ಬೆಂಗಳೂರು : ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಹಾಸ್ಯ ನಟ ಚಿಕ್ಕಣ್ಣ ಅವರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಅವರ ಜೊತೆ ಇದೀಗ ಮತ್ತೊಬ್ಬ ನಟನಿಗೂ ಸಂಕಷ್ಟ ಎದುರಾಗಿದೆ.

ದರ್ಶನ್ ಆಪ್ತನಾಗಿರುವ ಗರಡಿ ಸಿನಿಮಾದ ನಾಯಕ ನಟ ಯಶಸ್ ಸೂರ್ಯ ರೆಸ್ಟೋರೆಂಟ್‌ನಲ್ಲಿ ನಡೆದ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂಬ ಮಾಹಿತಿ ಸಿಕ್ಕಿದೆ. ಇದಕ್ಕೆ ಸಂಬಂಧಿಸಿದ ದೃಶ್ಯಾವಳಿಗೆ ಹುಡುಕಾಟ ನಡೆಸುತ್ತಿದ್ದೇವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಸೂಕ್ತ ಸಾಕ್ಷ್ಯ ಲಭಿಸಿದರೆ ನೋಟಿಸ್ ಕೊಟ್ಟು ವಿಚಾರಣೆಗೆ ಹಾಜರಾಗುವಂತೆ ಸೂಚಿಸುತ್ತೇವೆ ಎಂದು ಹೇಳಿದ್ದಾರೆ.

ಪಾರ್ಟಿ ಸ್ಥಳದಲ್ಲಿ ನಟ ದರ್ಶನ್, ಅವರ ಆಪ್ತ ಪವಿತ್ರಾಗೌಡ, ಆರೋಪಿಗಳಾದ ವಿನಯ್, ದೀಪಕ್ ಸಹ ಇದ್ದರು. ದರ್ಶನ್‌ಗೆ ಕರೆ ಬರುತ್ತಿದ್ದಂತೆ ಸಿಟ್ಟಿನಿಂದ ಕುರ್ಚಿಯನ್ನು ಒದ್ದು ತೆರಳಿದ್ದರು. ಅಲ್ಲಿಂದ ಕಾರಿನಲ್ಲಿ ಪಟ್ಟಣಗೆರೆ ಶೆಡ್‌ಗೆ ಹೋಗಿದ್ದರು. ಶೆಡ್ ಆವರಣದ ಒಳಕ್ಕೆ ಕಾರು ಹಾಗೂ ಜೀಪು ತೆರಳುತ್ತಿದ್ದ ದೃಶ್ಯ ಸಹ ಸಿಕ್ಕಿದೆ ಎಂದು ಮೂಲಗಳು ಹೇಳಿವೆ.

ಪವಿತ್ರಾಗೌಡರ ಸಹಾಯಕ ಪವನ್ ಎಂಬಾತ ರೇಣುಕಸ್ವಾಮಿಯನ್ನು ಅಪಹರಿಸಿ ಶೆಡ್‌ಗೆ ಕರೆ ತಂದಿದ್ದ ಮಾಹಿತಿಯನ್ನು ರೆಸ್ಟೋರೆಂಟ್‌ನಲ್ಲಿದ್ದಾಗ ದರ್ಶನ್‌ಗೆ ಕರೆ ಮಾಡಿ ತಿಳಿಸಿದ್ದರು ಎಂದು ಪೊಲೀಸರು ಹೇಳಿದರು.