ಕಾಸರಗೋಡು: ದೇವರ ಮೊಸಳೆ ಎಂದೇ ಖ್ಯಾತವಾಗಿರುವ ಈ ಅಪರೂಪದ ಮೊಸಳೆ ಭಕ್ತರಿಗೆ ದರ್ಶನವಾಗಿದೆ. ವಿಷಯ ತಿಳಿದು ಭಕ್ತರು ಕೌತುಕಕ್ಕೊಳಗಾಗಿದ್ದು ಇದು ಈಗ ಚರ್ಚೆಗೆ ಗ್ರಾಸವಾಗಿದೆ.ಸರೋವರ ಕ್ಷೇತ್ರ ಎಂದು ಪ್ರಸಿದ್ದಿ ಪಡೆದಿರುವ ಕುಂಬಳೆಯ ಶ್ರೀ ಅನಂತಪುರ ಕ್ಷೇತ್ರದಲ್ಲಿ ತಿಂಗಳ ಹಿಂದೆ ಪ್ರತ್ಯಕ್ಷಗೊಂಡಿದ್ದ ನೂತನ ಮೊಸಳೆ ಮರಿ ಬಬಿಯಾ-3 ಇದೇ ಮೊದಲ ಬಾರಿಗೆ ಶುಕ್ರವಾರ ಸಂಜೆ ಸುಮಾರಿಗೆ ಕ್ಷೇತ್ರದ ಪ್ರಾಂಗಣದಲ್ಲಿ ಪೂರ್ಣ ದರ್ಶನ ತೋರಿದೆ. 78 ವರ್ಷಗಳಿಂದ ಕ್ಷೇತ್ರದ ಕೊಳದಲ್ಲಿ ನೆಲೆಸಿದ್ದ ಮೊಸಳೆ 2022ರ ಅಕ್ಟೋಬರ್ ಒಂಬತ್ತರಂದು (ಈ ಹಿಂದೆ ಇದ್ದ ಬಬಿಯಾ ಎಂಬ ಮೊಸಳೆ) ಮೃತಪಟ್ಟಿತ್ತು. ಆನಂತರ ಬರೋಬ್ಬರಿ ವರ್ಷದ ಬಳಿಕ ಆನಂದ ಹೆಸರಿನ ಇನ್ನೊಂದು ಮೊಸಳೆ ಮರಿ ಕೊಳದಲ್ಲಿ ಕಾಣಿಸಿಕೊಂಡಿತ್ತು. ಈ ಮರಿಗೆ ಬಬಿಯಾ ಎಂದು ನಾಮಕರಣ ಮಾಡಲಾಗಿತ್ತು. ಆದರೆ, ಅದನ್ನು ಸಂಪೂರ್ಣವಾಗಿ ಕಂಡವರಿಲ್ಲ. ಜೂನ್ 14ರಂದು ಗರ್ಭಗುಡಿಯ ಹಾಸು ಕಲ್ಲಿನ ಮೇಲೆ ವಿಶ್ರಾಂತಿ ಪಡೆಯುತ್ತಿರುವುದು ಗಮನಕ್ಕೆ ಬಂತು. ಆ ಸಂದರ್ಭದಲ್ಲಿ ಕ್ಷೇತ್ರದ ನಡೆ (ದಾರಿ)ಮುಚ್ಚಿತ್ತು. ಸಂಜೆ ಆಗಮಿಸಿದ ಅರ್ಚಕರು ಇದನ್ನು ಗಮನಿಸಿ ದೃಶ್ಯವನ್ನು ಚಿತ್ರೀಕರಿಸಿ ಹಂಚಿದ್ದಾರೆ.