ಬೆಂಗಳೂರು : ಕರ್ನಾಟಕಕ್ಕೆ ಹೊಂದಿಕೊಂಡಿರುವ ನೆರೆಯ ಕೇರಳದಲ್ಲಿ ಮೇ 30 ರಂದೇ ನೈರುತ್ಯ ಮುಂಗಾರು ಆರಂಭವಾಗಿದೆ. ಆದರೂ ಶೇಕಡಾ 20ರಷ್ಟು ಮಳೆ ಕೊರತೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಂಗಳವಾರ ಹೇಳಿದೆ.

ಮುಂಗಾರು ಮಳೆ ಕುರಿತು ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ಜೂನ್ ತಿಂಗಳಲ್ಲಿ ಸುರಿಯುವ ಒಟ್ಟಾರೆ ಮಳೆ ಪ್ರಮಾಣ ದೇಶದ ದೀರ್ಘಕಾಲದ ಸರಾಸರಿ 92 ಸೆಂಟಿಮೀಟರ್ ಗಿಂತಲೂ ಕಡಿಮೆ ಇರಲಿದೆ ಎಂದು ಅಂದಾಜು ಮಾಡಿದೆ. ಇಡೀ ದೇಶದಲ್ಲಿ ಜೂನ್ ತಿಂಗಳಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ದೇಶದ ಉತ್ತರ ಮತ್ತು ವಾಯವ್ಯ ಪ್ರದೇಶಗಳಲ್ಲಿ ತೀವ್ರ ತಾಪಮಾನ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಳಗಾವಿ ಜಿಲ್ಲೆಯಲ್ಲಿ ಈ ವರ್ಷವೂ ತೀವ್ರ ಮುಂಗಾರು ಮಳೆ ಅಭಾವ ತಲೆದೋರಿದೆ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಒಂದು ಅಂದಾಜಿನ ಪ್ರಕಾರ ಈ ವರ್ಷ ಬೆಳಗಾವಿ ಜಿಲ್ಲೆ ಸೇರಿದಂತೆ ಎಲ್ಲೆಡೆ ಅತ್ಯುತ್ತಮ ಮಳೆ ಆಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಆ ನಿರೀಕ್ಷೆ ಈಗ ಹುಸಿಯಾದಂತೆ ಕಂಡು ಬರುತ್ತಿದೆ. ಈಗಾಗಲೇ ಜೂನ್ ಅರ್ಧ ತಿಂಗಳು ಮುಗಿದು ಹೋಗಿದ್ದರೂ ನಿರೀಕ್ಷೆಗಿಂತ ಹೆಚ್ಚು ಮಳೆ ಆಗದೆ ಇರುವುದು ರೈತ ಸಮುದಾಯಕ್ಕೆ ಆತಂಕ ತಂದಿದೆ. ಮುಂದಿನ ದಿನಗಳಲ್ಲಿ ಇದೇ ರೀತಿ ಆಗಾಗ ಮಳೆ ಕೈಕೊಟ್ಟರೆ ಮುಂದೇನು ಮಾಡುವುದು ಎಂಬ ಚಿಂತೆ ಇದೀಗ ರೈತನದಾಗಿದೆ. ಜೂನ್ ತಿಂಗಳ ಆರಂಭದ ದಿನಗಳಲ್ಲಿ ದಟ್ಟ ಮಲೆನಾಡಿನ ಮಡಿಲಲ್ಲಿ ಇರುವ ಬೆಳಗಾವಿ, ಖಾನಾಪುರ ಸೇರಿದಂತೆ ಜಿಲ್ಲೆಯಲ್ಲಿ ಅತ್ಯುತ್ತಮ ಮಳೆಯಾಗಿತ್ತು. ವಾಡಿಕೆಗಿಂತಲೂ ಹೆಚ್ಚು ಮಳೆ ಬಿದ್ದಿತ್ತು. ಆದರೆ, ಇದೀಗ ಒಂದು ವಾರದ ನಂತರ ಮಳೆ ಕೈಕೊಟ್ಟಿದೆ.

ಒಂದೆಡೆ ಮಳೆ ಕೊರತೆ ಎದುರಾಗಿದ್ದರೆ ಇನ್ನೊಂದೆಡೆ ತಂಪು ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಳಗಾವಿಯಲ್ಲಿ ತಾಪಮಾನ ಹೆಚ್ಚಿರುವುದು ಗಮನಾರ್ಹ ಬೆಳವಣಿಗೆ.

ಕರಾವಳಿ ಜಿಲ್ಲೆಗಳಲ್ಲೂ ಮಳೆಯ ಕೊರತೆ ಕಂಡು ಬಂದಿದೆ.

ಒಟ್ಟಾರೆ ಇದೀಗ ದೇಶಾದ್ಯಂತ ಗಮನಿಸಿದರೆ ಜೂನ್ ತಿಂಗಳಲ್ಲಿ ವಾಡಿಗಿಗಿಂತ ಕಡಿಮೆ ಮಳೆಯಾಗಿರುವುದು ಕಂಡು ಬಂದಿದೆ. ಇದೇ ರೀತಿ ವಾತಾವರಣದಲ್ಲಿ ಏರುಪೇರು ಮುಂದುವರಿದರೆ ಮುಂದಿನ ದಿನಗಳಲ್ಲಿ ಉತ್ತಮ ಮಳೆ ಬೆಳೆ ಕಾಣುವ ಕನಸು ಕಂಡ ರೈತ ಸಮೂಹ ತೊಂದರೆಗೊಳಗಾಗುವುದು ಖಚಿತ.

ಬಿಸಿ ಗಾಳಿಗೆ ತತ್ತರ :
ಉತ್ತರ ಭಾರತದಲ್ಲಿ ಕೆಲವು ದಿನ ಬಿಡುವು ನೀಡಿದ್ದ ಬಿಸಿಗಾಳಿ ಈಗ ಮತ್ತೆ ತನ್ನ ಪ್ರತಾಪ ತೋರಲಾರಂಭಿಸಿದೆ. ಹಲವು ರಾಜ್ಯಗಳಲ್ಲಿ ಮಂಗಳವಾರ 45 ಡಿಗ್ರಿಗೂ ಅಧಿಕ ಉಷ್ಣಾಂಶ ದಾಖಲಾಗಿದೆ. 2 ದಿನದಲ್ಲಿ ದೆಹಲಿ, ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ನಲ್ಲಿ ತಾಪಮಾನ ಭಾರಿ ಏರಿಕೆ ಆಗಿದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.

ದಿಲ್ಲಿಯಲ್ಲಿ ಸುಮಾರು 45 ಡಿಗ್ರಿ ತಾಪ ಇದೆ. ಆದರೂ 50 ಡಿಗ್ರಿ ತಾಪದ ಅನುಭವ ಆಗುತ್ತಿದೆ. ರಾಜಸ್ಥಾನದ ಗಂಗಾ ನಗರದಲ್ಲಿ 46.2 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಉಳಿದಂತೆ ಉತ್ತರದ ರಾಜ್ಯಗಳಾಗಿರುವ ಉತ್ತರಾಖಂಡ, ಬಿಹಾರ, ಝಾರ್ಖಂಡ್‌ನಲ್ಲಿ 46 ಡಿಗ್ರಿಗೂ ಅಧಿಕ ತಾಪಮಾನ ದಾಖಲಾಗಿದೆ. ಉತ್ತರಾಖಂಡದ ಡೆಹ್ರಾ ಡೂನ್‌ನಲ್ಲಿ 43.1, 43 2, ಜಮ್ಮು ಕಾಶ್ಮೀರದ ಕಟ್ರಾದಲ್ಲಿ 40.8 ಡಿಗ್ರಿ, ಜಮ್ಮು ವಿನಲ್ಲಿ 44.3 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಬಿಸಿಗಾಳಿಗೆ ಬಿಹಾರದಲ್ಲಿ ಕಳೆದ 24 ಗಂಟೆಯಲ್ಲಿಯೇ 22 ಜನ ಬಲಿಯಾಗಿದ್ದಾರೆ ಎಂದು
ವರದಿಯಾಗಿದೆ.