ಮಹಾರಾಷ್ಟ್ರದ ಕೊನೆಯ ಬ್ಯಾರೇಜ್
ರಾಜಾಪುರ ಬ್ಯಾರೇಜ್ ತುಂಬಿ ತುಳುಕಿ
ಕರ್ನಾಟಕಕ್ಕೆ ಹರಿದು ಬರುತ್ತಿದ್ದ ನೀರಿಗೆ
ತಡೆಯೊಡ್ಡಲು ಮಹಾರಾಷ್ಟ್ರ ಸರಕಾರ
ಯತ್ನಿಸುತ್ತಿದ್ದು ಕರ್ನಾಟಕದ ಜೊತೆಗೆ
“ಜಲತಂಟೆ” ಯನ್ನು ಮುಂದುವರೆಸಿದೆ.
ಬೇಸಿಗೆಯಲ್ಲಿ ಕುಡಿಯುವ ನೀರಿನ
ಅಭಾವ ಎದುರಿಸುವ ಉತ್ತರ ಕರ್ನಾಟಕದ
ಬೆಳಗಾವಿ,ಬಾಗಲಕೋಟೆ,ವಿಜಯಪುರ,
ರಾಯಚೂರು,ಕಲ್ಬುರ್ಗಿಗಳಿಗೆ ಮಹಾರಾಷ್ಟ್ರದ ಕೊಯ್ನಾ ಮತ್ತು ವಾರಣಾ
ಜಲಾಶಯಗಳಿಂದ ಕೃಷ್ಣಾ ನದಿಗೆ ನೀರು
ಬಿಡುಗಡೆ ಮಾಡುತ್ತಲೇ ಬರಲಾಗುತ್ತಿದೆ.
ಕರ್ನಾಟಕವು ಈ ನೀರನ್ನು ಖರೀದಿಸುತ್ತಲೇ
ಬಂದಿದೆ.ಆದರೆ 2016 ರಿಂದ ನೀರು
ಬಿಡುಗಡೆಗೆ ಒಪ್ಪದ ಮಹಾರಾಷ್ಟ್ರವು
“ನೀರು ವಿನಿಮಯ ಒಪ್ಪಂದ” ಕ್ಕೆ ಪಟ್ಟು
ಹಿಡಿದಿದೆ.ಬೇಸಿಗೆಯಲ್ಲಿ ಕೃಷ್ಣಾ ನದಿಗೆ
ಬಿಡಲಾಗುವ ನೀರಿನ ಪ್ರಮಾಣದಲ್ಲಿಯೇ
ವಿಜಯಪುರ ಜಿಲ್ಲೆಯ ತುಬಚಿ ಬಬಲೇಶ್ವರ
ಏತ ನೀರಾವರಿ ಯೋಜನೆಯಿಂದ
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ
ಜತ್ತ ತಾಲೂಕಿಗೆ ನೀರು ಪೂರೈಸಬೇಕೆಂದು
ಆಗ್ರಹಿಸುತ್ತಿದೆ.
ತುಬಚಿ ಬಬಲೇಶ್ವರ ಏತ ನೀರಾವರಿ
ಯೋಜನೆಗೆ 6 ಟಿ ಎಮ್ ಸಿ ನೀರನ್ನು
ಹಂಚಿಕೆ ಮಾಡಲಾಗಿದ್ದು ಈ ಯೋಜನೆಯು
3700 ಕೋಟಿ ರೂ.ವೆಚ್ಚದಲ್ಲಿ
ನಿರ್ಮಾಣವಾಗಿದೆ.ಈ ಯೋಜನೆಯ
ಭಾಗವಾಗಿ ಕಾಲುವೆ,ಉಪಕಾಲುವೆಗಳು
ನಿರ್ಮಾಣವಾಗಿವೆ.ಈ ಹಂತದಲ್ಲಿ ಇಲ್ಲಿಂದ
ಮಹಾರಾಷ್ಟ್ರದ ಜತ್ತ ಪ್ರದೇಶಕ್ಕೆ ನೀರನ್ನು
ಕರ್ನಾಟಕ ಸರಕಾರದ ವೆಚ್ಚದಲ್ಲಿ
ಪೂರೈಸಬೇಕೆಂಬುದು ಮಹಾರಾಷ್ಟ್ರದ
ವಾದವಾಗಿದೆ.ತಿಕೋಟಾ ನೀರು ವಿತರಣೆ
ಕೇಂದ್ರದಿಂದ ಜತ್ತ ಪ್ರದೇಶಕ್ಕೆ ನೀರು
ಪೂರೈಸಲು ಅಂದಾಜು 500 ಕೋಟಿ ರೂ.
ವೆಚ್ಚವಾಗಲಿದೆ.
ತುಬಚಿ ಬಬಲೇಶ್ವರ ನೀರಾವರಿ
ಯೋಜನಾ ಪ್ರದೇಶದಲ್ಲಿ ನೀರೆತ್ತುವ
ಕೇಂದ್ರವನ್ನು ಕಟ್ಟಿಕೊಳ್ಳಲು ಮಹಾರಾಷ್ಟ್ರಕ್ಕೆ
ಜಾಗೆಯನ್ನು ನೀಡಲು ಕರ್ನಾಟಕ
ಸಿದ್ಧವಿದೆ.ಜತ್ತ ಪ್ರದೇಶಕ್ಕೆ ಪೂರೈಸಬೇಕಾದ
ನೀರನ್ನು ಕೃಷ್ಣಾ ನದಿಗೆ ಬಿಟ್ಟು ಆ ನೀರನ್ನು
ನೀರೆತ್ತುವ ಕೇಂದ್ರದ ಮೂಲಕ ಎತ್ತಿಕೊಂಡು
ಜತ್ತ ಪ್ರದೇಶಕ್ಕೆ ಮಹಾರಾಷ್ಟ್ರ ಸರಬರಾಜು
ಮಾಡಬೇಕು.ಈ ಎಲ್ಲ ವೆಚ್ಚವನ್ನು
ಮಹಾರಾಷ್ಟ್ರ ವೇ ಭರಿಸಬೇಕು ಎಂಬುದು
ಕರ್ನಾಟಕದ ವಾದವಾಗಿದೆ.
2019 ರ ಜನೇವರಿಯಿಂದ
ಜೂನ್ ವರೆಗೆ ಕರ್ನಾಟಕಕ್ಕೆ ನೀರು ಬಿಡದ
ಮಹಾರಾಷ್ಟ್ರದಲ್ಲಿ ಸುರಿದ ಭಾರೀ
ಮಳೆಯಿಂದಾಗಿ ಪ್ರವಾಹ ಉಂಟಾಯಿತು.
ಕರ್ನಾಟಕಕ್ಕೆ ಹೇಳದೇ ಕೇಳದೇ
ಸುಮಾರು 8 ಲಕ್ಷಕ್ಕೂ ಅಧಿಕ ಪ್ರಮಾಣದ
ನೀರನ್ನು ಕರ್ನಾಟಕಕ್ಕೆ ಬಿಡಲಾಯಿತು.
ಇದರಿಂದ ರಾಜ್ಯದಲ್ಲಿ 35 ಸಾವಿರ ಕೋ.ರೂ.
ಹಾನಿ ಸಂಭವಿಸಿತು.ಈ ಹಾನಿಯನ್ನು
ಮಹಾರಾಷ್ಟ್ರವೇ ಭರಿಸಬೇಕೆಂದು
ಕರ್ನಾಟಕ ಸರಕಾರ ಒತ್ತಾಯಿಸಬೇಕೆಂದು
ರಾಜ್ಯದ ಅನೇಕ ಸಂಘಟನೆಗಳು
ಆಗ್ರಹಿಸಿದ್ದವು.
ಈಗ ಮಹಾರಾಷ್ಟ್ರ ಸರಕಾರವು
ರಾಜಾಪುರ ಬ್ಯಾರೇಜ್ ಗೇಟುಗಳನ್ನು
ಬಂದ್ ಮಾಡಿಸಿದೆ.ಮುಂದಿನ ದಿನಗಳಲ್ಲಿ
ಭಾರೀ ಪ್ರವಾಹ ಉಂಟಾಗಿ ಕರ್ನಾಟಕದ
ವಿವಿಧ ಜಿಲ್ಲೆಗಳಲ್ಲಿ 2019 ರ ಪರಿಸ್ಥಿತಿಯೇ
ಪುನರಾವರ್ತನೆಗೊಂಡರೆ ಅದಕ್ಕೇ
ಮಹಾರಾಷ್ಟ್ರವೇ ಹೊಣೆ ಹೊರಬೇಕು.ಈ
ಬಗ್ಗೆ ಕರ್ನಾಟಕ ಸರಕಾರ ಈಗಲೇ
ಮಹಾರಾಷ್ಟ್ರ ಸರಕಾರಕ್ಕೆ ಸೂಕ್ತ
ಎಚ್ಚರಿಕೆ ನೀಡಬೇಕು.

ಅಶೋಕ ಚಂದರಗಿ
ನೀರಾವರಿ ಹೋರಾಟಗಾರರು
ಹಾಗೂ ಅಧ್ಯಕ್ಷರು,ಬೆಳಗಾವಿ ಜಿಲ್ಲಾ
ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ
ಬೆಳಗಾವಿ
ಮೊ:9620114466