ಭೋಪಾಲ್: ಅವನು ಅನಕ್ಷರಸ್ಥ, ಆದರೆ ಘೋರ ಅಪರಾಧಗಳ ಸರಮಾಲೆಯನ್ನು ಮಾಡಲು ತಂತ್ರಜ್ಞಾನ ಬಳಸಿಕೊಳ್ಳುವುದನ್ನು ಕಲಿತು ಹಲವಾರು ಹುಡುಗಿಯರ ಮೇಲೆ ಅತ್ಯಾಚಾರ ಮಾಡಿದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಕನಿಷ್ಠ ಏಳು ಬುಡಕಟ್ಟು ಹುಡುಗಿಯರ ಮೇಲೆ 30 ವರ್ಷದ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ. ಆತ ಕಾಲೇಜು ಪ್ರಾಧ್ಯಾಪಕಿಯಂತೆ ಪೋಸ್ ನೀಡಲು ಧ್ವನಿ ಬದಲಾಯಿಸುವ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಹುಡುಗಿಯರ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಹೇಳಲಾಗಿದೆ. ಆರೋಪಿ ವಿರುದ್ಧ ಇದುವರೆಗೆ 4 ಪ್ರಕರಣಗಳು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಆರೋಪಿಯನ್ನು ಬ್ರಜೇಶ್ ಪ್ರಜಾಪತಿ ಎಂದು ಗುರುತಿಸಲಾಗಿದೆ. ಈ ವರ್ಷದ ಜನವರಿ ಮತ್ತು ಮೇ ನಡುವೆ ಹುಡುಗಿಯರ ಮೇಲೆ ಅತ್ಯಾಚಾರ ನಡೆದಿರುವುದಾಗಿ ವರದಿಯಾಗಿದೆ.

“ಆರೋಪಿಯು ಆಪ್ ಸ್ಟೋರ್‌ನಲ್ಲಿ ಲಭ್ಯವಿರುವ ಧ್ವನಿ ಬದಲಾಯಿಸುವ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತು ಈ ಹುಡುಗಿಯರನ್ನು ಟಾರ್ಗೆಟ್‌ ಮಾಡಲು ತನ್ನ ಧ್ವನಿಯನ್ನು ಕಾಲೇಜು ಪ್ರಾಧ್ಯಾಪಕಿಯ ಧ್ವನಿಯಂತೆ ಬದಲಾಯಿಸಲು ಅಪ್ಲಿಕೇಶನ್ ಬಳಸಿಕೊಂಡಿದ್ದಾನೆ” ಎಂದು ಅವರು ಹೇಳಿದ್ದಾರೆ.
ವರದಿಯ ಪ್ರಕಾರ, ಅತ್ಯಾಚಾರ ಸಂತ್ರಸ್ತೆಯರೆಲ್ಲರೂ ಬುಡಕಟ್ಟು ಸಮುದಾಯದವರು ಮತ್ತು ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ ಸೇರಿದವರು. ಪೊಲೀಸರ ಪ್ರಕಾರ, ಇದುವರೆಗೆ ನಾಲ್ವರು ಹುಡುಗಿಯರು ದೂರು ನೀಡಲು ಮುಂದೆ ಬಂದಿದ್ದಾರೆ. ಆರೋಪಿಯು ಇತರ ಮೂವರ ಮೇಲೆಯೂ ಅತ್ಯಾಚಾರವೆಸಗಿರುವುದಾಗಿ ಒಪ್ಪಿಕೊಂಡಿದ್ದಾನೆ.

“ಒಂದು ಪ್ರಕರಣದಲ್ಲಿ ಆರೋಪಿಯು ಯುವತಿ ಮತ್ತು ಆಕೆಯ ಅಪ್ರಾಪ್ತ ಸಹೋದರಿಯನ್ನು ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಆತನ ವಿರುದ್ಧ ಪೋಕ್ಸೊ ಕಾಯ್ದೆಯನ್ನೂ ಹಾಕಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಯು ಕೂಲಿ ಕೆಲಸ ಮಾಡುತ್ತಿದ್ದು, ಯೂಟ್ಯೂಬ್ ಸಹಾಯದಿಂದ ‘ಧ್ವನಿ ಬದಲಾಯಿಸುವ’ ಅಪ್ಲಿಕೇಶನ್ ಅನ್ನು ಹೇಗೆ ಬಳಸಬೇಕೆಂದು ಕಲಿತಿದ್ದಾನೆ. ಸಹ-ಆರೋಪಿಗಳಾದ ರಾಹುಲ್ ಪ್ರಜಾಪತಿ ಮತ್ತು ಸಂದೀಪ ಪ್ರಜಾಪತಿ ಸಹಾಯದಿಂದ ಮೊದಲ ಸಂತ್ರಸ್ತೆಯ ಫೋನ್ ಸಂಖ್ಯೆಯನ್ನು ಆತ ಪಡೆದುಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿ ವೇತನ ನೀಡುವ ನೆಪದಲ್ಲಿ ಆರೋಪಿಯು ಕಾಲೇಜು ಹುಡುಗಿಯನ್ನು ಪ್ರತ್ಯೇಕ ಸ್ಥಳಕ್ಕೆ ಕರೆಸಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಾಧ್ಯಾಪಕಿಯಂತೆ ನಟಿಸಿ, ತನ್ನ ಮಗ ನಿಮ್ಮನ್ನು ಭೇಟಿಯಾಗುತ್ತಾನೆ ಮತ್ತು ನಿಮ್ಮನ್ನು ನಮ್ಮ ಮನೆಗೆ ಕರೆದೊಕೊಂಡು ಬರುತ್ತಾನೆ. ಹಾಗೂ ಅಲ್ಲಿ ವಿದ್ಯಾರ್ಥಿವೇತನ ನೀಡಲಾಗುತ್ತದೆ ಎಂದು ಹುಡುಗಿಯರಿಗೆ ಹೇಳಿ ನಂಬಿಸುತ್ತಿದ್ದ.

ಹುಡುಗಿಯರು ಪ್ರಾಧ್ಯಾಪಕಿಯೇ ಹೇಳಿದ್ದಾರೆಂದು ನಂಬಿ ಈತ ಹೇಳಿದ ಸ್ಥಳಕ್ಕೆ ಬಂದ ನಂತರ, ಆರೋಪಿಯು ಅವರನ್ನು ಅರಣ್ಯ ಪ್ರದೇಶದ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಅಲ್ಲಿ ತನ್ನ ಕುಟುಂಬಕ್ಕೆ ಸೇರಿದ, ಆದರೆ ಯಾರೂ ವಾಸವಾಗದ ಮನೆಯಲ್ಲಿ ಅವರ ಮೇಲೆ ಅತ್ಯಾಚಾರ ಎಸಗಿದ್ದಾನೆ. ವಿದ್ಯಾರ್ಥಿನಿಯರಿಗೆ ದೂರು ನೀಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕುತ್ತಿದ್ದ ಎಂದು ಸಿಧಿ ಎಸ್ಪಿ ತಿಳಿಸಿದ್ದಾರೆ. ಅಲ್ಲದೆ, ಇತರ ಹುಡುಗಿಯರ ಸಂಪರ್ಕ ಸಾಧಿಸಲು ಹುಡುಗಿಯರ ಫೋನ್‌ಗಳನ್ನು ಕಳ್ಳತನ ಮಾಡುತ್ತಿದ್ದ. “ಅವರು ಯಾದೃಚ್ಛಿಕವಾಗಿ ಫೋನ್ ಸಂಖ್ಯೆಗಳಿಗೆ ಕರೆ ಮಾಡುತ್ತಿದ್ದ ಮತ್ತು ದಿನಕ್ಕೆ 10-20 ಬಾರಿ ಅವರಿಗೆ ಕರೆ ಮಾಡುತ್ತಿದ್ದ. ಹಾಗೂ ಅವರಿಗೆ ಮಹಿಳಾ ಪ್ರಾಧ್ಯಾಪಕಿಯ ಧ್ವನಿಯಲ್ಲಿ ವಿದ್ಯಾರ್ಥಿವೇತನ ನೀಡುವುದಾಗಿ ಹೇಳುತ್ತಿದ್ದ. ಮತ್ತು ಕಾಲೇಜಿಗೆ ಹೋಗದ ಹುಡುಗಿಯರಾಗಿದ್ದರೆ ಅವರನ್ನು ಕಾಡಿನ ಪ್ರದೇಶಕ್ಕೆ ಕರೆದೊಯ್ಯಲು ಅವರಿಗೆ ಸರ್ಕಾರದ ಯೋಜನೆಗಳ ಲಾಭ ಸಿಗುವಂತೆ ಮಾಡುವುದಾಗಿ ನಂಬಿಸುತ್ತಿದ್ದ ”ಎಂದು ಅಧಿಕಾರಿ ಹೇಳಿದ್ದಾರೆ.