ನವದೆಹಲಿ: ಐರೋಪ್ಯ ಬಾಹ್ಯಾಕಾಶ ಸಂಸ್ಥೆ (European Space Agency) ತನ್ನ ಕೋಪರ್ನಿಕಸ್ ಸೆಂಟಿನೆಲ್-2 ಉಪಗ್ರಹದಿಂದ ತೆಗೆದ ‘ರಾಮಸೇತು’ವಿನ ಚಿತ್ರವನ್ನು ಹಂಚಿಕೊಂಡಿದೆ. ಆಡಮ್ಸ್ ಬ್ರಿಡ್ಜ್ ಎಂದೂ ಕರೆಯಲ್ಪಡುವ ಇದು ಭಾರತ ಮತ್ತು ಶ್ರೀಲಂಕಾವನ್ನು ಸಂಪರ್ಕಿಸುವ ಶೋಲ್ಗಳ ಸರಪಳಿಯಾಗಿದೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ರಾಮಸೇತು ಶ್ರೀಲಂಕಾದ ಮನ್ನಾರ್ ದ್ವೀಪ ಹಾಗೂ ಭಾರತದ ಆಗ್ನೇಯ ಕರಾವಳಿಯ ರಾಮೇಶ್ವರಂ ದ್ವೀಪದ ನಡುವೆ 48 ಕಿಮೀ ವ್ಯಾಪಿಸಿದೆ. ಭಾರತದ ಆಗ್ನೇಯ ಕರಾವಳಿಯ ರಾಮೇಶ್ವರಂ ದ್ವೀಪದಿಂದ ಶ್ರೀಲಂಕಾ ದೇಶದ ಮನ್ನಾರ್ ದ್ವೀಪದವರೆಗೆ ಈ ಸೇತುವೆ ಕಂಡು ಬರುತ್ತದೆ. ಈ ಸೇತುವೆ ಮನ್ನಾರ್ ಕೊಲ್ಲಿ ಹಾಗೂ ಪಾಕ್ ಜಲಸಂಧಿಯನ್ನು ಪ್ರತ್ಯೇಕಿಸುತ್ತದೆ.
ಈ ರಾಮಸೇತು ಕುರಿತಾಗಿ ಹಲವು ಸಿದ್ಧಾಂತಗಳಿವೆ. ಭಗವಾನ್ ಶ್ರೀರಾಮನು ಲಂಕೆಗೆ ಹೋಗಲು ವಾನರ ಸೇನೆ ಜೊತೆ ನಿರ್ಮಿಸಿದ ಸೇತುವೆ ಎನ್ನುವ ಬಲವಾದ ನಂಬಿಕೆ ಭಾರತದಲ್ಲಿದೆ. ಇದು ನಿಸರ್ಗ ಸಹಜ ಸೇತುವೆ ಎಂಬ ವಾದವೂ ಇದೆ. ರಾಮಸೇತುವೆಯು ಹೇಗೆ ರೂಪುಗೊಂಡಿತು ಎಂಬುದರ ಕುರಿತು ಹಲವಾರು ಸಿದ್ಧಾಂತಗಳಿದ್ದರೂ, ಈ ಸುಣ್ಣದ ಕಲ್ಲುಗಳು ಒಂದು ಕಾಲದಲ್ಲಿ ಭಾರತವನ್ನು ಶ್ರೀಲಂಕಾದೊಂದಿಗೆ ಜೋಡಿಸಿದ ಭೂಮಿಯ ಅವಶೇಷಗಳಾಗಿವೆ ಎಂದು ಭೂವೈಜ್ಞಾನಿಕ ಪುರಾವೆಗಳು ಸೂಚಿಸುತ್ತವೆ.

ವರದಿಗಳ ಪ್ರಕಾರ, “ನೈಸರ್ಗಿಕ ಸೇತುವೆಯು 15 ನೇ ಶತಮಾನದವರೆಗೂ ಶ್ರೀಲಂಕಾ ವರೆಗೆ ಪ್ರಯಾಣಿಸಬಹುದಾಗಿತ್ತು, ನಂತರದ ವರ್ಷಗಳಲ್ಲಿ ಇದು ಬಿರುಗಾಳಿಗಳಿಂದ ಕ್ರಮೇಣ ಸವೆದುಹೋಯಿತು ಹಾಗೂ ಸಮುದ್ರ ಮಟ್ಟ ಏರಿಕೆಯಾದ ಹಿನ್ನೆಲೆಯಲ್ಲಿ ರಾಮ ಸೇತುವೆ ಮುಳುಗಡೆಯಾಯ್ತು ಎಂದು ಹೇಳಲಾಗುತ್ತದೆ.
ಕೆಲವು ಕಡೆ ಮರಳಿನ ದಿನ್ನೆಗಳು ಕಾಣುತ್ತವೆ, ಹೆಚ್ಚಿನ ಕಡೆ ಸಮುದ್ರವು ತುಂಬಾ ಆಳವಿಲ್ಲ, ಸಮುದ್ರದ ಆಳ ಬಹುತೇಕ ಕಡೆ ಕೇವಲ 1-10 ಮೀ ಮಾತ್ರ ಆಗಿದೆ. ಅದರ ಕೆಳಗಡೆ ರಾಮಸೇತು ಎಂದು ಕರೆಯುವ ಸುಣ್ಣ ಕಲ್ಲುಗಳ ದಿಬ್ಬವಿದೆ. ಈ ವರ್ಷದ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಮಸೇತುವಿನ ಆರಂಭದ ಸ್ಥಳವಾದ ಅರಿಚಲ್ ಮುನೈಗೆ ಭೇಟಿ ನೀಡಿದ್ದರು.

ರಾಮೇಶ್ವರಂ ದ್ವೀಪದಿಂದ ಮನ್ನಾರ್ ದ್ವೀಪಕ್ಕೆ ಸಂಪರ್ಕ ಕಲ್ಪಿಸುವ ರಾಮ ಸೇತು, ಶ್ರೀಲಂಕಾ ಮುಖ್ಯ ಭೂಮಿಗೂ ಸಂಪರ್ಕ ಕಲ್ಪಿಸುತ್ತದೆ. ಸುಮಾರು 130 ಚದರ ಕಿ. ಮೀ. ಇರುವ ಮನ್ನಾರ್ ದ್ವೀಪದಿಂದ ಶ್ರೀಲಂಕಾ ಮುಖ್ಯ ಭೂಮಿಗೆ ತಲುಪಲು ರಸ್ತೆ, ಸೇತುವೆ, ರೈಲು.. ಹೀಗೆ ಹಲವು ಮಾರ್ಗಗಳ ಸಂಪರ್ಕ ಹೊಂದಿದೆ. ಇವೆರಡೂ ದ್ವೀಪದ ದಕ್ಷಿಣ ತುದಿಯಲ್ಲಿ ಗೋಚರಿಸುತ್ತವೆ.
ಭಾರತದ ಭಾಗದಲ್ಲಿ ರಾಮೇಶ್ವರಂ ದ್ವೀಪವಿದೆ. ಇದು ಪಂಬನ್ ದ್ವೀಪವೆಂದೂ ಜನಪ್ರಿಯವಾಗಿದೆ. ಸುಮಾರು 2 ಕಿಮೀ ಉದ್ದದ ಪಂಬನ್ ಸೇತುವೆಯ ರಾಮೇಶ್ವರಂಗೆ ಸಂಪರ್ಕ ಕಲಿಸುತ್ತದೆ. ಇದರಲ್ಲಿರುವ ಎರಡು ಮುಖ್ಯ ಪಟ್ಟಣಗಳೆಂದರೆ ಪಂಬನ್ ಮತ್ತು ರಾಮೇಶ್ವರಂ, ಪಂಬನ್‌ನಿಂದ ಪೂರ್ವಕ್ಕೆ ಇದು 10 ಕಿಮೀ ದೂರದಲ್ಲಿದೆ. ಇದಕ್ಕಿಂತ ಮುಂದೆ 7-8 ಕಿಮೀ ಹೋದರೆ ಧನುಷ್ಕೋಡಿ ಸಿಗುತ್ತದೆ. ಇಲ್ಲಿಂದ ಶ್ರೀಲಂಕಾದ ತಲೈಮನ್ನಾರ ಪ್ರದೇಶವು ಭಾರತಕ್ಕೆ ಅತ್ಯಂತ ಸಮೀಪದ ಪ್ರದೇಶ ಎಂದು ಪರಿಗಣಿತವಾಗಿದೆ.