ಬೆಳಗಾವಿ : ಮುಂಗಾರು ಹಂಗಾಮು ಬಿತ್ತನೆ ಆರಂಭಗೊಂಡಿದ್ದು, ಜಿಲ್ಲೆಯಲ್ಲಿ ಸಾಕಷ್ಟು ಬೀಜ-ರಸಗೊಬ್ಬರ ದಾಸ್ತಾನು ಲಭ್ಯವಿರುತ್ತದೆ. ರೈತರಿಗೆ ಗುಣಮಟ್ಟದ ಬೀಜ-ರಸಗೊಬ್ಬರವನ್ನು ವಿತರಿಸಬೇಕು. ಕೃತಕ ಅಭಾವ ಸೃಷ್ಟಿಸುವ ಅಥವಾ ನಿಗದಿತ ದರಕ್ಕಿಂತ ಹೆಚ್ವಿನ ದರ ಪಡೆಯುವ ವರ್ತಕರು ಮತ್ತು ವಿತರಕರ ಲೈಸೆನ್ಸ್ ರದ್ದುಪಡಿಸಿ ಕಠಿಣ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ(ಜೂ.1) ನಡೆದ 2024-25 ನೇ ಸಾಲಿನ ಮುಂಗಾರು ಹಂಗಾಮಿನ ಪೂರ್ವಸಿದ್ಧತೆಗಾಗಿ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳ ಸಗಟು ವ್ಯಾಪಾರಿಗಳ ಮತ್ತು ವಿತರಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಂಗಾರು ಹಂಗಾಮು ಬಿತ್ತನೆ ಆರಂಭಗೊಂಡಿರುತ್ತದೆ. ರೈತರು ಬಿತ್ತನೆ ಬೀಜ ಹಾಗೂ ರಸಗೊಬ್ಬರ ಖರೀದಿಗೆ ಆಗಮಿಸುತ್ತಿದ್ದಾರೆ.

ಕಳೆದ ವರ್ಷ ಬರಗಾಲದಿಂದ ರೈತರು ತತ್ತರಿಸಿದ್ದಾರೆ. ಈ ಬಾರಿ ಉತ್ತಮ ಮಳೆಯ ಮುನ್ಸೂಚನೆಯಿದೆ. ಹೆಚ್ಚಿನ ಬಿತ್ತನೆ ಗುರಿ ಹೊಂದಲಾಗಿರುತ್ತದೆ. ಆದ್ದರಿಂದ ರೈತರಿಗೆ ಉತ್ತಮ ಗುಣಮಟ್ಟದ ಬೀಜ ವಿತರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿರುತ್ತದೆ.

ದರಪಟ್ಟಿ-ದಾಸ್ತಾನು ಮಾಹಿತಿ ಪ್ರದರ್ಶನ ಕಡ್ಡಾಯ:
ಜಿಲ್ಲೆಯಲ್ಲಿ 185 ಬೀಜ ವಿತರಣಾ ಕೇಂದ್ರ ಆರಂಭಿಸಲಾಗಿರುತ್ತದೆ. ಕೇಂದ್ರಗಳಲ್ಲಿ ಕಡ್ಡಾಯವಾಗಿ ದರಪಟ್ಟಿ ಪ್ರದರ್ಶಿಸಬೇಕು. ನಿಗದಿತ ದರಕ್ಕಿಂತ ಹೆಚ್ಚಿನ ದರ ಪಡೆದುಕೊಂಡರೆ ವರ್ತಕರ ನೋಂದಣಿಯನ್ನು ರದ್ದುಗೊಳಿಸಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಎಚ್ಚರಿಕೆ ನೀಡಿದರು.

ರಸಗೊಬ್ಬರ ಲಭ್ಯತೆ ಹಾಗೂ ದರಪಟ್ಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಹೆಚ್ಚುವರಿ ಹಣ ಪಡೆದರೆ ಲೈಸೆನ್ಸ್ ರದ್ದು ಮಾಡಲಾಗುತ್ತದೆ.

ಸಾರಿಗೆ ವೆಚ್ಚ ಮತ್ತಿತರ ವೆಚ್ಚಗಳ ನೆಪವೊಡ್ಡಿ ರೈತರಿಂದ. ಹೆಚ್ಚಿನ ಹಣ ಪಡೆದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಸಾಕಷ್ಟು ರಸಗೊಬ್ಬರ ಅಥವಾ ಬೀಜ ದಾಸ್ತಾನು ಇದ್ದಾಗ್ಯೂ ಕೃತಕ ಅಭಾವ ಸೃಷ್ಟಿಸುವುದು ಕಂಡುಬಂದರೆ ಅಂತಹವರ ವಿರುದ್ಧ ಕೂಡ‌ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಟೋಕನ್ ವ್ಯವಸ್ಥೆಗೆ ನಿರ್ದೇಶನ:

ರೈತರು ಏಕಕಾಲಕ್ಕೆ ಬೀಜ ವಿತರಣಾ ಕೇಂದ್ರಗಳಿಗೆ ಆಗಮಿಸಿದರೆ ಯಾವುದೇ ಗೊಂದಲಕ್ಕೆ ಆಸ್ಪದ ನೀಡದೇ ಟೋಕನ್ ವ್ಯವಸ್ಥೆ ಮಾಡುವ ಮೂಲಕ ಪ್ರತಿಯೊಬ್ಬರಿಗೂ ಅಗತ್ಯಕ್ಕೆ ಅನುಸಾರ ಬೀಜ-ರಸಗೊಬ್ಬರವನ್ನು ಪೂರೈಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸಾಕಾಷ್ಟು ದಾಸ್ತಾನು ಇರುತ್ತದೆ. ಆದ್ದರಿಂದ ಸಮರ್ಪಕ ರೀತಿಯಲ್ಲಿ ವಿತರಣೆ ಮಾಡಬೇಕು. ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆಯಾಗಬಾರದು ಎಂದು ಸಗಟು ವ್ಯಾಪಾರಸ್ಥರು ಮತ್ತು ವಿತರಕರಿಗೆ ತಿಳಿಸಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಅವರು ಸಭೆಯನ್ನು ನಿರ್ವಹಿಸಿದರು. ಕೃಷಿ ಇಲಾಖೆಯ ಉಪ ನಿರ್ದೇಶಕ ಡಾ.ಎಚ್.ಡಿ.ಕೋಳೇಕರ್, ಡಾ.ಕೊಂಗವಾಡ ಸೇರಿದಂತೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು, ಜಿಲ್ಲೆಯ ಸಗಟು ವ್ಯಾಪಾರಿಗಳ ಮತ್ತು ವಿತರಕರು ಸಭೆಯಲ್ಲಿ ಉಪಸ್ಥಿತರಿದ್ದರು.

ಇದಕ್ಕೂ ಮುಂಚೆ ಸರಕಾರದಿಂದ ವಿವಿಧ ಬಗೆಯ ಬಿತ್ತನೆ ಬೀಜಗಳಿಗೆ ಸರಕಾರದ‌ ವತಿಯಿಂದ‌ ನಿಗದಿಪಡಿಸಲಾಗಿರುವ ದರಗಳ ಪಟ್ಟಿಯನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಬಿಡುಗಡೆಗೊಳಿಸಿದರು.