ಬೆಂಗಳೂರು : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅನರ್ಹ ಬಿಪಿಎಲ್ ರೇಷನ್ ಕಾರ್ಡ್‌ಗಳ ರದ್ದತಿ ಪ್ರಕ್ರಿಯೆಗೆ ಸರಕಾರ ಮುಂದಾಗಿದೆ. ರದ್ದುಗೊಳ್ಳುವ ಕಾರ್ಡ್ ಬದಲಿಗೆ ಬಿಪಿಎಲ್ ಕಾರ್ಡಿಗೆ ಕಾಯುತ್ತಿರುವ ಅರ್ಜಿದಾರರಿಗೆ ಅವಕಾಶ ನೀಡಲು ಸರಕಾರ ನಿರ್ಧರಿಸಿದೆ.

ಈ ನಡುವೆ ಆಹಾರ, ನಾಗರಿಕ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹೆಚ್ಚುವರಿ ನಿರ್ದೇಶಕ ಚಂದ್ರಕಾಂತ ಹೇಳಿಕೆ ನೀಡಿ, ಹೊಸ ಬಿಪಿಎಲ್ ಕಾರ್ಡುಗಳಿಗೆ ಸಾಕಷ್ಟು ಅರ್ಜಿಗಳಿವೆ. ಆದರೆ ಇನ್ನೂ ಯಾರಿಗೂ ವಿತರಿಸಿಲ್ಲ. ಹೊಸದಾಗಿ ಕಾರ್ಡ್ ವಿತರಿಸುವ ಚಿಂತನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಬರುವ ದಿನಗಳಲ್ಲಿ ಹಂತ ಹಂತವಾಗಿ ಅರ್ಹ ಬಿಪಿಎಲ್ ಕಾರ್ಡುದಾರರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಈ ನಡುವೆ ನಕಲಿ ಕಾರ್ಡ್ ಗಳು ರದ್ದುಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಆರ್ಥಿಕವಾಗಿ ಸಬಲರಾಗಿದ್ದು ಬಿಪಿಎಲ್ ಕಾರ್ಡುಗಳನ್ನು ಹೊಂದಿದ್ದರೆ ಅಥವಾ ಈ ಹಿಂದೆ ಬಿಪಿಎಲ್ ನಲ್ಲಿದ್ದು ಈಗ ಬಡತನ ರೇಖೆಯಿಂದ ಮೇಲೆ ಬಂದಿರುವವರನ್ನು ಪತ್ತೆ ಮಾಡಲು ಸರಕಾರ ಮುಂದಾಗಿದೆ.