ಉಡುಪಿ: 2028ರಿಂದ ಪ್ರಾರಂಭವಾಗುವ ಸೋದೆ ಮಠದ ಪರ್ಯಾಯದಲ್ಲಿ ಶ್ರೀ ಕೃಷ್ಣನಿಗೆ ದಿನಕ್ಕೊಂದು ತಳಿ ಅಕ್ಕಿಯ ಅನ್ನವನ್ನು ನೈವೇದ್ಯ ಮಾಡುವ ಸಂಕಲ್ಪ ಮಾಡಿದೆ. ಇದಕ್ಕಾಗಿ ಒಂದು ವರ್ಷಕ್ಕೆ ಸುಮಾರು 340 ತಳಿಯ ಅಕ್ಕಿಯ ಅಗತ್ಯತೆಯನ್ನು ಸಮುದಾಯದ ಮುಂದಿಟ್ಟಿದ್ದಾರೆ. ಅದಕ್ಕೆ ಈಗಾಗಲೇ ಸ್ಪಂದಿಸಿರುವ ತೀರ್ಥಹಳ್ಳಿಯ ಕೃಷಿ ಪ್ರಯೋಗ ಪರಿವಾರ, ಕಳೆದ ವರ್ಷ ತೀರ್ಥಹಳ್ಳಿ ಹಾಗೂ ಉಡುಪಿಯಲ್ಲಿ ಬೊಗಸೆ ಭತ್ತದ ಬೀಜವನ್ನು ನೀಡುವ ಮೂಲಕ ತಳಿ ಸಂರಕ್ಷಣೆ ಕಾರ್ಯಕ್ಕೆ ಚಾಲನೆ ನೀಡಿದೆ.ಈ ಸಲವೂ ಅದನ್ನು ವಿಸ್ತರಿಸುವ ಕಾರ್ಯಕ್ರಮದ ಭಾಗವಾಗಿ ಇನ್ನೂ ಹೆಚ್ಚಿನ ರೈತರಿಗೆ ಬೊಗಸೆ ಭತ್ತದ ಬೀಜವನ್ನು ನೀಡುವ ನಿಟ್ಟಿನಲ್ಲಿ ಜೂನ್ 20ರಂದು ಸಂಜೆ 4 ಗಂಟೆಗೆ ಪೇಜಾವರ ಮಠದ ಶ್ರೀರಾಮ ವಿಠಲ ಸಭಾಭವನ, ಉಡುಪಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಆದಮಾರು ಮಠದ ಕಿರಿಯ ಸ್ವಾಮೀಜಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಬೊಗಸೆ ಭತ್ತದ ಬೀಜ ಪ್ರದಾನ ಮಾಡಲಿದ್ದಾರೆ. ಕೇದಾರೋತ್ಥಾನ ಟ್ರಸ್ಟ್ ಸಹಯೋಗದಲ್ಲಿ ಈ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿಯ ಕೃಷಿ ಪ್ರಯೋಗ ಪರಿವಾರ, ಉಡುಪಿಯ ಭಾರತೀಯ ಕಿಸಾನ್ ಸಂಘಗಳ ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿರುವರು.ಭತ್ತದ ತಳಿ ಸಂರಕ್ಷಣೆಯ ಜೊತೆಗೆ ಶ್ರೀ ಕೃಷ್ಣನಿಗೆ ಶುದ್ದ ನೈವೇದ್ಯವನ್ನು ಸಮರ್ಪಿಸುವ ಚಿಂತನೆಗೆ ಕೈ ಜೋಡಿಸಲು ಆಸಕ್ತರಿರುವ ಎಲ್ಲ ರೈತರು ಇದರಲ್ಲಿ ಭಾಗವಹಿಸಬಹುದು ಎಂದು ಭಾಕಿಸಂ ಪ್ರ.ಕಾರ್ಯದರ್ಶಿ ಸತ್ಯನಾರಾಯಣ ಉಡುಪ ತಿಳಿಸಿದ್ದಾರೆ.