“ದೇಶ ಸುತ್ತು ಕೋಶ ಓದು” ಇದು ಜ್ಞಾನವೃದ್ಧಿಗೆ ಹಿರಿಯರು ಕೊಡುವ ಉದಾಹರಣೆ. ಆದರೂ ಬಹಳ ಸಮಯ ದೀಪದ ಬುಡ ಕತ್ತಲುಮಯವಾಗಿರುತ್ತದೆ. 1963 ರಲ್ಲಿ ತಲಕಳಲೆ ಅಣೇಕಟ್ಟು ನಮ್ಮೂರಿನ ಅಕ್ಕಪಕ್ಕದ ಊರುಗಳಾದ ಆಯಗಾರು, ನೇರಗಾರು, ಚತ್ರೋಡಿ, ಬೀರನಗದ್ದೆ, ಬಂಕನಬಳ್ಳು, ಗುಂಡಿಬೈಲು, ಕೇದಗೆಪಾಲು, ಅರಿಯಾಳ, ವಟ್ಟಕ್ಕಿ, ಸುಂಕದಮನೆ, ಕಲ್ಲೋಟಿ ಮುಂತಾದ ಸಣ್ಣ ಸಣ್ಣ ಊರುಗಳನ್ನು ಆಪೋಷಣೆ ಗೈದು ನಾಲ್ಕೈದು ನೂರು ವರ್ಷಗಳ ಬದುಕು, ಬವಣೆ, ನೆನಪು, ಇತಿಹಾಸ ಸಂಸ್ಕ್ರುತಿಯನ್ನು ನಾಶಗೈಯಿತು. ಆಯಗಾರು ನೇರಗಾರಿನ ಕೆಲ ಜನರು ಸೂಡೂರು, ಶೆಟ್ಟಿಕೆರೆ, ಅರಸಾಳಕ್ಕೆ ವಲಸೆ ಹೊರಟರೆ ಇನ್ನು ಕೆಲ ಜನರು, ಮೇಘಾನೆ, ಹಾಡಗೇರಿ, ಮೈಮೆ, ನಾಗವಳ್ಳಿ ಮುಂತಾದ ಕಡೆ ವಲಸೆ ಹೋದರು. ವಲಸೆ ಪ್ರಕ್ರೀಯೆ ಹೇಗಿತ್ತೆಂದರೆ ಕನ್ನಡಿಗೆ ಕಲ್ಲೆಸೆದಂತೆ ಸಾವಿರಾರು ಛಿದ್ರವಾಗಿ ಇನ್ನೆಂದೂ ಮೊದಲಿನಂತಾಗದೇ ಚದುರಿದವು. ಬೆಂಕಿಬಿದ್ದ ಮರವನ್ನು ಪಕ್ಷಿಗಳು ತೊರೆಯುವಂತೆ, ದಿಕ್ಕುಗೆಟ್ಟು ದಮನಿಯೊಡೆದ ಜನಸಮೂಹ, ಒಲ್ಲದ ಮನಸ್ಸಿನಿಂದ
ಬದುಕಿನ ಅನಿವಾರ್ಯತೆಗಾಗಿ ಊರು ತೊರೆದರು.
ಇಂತಹ ದುರ್ದರ ಸ್ಥಿತಯಲ್ಲೂ ತಮ್ಮ ಮೂಲನೆಲೆಯ ಸೆಲೆಯನ್ನು ಮರೆಯದೇ ಹಿಂದಿನ ನೆನಪುಗಳನ್ನು ಮೆಲುಕು ಹಾಕುವ ಎಷ್ಟೋ ಜನರಿದ್ದಾರೆ. ಅಂತವರುಗಳಲ್ಲಿ ಹಾಡಗೇರಿಯಲ್ಲಿ ವಾಸವಿರುವ ನಮ್ಮೂರಿನ ಬಹುತೇಕ ಕುಣಬಿ ಜನಾಂಗವೂ ಒಂದು.
ಹಾಡಗೇರಿ ಇದು ಗೇರುಸೊಪ್ಪದ ಆಗ್ನೇಯ ದಿಕ್ಕಿಗೆ ಬರುವಂತಹ ಒಂದು ಹಳ್ಳಿ. ಎರಡು ದಿಕ್ಕಗೂ ಎತ್ತರವಾದ ಬೆಟ್ಟದ ಸಾಲು ನಡುವೆ ಸದಾ ಹರಿಯುವ ಹಳ್ಳ. ಹಳ್ಳದ ಎರಡೂ ಬದಿಯಲ್ಲಿ ಗದ್ದೆ ಬಯಲು, ದಬ್ಬೆ ಹೊಳೆ ಹಾಗು ನನ್ನೂರು ಹೊಳೆ ಇವೆರಡೂ ಹಾಡಗೇರಿಯ ಮೇಲ್ಭಾಗದ ಮತ್ತಗಾರು ಎಂಬಲ್ಲಿ ಸಂಧಿಸಿ ನಂತರ ಹಾಡಗೇರಿ ಹಳ್ಳವಾಗಿ ಹರಿದು ಗೇರುಸೊಪ್ಪದಲ್ಲಿ ಕಲ್ಲುಕಟ್ಟೆಯಾಗಿ ಶರಾವತಿಯನ್ನು ಸೇರಿ ಸಮುದ್ರದತ್ತ ಚಲಿಸುತ್ತದೆ. ಹಾಡಗೇರಿ ಗೇರುಸೊಪ್ಪದ ಅರಸರ ಆಳ್ವಿಕೆಯ ಕಾಲದಲ್ಲಿ ಹಾಡುಗರಹಳ್ಳಿ ಎಂದು ಕರೆಯುತ್ತಿದ್ದರೆಂದು ಪ್ರತೀತಿ ಇದೆ. ಅದಕ್ಕೆ ಸಂಭಂದಿಸಿದಂತೆ ನೂರಾರು ಮನೆ ಅಡಿಪಾಯಗಳು, ಎತ್ತರದ ಗೋಡೆಗಳು ಪ್ರಾಕಾರಗಳನ್ನು ಈಗಲೂ ನೋಡಬಹುದು. ನೂರಾರು ಎಕರೆ ಭತ್ತದ ಗದ್ದೆಗಳು ಇಂದಿಗೂ ಜೀವಂತಿಕೆ ಉಳಿಸಿಕೊಂಡಿವೆ.
ಗೇರುಸೊಪ್ಪದಿಂದ ಘಟ್ಟದ ಮೇಲಕ್ಕೆ ಬರುವ ಎರಡು ಪ್ರಮುಖ ದಾರಿಗಳಾದ ಹೆರ್ಕಣಿ ಘಾಟಿ ಹಾಗು ಬಾಳೆಗದ್ದೆ ಘಾಟಿಗಳು ಇಲ್ಲೇ ಸಂಧಿಸುತ್ತವೆ. ಹಾಡುಗೇರಿಯಿಂದ ಕಾನೂರು ಕೋಟೆಗೆ ಕುದುರೆ ಓಣಿಯೊಂದಿತ್ತು ಇದು ತುಂಬಾ ಗೌಪ್ಯ ದಾರಿಯೆಂದು ಸ್ಥಳೀಯರ ಆಂಬೋಣ. ಏನೇ ಆಗಲಿ ಹಾಡಗೇರಿ ಒಂದು ಇತಿಹಾಸ ಪ್ರಸಿದ್ಧ ಊರು ಎನ್ನುವುದರಲ್ಲಿ ಅನುಮಾನವಿಲ್ಲ.
ನಮ್ಮೂರಿನಲ್ಲಿ ಹುಟ್ಟಿ ಹಾಡಗೇರಿಯಲ್ಲಿ ಬದುಕಿನ ಕೊನೆಯ ದಿನಗಳನ್ನು ಕಳೆದ ಮಷ್ಣು, ಮಾಕ್ತೆ, ದೊಡ್ಡಶಿವು, ಸಣ್ಣಶಿವು, ಸಣ್ಣು, ಆರಾಂಟಿ ಬೊಮ್ಡ, ಕುಷ್ಣ, ಬಾಲು ಮುಂತಾದ ಎಷ್ಟೋ ಜನರು ಹಾಡಗೇರಿಯಲ್ಲಿ ಅಂತಿಮ ದಿನ ಕಳೆದರು. ಅವರಳಿದರೂ ಇಂದು ಅವರ ಮಕ್ಕಳು ಮೊಮ್ಮಕ್ಕಳು ಇಂದಿಗೂ ಹಳೆಯ ನೆನಪನ್ನು ಮೆಲಕು ಹಾಕುತ್ತಾರೆ.
ನಾನು ಹಾಡಗೇರಿ ಊರಿಗೆ ಹೋದೊಡನೆಯೇ ನನಗೆ ಅಭೂತಪೂರ್ವ ಸ್ವಾಗತ ದೊರೆಯಿತು. ಎಲ್ಲರಿಗೂ ನಾನು ಪರಿಚಿತ ಆದರೆ ನನಗ್ಯಾರೂ ಪರಿಚಯವಿಲ್ಲ. ನನಗೆಲ್ಲ ಆತ್ಮೀಯರಂತೆ ಮಾತನಾಡಿದರು. ಅವರಲ್ಲೇ ಪರಸ್ಪರ ತಮ್ಮ ಭಾಷೆಯಲ್ಲಿ ಮಾತನಾಡಿಕೊಂಡು ನಮ್ಮನ್ನು ಪರಿಚಯಿಸುವುದೇ ಒಂದು ರೀತಿಯ ಸೊಬಗು.
ಇಷ್ಟಾಗಿ ನಾನು ತಿಳಿಯದಿದ್ದರೂ ಹೋಗಿದ್ದುದು ಸಣ್ಣ ಶಿವು ಮನೆಗೆ!!!
ಆದರೆ ಅವರ ಗಂಡುಮಕ್ಕಳಿಗೆ ಹೆಣ್ಣನ್ನು ಕೊಟ್ಟಿರುವುದು ನಮ್ಮೂರಿನ ಹುಡುಗಿಯರನ್ನೇ. ಈಗ ಅವರ ಮಕ್ಕಳಿಗೂ ಮದುವೆಯಾಗಿ ಮಕ್ಕಳು ಮೊಮ್ಮಕ್ಕಳ ಕಾಲ.
ನಾನು ಹೋದೊಡನೇ ಹಾಡಗೇರಿಯಲ್ಲಿನ ಶಾಸನದ ಕುರಿತು ಕೇಳಿದೆ. ಎಲ್ಲೂ ಇದ್ದ ನೆನಪು ಇಲ್ಲವೆಂದೇ ಉತ್ತರ. ಸರಿ ನನ್ನ ಬಹುದಿನದ ಕನಸು ಹಾಡಗೇರಿ ಜಲಪಾತ ನೋಡುವ ಬಯಕೆ ಅರುಹಿದೆ. ದಬ್ಬೆ ಹೊಳೆನಾ ಇಲ್ಲ ನನ್ನೂರು ಹೊಳೆನಾ ತಮ್ಮ ???
ಎಂದು ಮರು ಪ್ರಶ್ನೆ. ಇಲ್ಲ ಹಾಡಗೇರಿ ಜಲಪಾತ ಎಂದೆ. ಹೋ ಅದಾ ಅದು ನನ್ನೂರು ಹೊಳೆ….
ಹೋ… ಅದಾ ಅದು ನನ್ನೂರು ಫಾಲ್ಸ್ ಅಲ್ಲಿಗೆ ತಮ್ಮ ನೀನು ಹೋಗೋದು ಕಷ್ಟ ಎಂದು ರಾಮಣ್ಣ ಹೇಳಿದರೆ, ಗಣೇಶ ಅವರಿಗೆ ಎಲ್ಲ ಗೊತ್ತು ಹೆದರೊದಿಲ್ಲ ನಮ್ಮ ಜೊತೆ ನಡಕೊಂಡು ಬರ್ತಾರೆ ಸಣ್ಣವನಿದ್ದಾಗಿನಿಂದ ಅವರನ್ನು ನೋಡಿರುವೆ ಎಂದು ತಿಳಿ ಹೇಳಿದ.
ಅಷ್ಟೊತ್ತಿಗಾಗಲೇ ನಮ್ಮೂರಿನ ಪರಿಚಿತರೆಲ್ಲ ನಮ್ಮನೆಗೆ ಬನ್ನಿ ಎಂದು ತಂಡೋಪತಂಡವಾಗಿ ಕರೆಯುವುದು ಒಂದು ರೀತಿ ನನ್ನ ಪಾಲಿಗೆ ಹಬ್ಬವೇ ಸರಿ. ಇಷ್ಟೊಂದು ಪ್ರೀತಿ ವಿಶ್ವಾಸ ನನಗೆ ಎಲ್ಲೂ ಮತ್ತೆ ಸಿಗದೆಂದು ನನ್ನ ಭಾವನೆ.
ಸರಿಯಾಗಿ ಹನ್ನೊಂದು ಗಂಟೆಗೆ ಹಾಡಗೇರಿಯಿಂದ ಹೊರಟು ಅಲ್ಲಿರುವ ನನ್ನೂರು ಹೊಳೆಯ ಹರಿವನ್ನು ಉತ್ತರಿಸಿ ಜಲಪಾತದತ್ತ ಪಯಣ ಆರಂಭಿಸಿದೆವು.
ನಮ್ಮೊಟ್ಟಿಗೆ ಅಲ್ಲಿನ ಸನ್ಯಾಸಿಯೊಬ್ಬರು ಜೊತೆಯಾದರು. ಬಹುಶ ಒಲ್ಲೆ ಎಂದೇ ಹೇಳುತ್ತಿದ್ದ ಅವರು ನನ್ನೊಡನೆ ಮಾತಾಡಿದ ತರುವಾಯ, ನಾನೂ ನಿಮ್ಮ ಸಂಗಡ ಎಂದು ಒಟ್ಟಿಗೆ ಬರಲು ಒಪ್ಪಿದರು. ಜಲಪಾತದ ಬಲಭಾಗ ಕಲ್ಲುಗಳಿಂದ ಆವೃತವಾದ ಕಡಿದಾದ ಬಂಡೆಗಳ ಮುಗಿಲೆತ್ತರದ ಬೆಟ್ಟ ಎಡಭಾಗ ಸ್ವಲ್ಪ ಇಳಿಜಾರು ಹಾಗು ಅಲ್ಲಲ್ಲಿ ಬಂಡೆಗಳ ಸಮೂಹ. ಒಟ್ಟಾಗಿ ಹೋಗುವಾಗ ನಮ್ಮ ಕಾಲಿಗೇರಲು ಹವಣಿಸುತ್ತಿದ್ದ ಉಂಬಳಗಳ ಸಂದೋಹ, ನಮಗದು ಲೆಕ್ಕವಿಲ್ಲದ ಪ್ರಹಾರವಾದರೂ ಅಂಜದೆ ಅಳುಕದೆ ನುಗ್ಗಿ ಮುನ್ನಡೆದವು. ಮಧ್ಯಾಹ್ನ ಸುಮಾರು ಎರಡು ಗಂಟೆಗೆ ಜಲಪಾತ ತಲುಪಿದ ನಮಗೆ ಜಲಪಾತ ಕಂಡೊಡನೆ ಆಯಾಸ ಹೊರಟು ನಿರಾಯಾಸ ಮುನ್ನುಗ್ಗಿತು. ಯಾವುದೇ ಗಲಾಟೆ ಗದ್ದಲವಿಲ್ಲದ ಝರಿ, ವಿಕೃತ ಮಾನವನ ಸಂಪರ್ಕವಿಲ್ಲದ ಜಲಧಾರೆ ಸುಕೃತದಿಂದ ಧರೆಗಿಳಿಯುತ್ತಿತ್ತು. ದಣಿದ ನಮಗೂ ಕೂಡ ಮಾತಾಡುವ ಹುಮ್ಮಸ್ಸು ಕಡಿಮೆಯಾಗಿ ನಿಶ್ಯಬ್ಧದಿ ಜಲಧಾರೆಯ ಸೌಂದರ್ಯವನ್ನು ಆಸ್ವಾದಿಸಿದೆವು. ಜಲಪಾತ ದರ್ಶನವನ್ನು ಮುಗಿಸಿ ಪುನಹ ಹಿಂದಿರುಗಿ ಗೇರುಸೊಪ್ಪೆ ಸೇರುವಷ್ಟರಲ್ಲಿ ರಾತ್ರಿ ಸಮೀಪಿಸಿ ಕಾಡ ಜೀರುಂಡೆ ಠೇಂಕಾರಗೈಯಲು ಆರಂಬಿಸಿದ್ದವು.
ಒಟ್ಟಿನಲ್ಲಿ ಒಂದು ದಿನದ ಚಾರಣ ಸಂತೋಷದ ಹೂರಣವನ್ನೀಯಿತು. ದಿನವು ಸಾರ್ಥಕವಾಯಿತು. ನಮ್ಮೂರಿನ ಹಳೆತಲೆಮಾರಿನ ಜನರೊಂದಿಗೆ ಇನ್ನೂ ಬೆರೆಯುವ ಹಂಬಲ ದ್ವಿಗುಣಗೊಂಡಿತು. ಪರಿಚಿತರೆಲ್ಲರಿಗೂ ವಂದಿಸಿ ಇನ್ನೊಮ್ಮೆ ಬರುವುದಾಗಿಹೇಳಿ ಭಾರವಾದ ಮನಸ್ಸಿಂದ ನನ್ನೂರು ಹಳ್ಳ ಹಾಗು ದಬ್ಬೆ ಹೊಳೆಗೆ ಮನದಲ್ಲಿಯೇ ಧನ್ಯವಾದ ಸಮರ್ಪಿಸಿ ಊರಿಗೆ ರಾತ್ರಿ ಹತ್ತುಗಂಟೆಗೆ ಬಂದ ತಲುಪಿದೆ.
ಲೋಕರಾಜ ಜೈನ್ ಸಾಳ್ವ ಕುಲಜ ನಗಿರೆಸುತ