಸೂಚನೆ ನೀಡಿದೆ.

ತಂತಿಯ ಮೇಲೆ ಜಾಹೀರಾತು ಫಲಕ ಬಿದ್ದ ನಂತರ ಆರೆ ಮತ್ತು ಅಂಧೇರಿ ಪೂರ್ವ ನಡುವೆ ಮೆಟ್ರೋ ಓಡಲಿಲ್ಲ. ಬಲವಾದ ಗಾಳಿಯಿಂದಾಗಿ ಥಾಣೆ ಮತ್ತು ಮುಲುಂಡ್ ನಡುವಿನ ಓವರ್‌ ಹೆಡ್‌ ಉಪಕರಣಗಳ ಕಂಬವು ಬಾಗಿದ ನಂತರ ಉಪನಗರ ರೈಲುಗಳ ಸಂಚಾರದ ಮೇಲೆ ಪರಿಣಾಮ ಬೀರಿತು. ಮುಖ್ಯ ಮಾರ್ಗದಲ್ಲಿ ಉಪನಗರ ಸೇವೆಗಳನ್ನು ನಿಲ್ಲಿಸಲಾಗಿದೆ ಎಂದು ಕೇಂದ್ರ ರೈಲ್ವೆಯ ಮುಖ್ಯ ವಕ್ತಾರರು ತಿಳಿಸಿದ್ದಾರೆ.
ಧೂಳಿನ ಬಿರುಗಾಳಿಗೆ ನಗರದ ಕೆಲವೆಡೆ ಮರಗಳು ಧರೆಗುರುಳಿವೆ. ಥಾಣೆ, ಅಂಬರನಾಥ, ಬದ್ಲಾಪುರ, ಕಲ್ಯಾಣ ಮತ್ತು ಉಲ್ಲಾಸನಗರದಲ್ಲಿ ಸಾಧಾರಣ ಮಳೆಯಾಗಿದೆ.