ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾ ದಿತ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳ ಈ ವರುಷದ ತಿರುಗಾಟ 1,002 ಪ್ರದರ್ಶನಗಳೊಂದಿಗೆ ಶನಿವಾರ ಮುಕ್ತಾಯಗೊಂಡಿತು.

ಕಟೀಲು ಮೇಳಗಳು ಈ ವರ್ಷ 167 ದಿನಗಳ ತಿರುಗಾಟದಲ್ಲಿ 1,002 ಸೇವೆಯಾಟಗಳನ್ನು ಪ್ರದರ್ಶಿಸಿದೆ, ಅವುಗಳಲ್ಲಿ 553 ದೇವೀ ಮಹಾತ್ಮೆ ಪ್ರಸಂಗಗಳಾಗಿವೆ. ಒಂದನೇ ಮೇಳ 81, ಎರಡನೇ ಮೇಳ 94, ಮೂರನೇ ಮೇಳ 105, ನಾಲ್ಕನೇ ಮೇಳ 88, ಐದನೇ ಮೇಳ 94, ಆರನೇ ಮೇಳ 91 ಬಾರಿ ದೇವೀಮಹಾತ್ಮೆಯನ್ನು ಆಡಿವೆ.

2023ರ ಎಪ್ರಿಲ್‌ನಿಂದ 2024ರ ಮಾರ್ಚ್‌ ವರೆಗೆ ಒಟ್ಟು 804 ಸೇವೆಯಾಟಗಳು ಬುಕ್ಕಿಂಗ್‌ ಆಗಿದ್ದು, ಈ ವರುಷದ ಎಪ್ರಿಲ್‌ ಮತ್ತು ಮೇ 24ರ ವರೆಗೆ ತಲಾ 56 ಸೇವೆಯಾಟಗಳು ನೋಂದಣಿಯಾಗಿವೆ. ಅಂದರೆ ದಿನಕ್ಕೆರಡು ಸೇವೆಯಾಟಗಳಂತೆ ಬುಕ್ಕಿಂಗ್‌ ಆಗುತ್ತಿವೆ. ಕಟೀಲಿನ ಆರು ಮೇಳಗಳು ಆರು ತಿಂಗಳ ತಿರುಗಾಟದಲ್ಲಿ ಪ್ರದರ್ಶನ ನೀಡುವುದು ಸಾಮಾನ್ಯವಾಗಿ 1,080 ಆಟ. ಸುಮಾರು 450ರಷ್ಟು ಬಯಲಾಟಗಳು ಖಾಯಂ ಇವೆ. ಈ ಲೆಕ್ಕಾಚಾರದಂತೆ ಇನ್ನೊಂದು ಮೇಳಕ್ಕೆ ಆಗುವಷ್ಟು ಬಯಲಾಟಗಳು ಬುಕ್ಕಿಂಗ್‌ ಆಗುತ್ತಿವೆ. ಇದಲ್ಲದೆ ಈ ಹಿಂದೆ ನೋಂದಣಿಯಾದ ಸೇವೆಯಾಟಗಳ ಸಂಖ್ಯೆಯೇ ಸುಮಾರು 10 ವರುಷಗಳಿಗೆ ಆಗುವಷ್ಟು ಇದೆ.