ಬೆಳಗಾವಿ: ಬೆಳಗಾವಿಯಲ್ಲಿ ಪ್ರತ್ಯೇಕಿಸುವ ಕುರಿತಾಗಿ ಮಾಜಿ ಸಿಎಂ ಉದ್ಧವ್ ಠಾಕ್ರೆ ಮಗ ಆದಿತ್ಯ ಠಾಕ್ರೆ ನೀಡಿರುವ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗುತ್ತಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಖಡಕ್ ಆಗಿ ತಿರುಗೇಟು ನೀಡಿದರೂ, ಕರ್ನಾಟಕ ಮಹಾರಾಷ್ಟ್ರ ಗಡಿಭಾಗದಲ್ಲಿ 865 ಹಳ್ಳಿಗಳನ್ನು ಮರಾಠಿ ಗ್ರಾಮ ಎಂದು ಘೋಷಿಸಲಾಗಿದ್ಯಾ? ಎಂದು ವಿಧಾನಪರಿಷತ್ ಸದಸ್ಯರೊಬ್ಬರ ಪ್ರಶ್ನೆಗೆ ಸರ್ಕಾರ ಕೊಟ್ಟ ಉತ್ತರವೇ ಕುತೂಹಲ ಕೆರಳಿಸಿದೆ.

ವಿಧಾನಪರಿಷತ್ ಸದಸ್ಯ ಎಂ ನಾಗರಾಜು ಅವರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಿಗೆ ಚುಕ್ಕೆ ಗುರುತಿಲ್ಲದ ಪ್ರಶ್ನೆಯನ್ನು ಕೇಳಿದ್ದರು. ಮಹಾರಾಷ್ಟ್ರ ಸರ್ಕಾರವು ಕರ್ನಾಟಕದ ಗಡಿ ಭಾಗದ ಸುಮಾರು 865 ಹಳ್ಳಿಗಳನ್ನು ಮರಾಠ ಭಾಷಿಗರ ಗ್ರಾಮಗಳೆಂದು ಘೋಷಿಸಿ ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಶೇ 3 ರಷ್ಟು ಮೀಸಲಾತಿ ನೀಡುತ್ತಿರುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಆದರೆ ಇದಕ್ಕೆ ಶಿಕ್ಷಣ ಇಲಾಖೆ ‘ಇಲ್ಲ’ ಎಂದು ಉತ್ತರವನ್ನು ನೀಡಿದೆ. ಅಷ್ಟೇ ಅಲ್ಲದೆ, ಕರ್ನಾಟಕ – ಮಹಾರಾಷ್ಟ್ರ ಗಡಿ ಭಾಗದ್ಲಿ ಕನ್ನಡಿಗರು ವಾಸಿಸುತ್ತಿರುವ ಹಳ್ಳಿಗಳನ್ನು ಕನ್ನಡ ಭಾಷಿಗರ ಗ್ರಾಮಗಳೆಂದು ಘೋಷಿಸಿ ಶೈಕ್ಷಣಿಕ ಮತ್ತು ಉದ್ಯೋಗಗಳಲ್ಲಿ ಮೀಸಲಾತಿ ನೀಡುವ ಬಗ್ಗೆ ಗಮನ ಹರಿಸಿದೆಯೇ ಎಂಬ ಪಶ್ನೆಗೂ ಉತ್ತರ ಇಲ್ಲ ಎಂದು ನೀಡಲಾಗಿದೆ.
ಈ ಪ್ರದೇಶದಲ್ಲಿರುವ ಕನ್ನಡಿಗರು ಅನಿವಾರ್ಯವಾಗಿ ಮರಾಠಿ ಶಾಲೆಗಳಿಗೆ ಸೇರ್ಪಡೆಯಾಗುವ ಅನಿವಾರ್ಯತೆ ಎದುರಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಜಾಗೃತಿ ಕ್ರಮಗಳೇನು ಎಂಬ ಪ್ರಶ್ನೆಗೆ, ಗಡಿಭಾಗದ ಖಾನಾಪೂರ ವಲಯದಲ್ಲಿ ಗಡಿ ಪ್ರದೇಶಕ್ಕೆ ಹೊಂದಿಕೊಂಡಂತೆ 7 ಕನ್ನಡ ಮಾಧ್ಯಮ ಶಾಲೆಗಳಿವೆ. ಮತ್ತು ಬೆಳಗಾವಿ ಗ್ರಾಮೀಣ ವಲಯದ ಗಡಿ ಪ್ರದೇಶಕ್ಕೆ ಹೊಂದಿಕೊಂಡಂತೆ 14 ಕನ್ನಡ ಪ್ರಾಥಮಿಕ ಶಾಲೆಗಳಿವೆ ಹಾಗೂ 2 ಕನ್ನಡ ಮಾಧ್ಯಮ ಪ್ರೌಢ ಶಾಲೆಗಳಿವೆ. ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಮರಾಠಿ ಶಾಲೆ ಮಕ್ಕಳ ಸಂಖ್ಯೆಯ ಕೊರತೆಯಿಂದ ಮುಚ್ಚಲ್ಪಟ್ಟಿದೆ. ಇದೀಗ ಮತ್ತೆ ಪುನರಾರಂಭಗೊಂಡಿದ್ದು, ಕನ್ನಡ ಮಾಧ್ಯಮದಲ್ಲೇ ಶಾಲೆ ಪ್ರಾರಂಭವಾಗಿದೆ.ಶಿಕ್ಷಕರ ಹುದ್ದೆಯನ್ನು ನಿಯೋಜನೆ ಮಾಡಲಾಗಿದ್ದು, 1 ರಿಂದ 5 ನೇ ತರಗತಿಯ ವರೆಗೆ 25 ಮಕ್ಕಳಿದ್ದಾರೆ ಎಂದು ಶಿಕ್ಷಣ ಇಲಾಖೆ ಉತ್ತರ ನೀಡಿದೆ.ಬೆಳಗಾವಿ ಹಾಗೂ ಮಹಾರಾಷ್ಟ್ರ ಗಡಿ ಭಾಗದಲ್ಲಿ ಮರಾಠಿ ಸಂಘಟನೆಗಳು ಪದೇ ಪದೇ ಉದ್ವಿಗ್ನ ವಾತಾವರಣ ಸೃಷ್ಟಿ ಮಾಡುತ್ತಿರುತ್ತಾರೆ.
ಇದಕ್ಕೆ ತುಪ್ಪ ಸುರಿಯುವಂತೆ ಮಹಾರಾಷ್ಟ್ರದ ರಾಜಕೀಯ ನಾಯಕರು ಹೇಳಿಕೆ ಕೊಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಗಡಿಭಾಗದ ಪ್ರದೇಶಗಳಲ್ಲ ಕನ್ನಡವನ್ನು ಗಟ್ಟಿಯಾಗಿ ಬೇರೂರಿಸುವ ನಿಟ್ಟಿನಲ್ಲಿ ಸರ್ಕಾರ ಆದ್ಯತೆಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.