ಬೆಂಗಳೂರು:
ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ವಿಶೇಷ ನ್ಯಾಯಾಲಯ ರಚನೆ ಜೊತೆ ಪೂರ್ಣವಧಿ ನ್ಯಾಯಾಧೀಶರ ನೇಮಕಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಸರ್ಕಾರದ ಅಪಾರ ಮುಖ್ಯಕಾರ್ಯದರ್ಶಿಗೆ ಟಿಪ್ಪಣಿ ಮೂಲಕ ಸೂಚಿಸಿದ್ದಾರೆ.
ಪತ್ರಕರ್ತೆ ಹಾಗೂ ಸಾಮಾಜಿಕ ಕಾರ್ಯಕರ್ತೆಯಾಗಿದ್ದ ಗೌರಿ ಲಂಕೇಶ್ 2017ರ ಸೆ.5ರಂದು ಹತ್ಯೆಗೀಡಾಗಿದ್ದು, ಈ ಸಂಬಂಧ ವಿಶೇಷ ತನಿಖಾ ದಳ ರಚಿಸಲಾಗಿದೆ. ಎಂಎಂ ಕಲಬುರ್ಗಿ ಅವರನ್ನು 2015 ಆಗಸ್ಟ್ 31ರಂದು ಧಾರವಾಡದ ಅವರ ಸ್ವಗೃಹದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಆದರೆ, ಏಳು ವರ್ಷಗಳು ಪೂರ್ಣಗೊಂಡಿವೆ. ಪ್ರಕರಣದ ಸಂಬಂಧ ನ್ಯಾಯಾಲಯಕ್ಕೆ ಚಾರ್ಜ್‌ ಶೀಟ್ ಸಲ್ಲಿಕೆಯಾಗಿದ್ದು, ಮೃತರ ಕುಟುಂಬದವರ ವಿಚಾರಣೆಗಳು ಪೂರ್ಣಗೊಂಡಿದ್ದರೂ ನ್ಯಾಯಾಲಯದಲ್ಲಿ ವಿಚಾರಣೆಗಳು ಮುಂದುವರೆದಿವೆ. ಈಗಾಗಲೇ ಸಾಕಷ್ಟು ಸಮಯ ಆಗಿರುವುದರಿಂದ ವಿಶೇಷ ನ್ಯಾಯಾಲಯ ರಚಿಸುವಂತೆ ಎಂಎಂ ಕಲಬುರ್ಗಿ ಪತ್ನಿ ಉಮಾದೇವಿ ಅವರು ಕೋರಿದ್ದು, ಈ ಸಂಬಂಧ ಜರೂರು ಅಗತ್ಯ ಕ್ರಮವಹಿಸಲು ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.