ಮುಂಬೈ: ಅದ್ದೂರಿ ವಿವಾಹಪೂರ್ವ ಕಾರ್ಯಕ್ರಮದ ಬಳಿಕ ಉದ್ಯಮಿ ಮುಕೇಶ್ ಅಂಬಾನಿ ಅವರ ಮಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಕ್ಕೆ ಮುಹೂರ್ತ ನಿಗದಿಯಾಗಿದೆ.

ಅನಂತ್ ಅಂಬಾನಿ ತಮ್ಮ ಬಹುಕಾಲದ ಗೆಳತಿ ರಾಧಿಕಾ ಮರ್ಚೆಂಟ್ ಅವರ ಜೊತೆ 2023ರ ಜನವರಿ 19ರಂದು ಮುಂಬೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ರಾಧಿಕಾ ಮರ್ಚೆಂಟ್ ಅವರು ಎನ್ನೋರ್ ಹೆಲ್ತ್ಕೇರ್ ಪ್ರೈವೇಟ್ ಲಿಮಿಟೆಡ್ ಸಿಇಒ ವೀರೆನ್ ಮರ್ಚೆಂಟ್ ಮತ್ತು ಶೈಲಾ ಅವರ ಪುತ್ರಿ.

ಜುಲೈ 12ರಿಂದ ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೊ ವರ್ಲ್ಡ್ ಕನ್ವೆಂಷನ್ ಸೆಂಟರ್‌ನಲ್ಲಿ ಈ ಜೋಡಿಯ 3 ದಿನಗಳ ವಿವಾಹ ನೆರವೇರಲಿದೆ. ವಿವಾಹವನ್ನು ಹಿಂದೂ ವೈದಿಕ ಸಂಪ್ರದಾಯದಂತೆ ನಡೆಸಲಾಗುತ್ತದೆ.

ಜುಲೈ 12ರಂದು ಮದುವೆಯ ಪ್ರಮುಖ ಕಾರ್ಯಕ್ರಮ ‘ಶುಭ ವಿವಾಹ’ ನೆರವೇರಲಿದೆ. 13ರಂದು ಶನಿವಾರ ‘ಶುಭ ಆಶೀರ್ವಾದ’ ಕಾರ್ಯಕ್ರಮ ನಡೆಯಲಿದೆ. ಭಾನುವಾರ ಜುಲೈ 14ರಂದು ಮಂಗಳ ಉತ್ಸವ ಅಥವಾ ಆರತಕ್ಷತೆ ನಡೆಯಲಿದೆ ಎಂದು ವಿವಾಹದ ಆಹ್ವಾನ ಪತ್ರಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಈ ಮದುವೆ ಮಹೋತ್ಸವಕ್ಕೆ ಆಗಮಿಸುವವರಿಗೆ ವಸ್ತ್ರ ಸಂಹಿತೆ ಸಹ ಇದೆ. ಮೊದಲ ದಿನ ಜುಲೈ 12ರಂದು ಮದುವೆಯ ಪ್ರಮುಖ ಕಾರ್ಯಕ್ರಮ ‘ಶುಭ ವಿವಾಹ’ಕ್ಕೆ ಬರುವವರು ಭಾರತದ ಸಾಂಪ್ರದಾ ಯಿಕ ಉಡುಗೆ ತೊಡಬೇಕು.

2ನೇ ದಿನ ಜುಲೈ 13ರಂದು ಶನಿವಾರ ‘ಶುಭ ಆಶೀರ್ವಾದ’ ಕಾರ್ಯಕ್ರಮದಲ್ಲಿ ಭಾರತೀಯ ಫಾರ್ಮಲ್‌ ಉಡುಗೆ ತೊಡಬೇಕು. 3ನೇ ದಿನ ಜುಲೈ 14ರಂದು ಆರತಕ್ಷತೆಗೆ ಬರುವವರು ಸೀರೆ, ಲೆಹಂಗಾ, ಶೇರ್ವಾನಿಯಂತಹ ‘ಇಂಡಿಯನ್ ಚಿಕ್’ ಉಡುಗೆಗಳನ್ನು ತೊಟ್ಟು ಬರಬೇಕಿದೆ.

ಗುಜರಾತ್‌ನ ಜಾಮ್‌ನಗರದಲ್ಲಿ ಇತ್ತೀಚೆಗೆ ನಡೆದ ವಿವಾಹಪೂರ್ವ ಕಾರ್ಯಕ್ರಮದಲ್ಲಿ ಮೆಟಾ ಸಂಸ್ಥಾಪಕ ಜುಕರ್‌ಬರ್ಗ್, ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್, ಪಾಪ್ ತಾರೆ ರಿಹನ್ನಾ, ಕ್ರಿಕೆಟಿಗರಾದ ಸಚಿನ್‌ ತೆಂಡೂಲ್ಕರ್, ಎಂ.ಎಸ್. ಧೋನಿ, ಬಾಲಿವುಡ್ ತಾರೆಯರಾದ ಸಲ್ಮಾನ್ ಖಾನ್, ಶಾರುಖ್ ಖಾನ್, ಆಲಿಯಾ ಭಟ್, ಕತ್ರಿನಾ ಕೈಫ್, ಜಾಹ್ನವಿ ಕಪೂರ್ ಮುಂತಾದ 1,200 ಅತಿಥಿಗಳು ಭಾಗವಹಿಸಿದ್ದರು.