ಮೂಡಲಗಿ: ರಾಜಕೀಯ ಹಿನ್ನಲೆ ಇಲ್ಲದ ಅಭಿವೃದ್ದಿ ಪರ ಕಳಕಳಿ ಇರುವ ಒಂದು ಲಕ್ಷ ಯುವಕರು ರಾಜಕೀಯ ಕ್ಷೇತ್ರ ಪ್ರವೇಶ ಮಾಡುವ ಮೂಲಕ ರಾಜ್ಯದಲ್ಲಿ ಮೌಲ್ಯಾಧಾರಿತ ರಾಜಕಾರಣ ಜಾರಿಗೆ ತಂದು ಕುಲುಷಿತಗೊಂಡಿರುವ ರಾಜಕೀಯ ವ್ಯವಸ್ಥೆಯನ್ನು ಪರಿಶುದ್ದಗೊಳಿಸಬೇಕಾದ ಅಗತ್ಯವಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಬುಧವಾರ ಅ-02 ರಂದು ಕಲ್ಲೋಳಿ ಪಟ್ಟಣದಲ್ಲಿ ಬಿಜೆಪಿ ಸದಸ್ಯತಾ ಅಭಿಯಾನ 2024ರ ಅಂಗವಾಗಿ ಆಯೋಜಿಸಿದ ಕಾರ್ಯಕರ್ತರ ಸಭೆಯಲ್ಲಿ ಮಿಸ್ ಕಾಲ್ ನೀಡುವ ಮೂಲಕ ಸದಸ್ಯತಾ ಅಭಿಯಾನಕ್ಕೆ ಚಾಲನೆ ನೀಡಿ ಸಂಸದ ಈರಣ್ಣ ಕಡಾಡಿ ಅವರು ಮಾತನಾಡಿದರು.
ಯಾರು ರಾಜಕೀಯ ಕ್ಷೇತ್ರವನ್ನು ಕುಲುಷಿತಗೊಳಿಸಿದ್ದಾರೋ ಅಂತವರೇ ರಾಜಕಾರಣವನ್ನು ಪರಿಶುದ್ದಗೊಳಿಸುವ ಬಗ್ಗೆ ಮಾತನಾಡುತ್ತಾರೆ. ಇದು ಅತ್ಯಂತ ಹಾಸ್ಯಾಸ್ಪದ ಸಂಗತಿ. ಆದಕಾರಣ ಯುವಕರು ರಾಜಕೀಯ ಕ್ಷೇತ್ರದಲ್ಲಿ ಗಟ್ಟಿಯಾಗಿ ಬೇರುರೂವ ಮೂಲಕ ಕುಟುಂಬ ರಾಜಕಾರಣ, ಭ್ರಷ್ಟಾಚಾರ, ಸೃಜನ ಪಕ್ಷಪಾತಗಳನ್ನು ಧಿಕ್ಕರಿಸಿ ಮೌಲ್ಯಾಧಾರಿತ ರಾಜಕಾರಣ ಮಾಡುವ ಮೂಲಕ ರಾಜಕೀಯ ಪಕ್ಷಗಳ ಆಂತರಿಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕಾಗಿ ವಿನಂತಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರಿಂದ ಚಾಲನೆಗೊಂಡಿರುವ ಬಿಜೆಪಿ ಸದಸ್ಯತಾ ಅಭಿಯಾನ ದೇಶದಾದ್ಯಂತ ವೇಗ ಪಡೆದಿದೆ. ಪಕ್ಷದ ಕಾರ್ಯಕರ್ತರು ಗ್ರಾಮದ ಪ್ರತಿ ಮನೆ ಮನೆಗೂ ತೆರಳಿ ಬಿಜೆಪಿ ಪಕ್ಷದ ತತ್ವ ಸಿದ್ದಾಂತ ಹಾಗೂ ಪ್ರಧಾನಿ ಮೋದಿ ಆಡಳಿತದ ಬಗ್ಗೆ ಜನರಿಗೆ ಮನವರಿಕೆ ಮಾಡುವ ಕೆಲಸ ಮಾಡಬೇಕು ಇದು ಮುಂಬರುವ ಜಿ,ಪಂ, ತಾ.ಪಂ ಸೇರಿದಂತೆ ಸ್ಥಳೀಯ ಚುನಾವಣೆಗೆ ಸಹಕಾರಿಯಾಗಲಿದೆ ಎಂದರು.
ಹಿ0ದೆಲ್ಲ ಸದಸ್ಯತಾ ಅಭಿಯಾನಗಳು ಆಫ್‌ಲೈನ್ ಮುಖಾಂತರ ನಡೆಸಲಾಗುತ್ತಿತ್ತು. ಕಾಲಕ್ಕೆ ತಕ್ಕಂತೆ ಬಿಜೆಪಿ ಪಕ್ಷವು ಆಧುನಿಕತೆಗೆ ಮಾರ್ಪಾಡು ಹೊಂದಿದ್ದು, ಅನ್‌ಲೈನ್ ಮುಖಾಂತರ ಪಕ್ಷದ ಸದಸ್ಯತ್ವ ನೋಂದಣಿಗೆ ಮುಂದಾಗಿದೆ. ದೂರವಾಣಿ 8800002024 ಸಂಖ್ಯೆಗೆ ಮಿಸ್ ಕಾಲ್ ಕೊಡುವ ಮೂಲಕ ಸದಸ್ಯತ್ವ ಪಡೆಯಬಹುದು. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಪಕ್ಷದ ಸದಸ್ಯರಾಗಲು ಅರ್ಹತೆ ಹೊಂದಿದ್ದಾರೆ. ಲಿಂಗ, ಜಾತಿ, ಧರ್ಮ ಯಾವುದೇ ಬೇಧವಿಲ್ಲದೇ ಪ್ರತಿಯೊಬ್ಬರನ್ನು ಪಕ್ಷದ ಸದಸ್ಯರನ್ನಾಗಿಸಲು ಮುಂದಾಗಬೇಕು ಎಂದರು. ಇದೇ ಸಂದರ್ಭದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಾಗೂ ದೇಶದ ಮಾಜಿ ಪ್ರಧಾನ ಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಅವರ ಜಯಂತಿಯ ಅಂಗವಾಗಿ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.
ಪ್ರಕಾಶ ಮಾದರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಶೈಲ ಪೂಜೇರಿ ನಿರೂಪಿಸಿದರು. ಪರಪ್ಪ ಗಿರೆಣ್ಣವರ ವಂದಿಸಿದರು.
ಪ್ರಮುಖರಾದ ಬಸವರಾಜ ಕಡಾಡಿ, ರಾಯಪ್ಪ ಬಾನಸಿ, ಶ್ರೀಕಾಂತ ಕೌಜಲಗಿ, ಆನಂದ ಮೂಡಲಗಿ, ಸದಾಶಿವ ನೇರ್ಲಿ, ಬಸವರಾಜ ಮಾಡಲಗಿ, ಬಸವರಾಜ ಹಿಡಕಲ್, ಶ್ರೀಶೈಲ ಢವಳೇಶ್ವರ, ಮಹಾದೇವ ಮಸರಗುಪ್ಪಿ, ಬಸವರಾಜ ಗಾಡವಿ, ಬಾಳೇಶ ಸಕ್ರೆಪ್ಪಗೋಳ, ಬಸವರಾಜ ಹುಡೇದ, ಲಗಮಣ್ಣ ಕುಳ್ಳೂರ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.