ಬೆಂಗಳೂರು:
ಬಿಜೆಪಿ ಎಸ್‍ಸಿ ಮೋರ್ಚಾದ ಮುಖಂಡ ಪೃಥ್ವಿ ಸಿಂಗ್ ಅವರ ಮೇಲೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಹಾಗೂ ಎಂಎಲ್‍ಸಿ ಚನ್ನರಾಜ್ ಹಟ್ಟಿಹೊಳಿ ಅವರ ಗನ್‍ಮ್ಯಾನ್ ಮತ್ತು ಸಹಚರರು ಗಂಭೀರ ಹಲ್ಲೆ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ದಲಿತ ಮುಖಂಡ, ಬಿಜೆಪಿ ಎಸ್‍ಸಿ ಮೋರ್ಚಾದ ಮುಖಂಡ ಪೃಥ್ವಿ ಸಿಂಗ್ ಅವರ ಮನೆಯ ಬಳಿ ಹಲ್ಲೆ ನಡೆದಿದೆ. ಈ ಸಂಬಂಧ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಹೋದರ, ಇತರ ಅಪರಾಧಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು. ಇವತ್ತು ರಾತ್ರಿಯೇ ಅವರನ್ನು ಬಂಧಿಸಿ ಎಂದು ಒತ್ತಾಯಿಸಿದರು.
ಇಲ್ಲಿನ ಪೊಲೀಸ್ ವ್ಯವಸ್ಥೆ ಬಗ್ಗೆ ನಮಗೆ ವಿಶ್ವಾಸ ಇಲ್ಲ ಎಂದು ಪೃಥ್ವಿ ಸಿಂಗ್ ಹೇಳಿದ್ದಾರೆ. ಮನೆಯವರಿಗೆ ರಕ್ಷಣೆ ಕೊಡಿಸಿ ಎಂದು ಕೋರಿದ್ದಾರೆ. ಅಧಿಕಾರದ ದರ್ಪದಿಂದ ಸಚಿವರು, ಅವರ ಸಹೋದರ ನಡೆದುಕೊಂಡದ್ದನ್ನು ಬೆಳಗಾವಿಯ ಜನರು ನೋಡಿದ್ದಾರೆ ಎಂದರು.
ತಕ್ಷಣ ಎಫ್‍ಐಆರ್ ಮಾಡಿ ಅಪರಾಧಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ಈ ಘಟನೆಯನ್ನು ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಬೇಕು. ಎಲ್ಲ ದುಷ್ಟರನ್ನು ಬಂಧಿಸಬೇಕು ಎಂದು ತಿಳಿಸಿದರು. ಪೊಲೀಸರ ಕುರಿತು ನಮಗೆ ವಿಶ್ವಾಸ ಇಲ್ಲ ಎಂದು ಪುನರುಚ್ಚರಿಸಿದರು.

ಯಾವ ಕಾರಣಕ್ಕಾಗಿ ಹೀಗಾಗಿದೆ ಎಂಬ ಪ್ರಶ್ನೆ ಇದಲ್ಲ. ಆಡಳಿತ ಪಕ್ಷದ ವಿಧಾನಪರಿಷತ್ ಸದಸ್ಯ, ಹಾಲಿ ಸಚಿವರ ಸಹೋದರನಿಂದ ಮಾರಣಾಂತಿಕ ಹಲ್ಲೆ ನಡೆದರೆ ಹೇಗೆ ಎಂದು ಅವರು ಪ್ರಶ್ನಿಸಿದರು. ಕಲಬುರಗಿಯಲ್ಲೂ ಬಿಜೆಪಿ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ್ ಮೇಲೆ ಹಲ್ಲೆ ನಡೆದಿತ್ತು. ಇಂಥ ಘಟನೆ ಇಲ್ಲಿ ಮರುಕಳಿಸಿದೆ ಎಂದು ಆಕ್ಷೇಪಿಸಿದರು. ಎಂಎಲ್‍ಸಿ ಮತ್ತು ಅವರ ಸಹಚರರನ್ನು ಕೂಡಲೇ ಬಂಧಿಸಿ ಎಂದು ಆಗ್ರಹಿಸಿದರು.

ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಹುಡುಗಾಟ ಮಾಡುವ ವಿಚಾರ ಇದಲ್ಲ. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ ಚೂರಿ ಇರಿತ ಮಾಡಿದವರನ್ನು ಬಂಧಿಸಿ ಎಂದು ಎಚ್ಚರಿಸಿದರು. ಆಡಳಿತ ಪಕ್ಷದ ಸದಸ್ಯರ ನಡವಳಿಕೆ ಈ ಮಟ್ಟಕ್ಕೆ ಹೋದರೆ ಹೇಗೆ ಎಂದು ಕೇಳಿದರು. ಇಲ್ಲಿ ಅಧಿವೇಶನ ನಡೆದಿದೆ. ಅದೇ ಸಂದರ್ಭದಲ್ಲಿ ಜವಾಬ್ದಾರಿಯುತ ಸಚಿವರು ಈ ರೀತಿ ಹೇಳಿಕೆ ಕೊಡುವುದು ಸರಿಯೇ ಎಂದು ಕೇಳಿದರು.
ಹಾಡಹಗಲೇ ಚೂರಿ ಇರಿತ ಮಾಡಿದವರನ್ನು ಬಂಧಿಸದೆ ಇರುವುದನ್ನು ಅವರು ಖಂಡಿಸಿದರು.

ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮತ್ತು ಪಕ್ಷದ ಮುಖಂಡರು ಇದ್ದರು. ಇದಕ್ಕೂ ಮೊದಲು ವಿಜಯೇಂದ್ರ ಅವರು ಪೃಥ್ವಿ ಸಿಂಗ್ ಅವರು ಚಿಕಿತ್ಸೆ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಗೆ ಭೇಟಿ ಕೊಟ್ಟರು.
ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಈ ರೀತಿ ಹಲ್ಲೆ ಮಾಡುವುದು ಸರಿಯಲ್ಲ. ಚುನಾವಣೆ ಬರುತ್ತದೆ; ಹೋಗುತ್ತದೆ. ಸಹೋದರತ್ವವನ್ನು ಕಳಕೊಳ್ಳಬಾರದು ಎಂದು ತಿಳಿಸಿದರು. ಜಿದ್ದು ಶಮನಕ್ಕೆ ಪ್ರಯತ್ನ ಮಾಡಬೇಕಿತ್ತು. ಚುನಾವಣೆ ನಂತರ ಕಾಫಿ ಕುಡಿದು ಎದ್ದು ಹೋಗಬೇಕು ಎಂದು ತಿಳಿಸಿದರು.