ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗದ ಮಹತ್ವವನ್ನು ಸಾರಿ, ಜೂನ್ 21ರಂದು ಜಾಗತಿಕವಾಗಿ ಯೋಗ ದಿನವನ್ನಾಗಿ ಆಚರಿಸುವಲ್ಲಿ ನರೇಂದ್ರ ಮೋದಿ ಅವರ ಯೋಗದಾನ ದೊಡ್ಡದು. ಈ ಬಾರಿಯ ಜೂನ್ 21ರಂದು ಜಗತ್ತಿನಾದ್ಯಂತ ಯೋಗ ದಿನ ಆಚರಿಸಲಾಗುತ್ತಿದೆ. ನರೇಂದ್ರ ಮೋದಿ ಈ ಬಾರಿ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಯೋಗ ದಿನವನ್ನು ಆಚರಿಸಲು ತೀರ್ಮಾನಿಸಿದ್ದಾರೆ. ಜೂನ್ 20ರಂದು ಶ್ರೀನಗರಕ್ಕೆ ತೆರಳಲಿರುವ ಮೋದಿ ಅವರು ಜೂನ್ 21ರಂದು ಯೋಗದಲ್ಲಿ ಪಾಲ್ಗೊಳ್ಳಲಿದ್ದಾರೆ.
ಶ್ರೀನಗರದಲ್ಲಿರುವ ದಾಲ್ ಸರೋವರದ ತೀರದಲ್ಲಿನ ಶೇರ್-ಐ-ಕಾಶ್ಮೀರ ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಸೆಂಟರ್ನಲ್ಲಿ ನರೇಂದ್ರ ಮೋದಿ ಅವರು ಯೋಗ ಮಾಡುವ ಮೂಲಕ ಯೋಗ ದಿನವನ್ನು ಆಚರಿಸಲಿದ್ದಾರೆ ಎಂದು ತಿಳಿದುಬಂದಿದೆ. ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ಬಳಿಕ ಶಾಂತಿ ನೆಲೆಸುತ್ತಿದ್ದು, ಜಿ-20 ಶೃಂಗಸಭೆಯನ್ನೂ ಆಯೋಜಿಸಲಾಗಿತ್ತು. ಯೋಗ ದಿನವನ್ನು ಆಚರಿಸುವ ಮೂಲಕ ಮೋದಿ ಅವರು ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ ಎಂಬ ಸಂದೇಶ ಸಾರಲಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ವರ್ಷ ಅಮೆರಿಕದಲ್ಲಿ ಯೋಗ
ಅಮೆರಿಕದ ನ್ಯೂಯಾರ್ಕ್ನಲ್ಲಿರುವ ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಯೋಗ ಸೆಷನ್ ನಡೆದಿತ್ತು. ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯಲ್ಲಿ ಯೋಗ ದಿನವನ್ನು ಆಚರಿಸಿದ್ದರು. ವಿಶ್ವದ ಹಲವು ನಾಯಕರು ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದರು. ಅಮೆರಿಕ ನೆಲದಲ್ಲಿ ನಿಂತು ಮೋದಿ ಅವರು ಯೋಗದ ಮಹತ್ವವನ್ನು ಸಾರಿದ್ದರು.