ಗೇರುಸೊಪ್ಪದ ಸಾಳ್ವರು ಆಳ್ವಿಕೆ ಮಾಡಿದ ನಗರಬಸದೀಕೇರಿ ಅಥವಾ ನಗರಿ, ಒಂದು ಗಥಕಾಲದ ಸಾಮ್ರಾಜ್ಯ. ಸಾಮಂತ ಸಾಮ್ರಾಜ್ಯವೇ ಆದರೂ ಶ್ರೀಮಂತ ಸಾಮ್ರಾಜ್ಯವಾಗಿತ್ತು. ಸಾಂಬಾರು ಪದಾರ್ಥವೇ ವಿದೇಶಿ ವ್ಯಾಪಾರದ ತಿರುಳು. ಮೂವತ್ತೇಳು ಬಂದರುಗಳ ಮುಖೇನ ವಿದೇಶಿ ವ್ಯಾಪಾರ. ಹದಿನಾಲ್ಕುಕ್ಕೂ ಹೆಚ್ಚು ದೇಶಗಳೊಂದಿಗೆ ನೇರ ವ್ಯಾಪಾರ, ವ್ಯಾಪಾರದಲ್ಲಿ ಕಾಳುಮೆಣಸಿನದ್ದೇ ಸಿಂಹಪಾಲು. ಕಿರು ಜಲಮಾರ್ಗಗಳಾದ ನದಿಗಳು ಸಾಂಬಾರು ಪದಾರ್ಥ ಬಂದರುಗಳಿಗೆ ಸಾಗಿಸಲು ಸುಲಭ ಮಾರ್ಗವಾಗಿತ್ತು. ನೌಕಾಪಡೆ ಬಲಿಷ್ಟವಾಗಿತ್ತು. ಪೋರ್ಚುಗೀಸರಂತಹ ಸಮುದ್ರ ವ್ಯಾಪಾರಿಗಳಿಗೇ ಮಣ್ಣುಮುಕ್ಕಿಸುವ ತಾಕತ್ತು ನಗರಿಯ ನೌಕಾಬಲಕ್ಕಿತ್ತು. ಶರಾವತಿ,ಗಂಗಾವಳಿ, ಕಾಳಿ, ಬೇಡ್ತಿ ಮುಂತಾದ ನದಿಗಳಲ್ಲಿ ಭರತವಿಳಿಗಳು ಸಂಭವಿಸುವ ಸಮತಟ್ಟು ಜಾಗಗಳು ಆ ಕಾಲದ ಡಂಪಿಂಗ್ ಯಾರ್ಡ್ ಗಳು. ಇಂತಹ ಸುವ್ಯವಸ್ಥಿತ ನಗರಿ ಅಥವಾ ಗೇರುಸೊಪ್ಪ ಸಾಮ್ರಾಜ್ಯ 1606 ರಲ್ಲಿ ಕಣ್ಮರೆಯಾಗುತ್ತದೆ. ಆದರೆ ತಾನಳಿದರೂ ತನ್ನ ಹೆಜ್ಜೆಗುರುತನ್ನು ಶಾಶ್ವತವಿರುವ ಹಾಗೆ ಮೂಡಿಸಿದ ದಿಟ್ಟ ಸಾಮ್ರಾಜ್ಯ ಅದು ಗೇರುಸೊಪ್ಪ ನಗರಿ ಸಾಮ್ರಾಜ್ಯ. ಸಾಮ್ರಾಜ್ಯ ಅಳಿದು ನಾಲ್ಕುನೂರು ವರ್ಷ ಗತಿಸಿದರೂ ಅದರ ಒಂದೊಂದೇ ಕುರುಹು ಪತ್ಯೆ ಆಗುತ್ತಲೇ ಇದೆ. ಕುರುಹುಗಳಾಗಿ ಕೇವಲ ವಾಸ್ತುಶಿಲ್ಪಗಳು,ಕಟ್ಟಡಗಳು, ನಾಣ್ಯಗಳು, ರಸ್ತೆಗಳು, ದೇವಾಲಯ, ಬಸದಿಗಳು ಮಾತ್ರವಲ್ಲ ಅಂದಿನ ಕಾಲದಲ್ಲಿಯೇ ಜೋಗ ಜಲಪಾತವನ್ನು ಗೇರುಸೊಪ್ಪ ಜಲಪಾತ ಎಂದೇ ಕರೆಯಲಾಗುತ್ತಿತ್ತು. ಅಪಾರ ಪ್ರಮಾಣದ ವ್ಯಾಪಾರದ ಸಂಪತ್ತಾಗಿ ಬೆಳ್ಳಿ ಮತ್ತು ಬಂಗಾರಗಳನ್ನು ಕ್ರಯ ವಿಕ್ರಯಗೊಳಿಸುವ ಸ್ಥಳಗಳನ್ನು ಇಂದಿಗೂ ಐತಿಹ್ಯವಾಗಿ ಅದೇ ಹೆಸರುಗಳಿಂದ ಕರೆಯಲಾಗುತ್ತಿದೆ. ಬಂಗಾರಮಕ್ಕಿ, ಬೆಳ್ಳಿಮಕ್ಕಿ, ಮೆಣಸಗಾರು, ಹವಳದಗದ್ದೆ, ಮೆಣಸಿನಬಾವಿ, ಮೆಣಸಿನಬೀದಿ ಹೀಗೆ ಹತ್ತು ಹಲವು ಹೆಸರುಗಳು ಇಂದಿಗೂ ತನ್ನ ಇತಿಹಾಸವನ್ನು ಹಾಗೆಯೇ ಉಳಿಸಿಕೊಂಡಿವೆ. ಇಂತಹ ಸಾಕ್ಷ್ಯಗಳಿಗೆ ಇನ್ನೊಂದು ಜ್ವಲಂತ ಉದಾಹರಣೆ ಇತ್ತೀಚೆಗೆ ಸೇರ್ಪಡೆಯಾದುದು ಎಸ್ ಎಸ್ ಗೇರುಸೊಪ್ಪ ಹಡಗು.
ಅದು 1941 ರಲ್ಲಿ ನಡೆಯುತ್ತಿದ್ದ ಎರಡನೇ ಮಹಾಯುಧ್ಧದ ಸಮಯ. ಐರ್ಲೆಂಡ್ ಕರಾವಳಿಯಲ್ಲಿ ಬ್ರಿಟನ್ ದೇಶಕ್ಕೆ ಸರಕು ಸಾಗಿಸುವ ಹಡಗೊಂದರಲ್ಲಿ ಬೆಳ್ಳಿ ಮತ್ತು ಬಂಗಾರ ಸಾಗಿಸಲಾಗುತ್ತಿತ್ತು.ಈ ಹಡಗು ಅಂದಿನ ಯುದ್ಧದ ಭಾಗವಾಗಿ ಜರ್ಮನಿಯ ಜಲಾಂತರ್ಗಾಮಿಯ ದಾಳಿಗೆ ಸಿಲುಕಿ 17 ಫೆಬ್ರವರಿ1941 ರಲ್ಲಿ ಮುಳುಗಡೆಯಾಗಿತ್ತು. ಇದರಲ್ಲಿದ್ದ ಎಂಬತ್ತು ಜನರ ಪೈಕಿ ಕೆಲವೇ ಜನರು ಮಾತ್ರ ಬದುಕುಳಿದರು. ಈ ಹಡಗಿನ ಹೆಸರೇ ಎಸ್ ಎಸ್ ಗೇರುಸೊಪ್ಪ. ಈ ಹಡಗು ಮುಂಬೈನಿಂದ ಹೊರಟು ಇಂಗ್ಲೆಂಡ್ ತಲುಪುವ ಹಂತದಲ್ಲಿ ಜರ್ಮನಿಯ ದಾಳಿಗೆ ಸಿಲುಕಿ ಮುಳುಗಲ್ಪಟ್ಟಿತ್ತು. 2001ರ ಸೆಪ್ಟಂಬರ್ ನಲ್ಲಿ ಈ ಹಡಗಿನ ಅವಶೇಷ ಮೊದಲಬಾರಿಗೆ ಪತ್ಯೆಯಾಯಿತು.
ಸಮುದ್ರದಲ್ಲಿ ಮುಳುಗಿದ ಈ ಹಡಗನ್ನು ಮೇಲೆತ್ತಲು ಅಮೇರಿಕದ ಫ್ಲಾರಿಡಾದ ಒಡಿಸ್ಸಿ ಕಂಪನಿಯೊಂದಿಗೆ ಬ್ರಿಟನ್ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ಒಟ್ಟು 125 ಮೀ ಉದ್ದವಿದ್ದ ಈ ಹಡಗನ್ನು 1919 ರಲ್ಲಿ ಇಂಗ್ಲೆಂಡಿನ ನ್ಯಾಕ್ಯಾಸೆಲ್ ಎಂಬಲ್ಲಿ ನಿರ್ಮಿಸಲಾಗಿತ್ತು.BRITISH INDIA STEAM NAVIGATION ಎಂಬ ಕಂಪನಿ ವತಿಯಿಂದ ಸೇವೆಗೆ ಬಳಸಲಾಗುತ್ತಿತ್ತು. ಪ್ರಾರಂಭದಲ್ಲಿ ಇದನ್ನು “ವಾರ್ ರೋಬಕ್” ಎಂದು ಕರೆಯಲಾಗುತ್ತಿತ್ತು. ಸತತವಾಗಿ 2012 ರಿಂದ ಹಡಗಿನಲ್ಲಿದ್ದ ಅವಶೇಷಗಳು ಹಾಗು ವಸ್ತುಗಳನ್ನು ಮೇಲತ್ತಲು ಆರಂಭಿಸಲಾಯಿತು. ಕಾರ್ಯಾಚರಣೆ ಅಂತಿಮಗೊಳ್ಳುವವರೆಗೆ ಒಟ್ಟು 2792 ಬೆಳ್ಳಿ ಗಟ್ಟಿಗಳನ್ನು ಹೊರತೆಗೆಯಲಾಗಿದೆ. ಇದರ ಒಟ್ಟೂ ತೂಕ 61 ಟನ್!!!. 2012 ರಲ್ಲಿ ಇದರ ಭಾರತೀಯ ಮೌಲ್ಯ ಬರೋಬ್ಬರಿ 900 ಕೋಟಿ!!!. ಬೃಹದಾಕಾರದ ಹಡಗಾಗಿದ್ದು ಐರ್ಲೆಂಡಿನಿಂದ ಮುನ್ನೂರು ಮೈಲು ದೂರದಲ್ಲಿ ಅವಶೇಶಗಳು ಇದ್ದುದರಿಂದ ಇದನ್ನು ಹೊರತೆಗೆಯುವ ಕಾರ್ಯಾಚರಣೆಗೆ ದೊಡ್ಡ ಸವಾಲಾಗಿತ್ತು.
ಸಿಕ್ಕಂತಹ ಬೆಳ್ಳಿ ಗೇರುಸೊಪ್ಪ ಸಾಮ್ರಾಜ್ಯದ್ದೇ?
ಕರ್ನಾಟಕದ ಗೇರುಸೊಪ್ಪ (ಜೋಗ) ಜಲಪಾತದ ಗೌರವಾರ್ಥವಾಗಿ ಹಾಗು ಪ್ರೀತಿಯಿಂದ ಈ ಹೆಸರನ್ನು ಬಳಸಲಾಗಿತ್ತು ಎನ್ನುವುದು ನಿಜ ಸಂಗತಿ. ಆದುದರಿಂದ ಹಡಗಿನಲ್ಲಿ ದೊರೆತ ಸಂಪತ್ತು ದಾಖಲಾತ್ಮಕವಾಗಿ ಗೇರುಸೊಪ್ಪೆಯದು ಅಲ್ಲ ಎಂದು ಹೇಳಬಹುದು. ಆದರೆ ಬೆಳ್ಳಿ ಅಷ್ಟೊಂದು ಪ್ರಮಾಣದಲ್ಲಿ ಒಟ್ಟಿಗೇ ಸಿಗಲು ಸಾಧ್ಯವೇ? ಅಂದು ಪೋರ್ಚುಗೀಸರು ಗೇರುಸೊಪ್ಪ ಸಂಪತ್ತನ್ನು ಕೊಳ್ಳೆ ಹೊಡೆದಿದ್ದರು. ಹಾಗು ಬ್ರಿಟೀಷರು ಗೇರುಸೊಪ್ಪವನ್ನು ಬಾಂಬೆ ರೆಸಿಡೆನ್ಸಿಗೆ ಸೇರಿಸಿದ್ದುದು, ಹಾಗು ಪೋರ್ಚುಗೀಸರ ದಾಖಲೆಗಳಲ್ಲಿ ಯಥೇಚ್ಛವಾಗಿ ಬೆಳ್ಳಿ ಗೇರುಸೊಪ್ಪದ ನಗರಿ ಸಾಮ್ರಾಜ್ಯಕ್ಕೆ ಆಮದು ಆಗಿದ್ದುದು ಕಂಡುಬರುತ್ತದೆ. ಹೀಗೆ ಅಂದಿನ ಕಾಲದಲ್ಲಿ ಮಹಾರಾಣಿ ಚನ್ನಭೈರಾದೇವಿ ಸಂಗ್ರಹಿಸಿದ ಸಂಪತ್ತು ಮುಂಬೈಗೆ ಹಲವು ರೂಪದಲ್ಲಿ ಹೋಗಿ ಸಂಗ್ರಹ ಆಗಿದ್ದಿರಬಹುದು. ಕಾಕತಳೀಯ ಎಂಬಂತೆ ಅಲ್ಲಿನ ಹಡಗಿಗೆ ಗೇರುಸೊಪ್ಪದ ಸಂಪತ್ತು ತುಂಬಿ ಅದರೊಟ್ಟಿಗೆ ಬ್ರಿಟನ್ ಗೆ ಕಳುಹಿಸಿರಬಹುದು. ಈ ಕುರಿತು ಹೆಚ್ಚಿನ ಅಧ್ಯಯನ ನಡೆದು ಸಂಪತ್ತಿನ ಮೂಲ ತಿಳಿದಲ್ಲಿ ವಿಷಯಕ್ಕೆ ಇತಿಶ್ರೀ ಹಾಡಬಹುದು.
ಏನೇ ಆಗಲಿ ಗೇರುಸೊಪ್ಪ ಹಡಗು ಎಂದರೆ ಒಮ್ಮೆಲೆ ದೃಷ್ಠಿ ಹಾಯುವುದು ನಗರಿ ಸಾಮ್ರಾಜ್ಯದ ಮೇಲೆ, ಅಂದರೆ ಮಹಾಮಂಡಲೇಶ್ವರಿ ಚನ್ನಭೈರಾದೇವಿ ಆಳಿದ ಗೇರುಸೊಪ್ಪ ಸಾಮ್ರಾಜ್ಯದ ಮೇಲೆ. ಇಂತಹ ಎಷ್ಟೋ ಸಂಪತ್ತು ಗೇರುಸೊಪ್ಪದಲ್ಲಿ ಇದ್ದುದಕ್ಕೆ ದಾಖಲೆಗಳೇ ಸಾಕ್ಷಿ.
ಮಾಹಿತಿ:- ಲೋಕರಾಜ ಜೈನ್
(ಸಾಳ್ವಕುಲಜ ನಗಿರೆಸುತ )