ಆಗುಂಬೆ : ಭಾರಿ ಮಳೆ ಹಿನ್ನೆಲೆಯಲ್ಲಿ ಆಗುಂಬೆ ಘಾಟಿಯಲ್ಲಿ ಸೆಪ್ಟೆಂಬರ್ 15ರವರೆಗೆ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಗುರುದತ ಹೆಗಡೆ ಆದೇಶ ಹೊರಡಿಸಿದ್ದು ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಸೂಚನೆ ನೀಡಿದ್ದಾರೆ.ಆಗುಂಬೆ ಘಾಟಿಯಲ್ಲಿ ಮಳೆಗಾಲದ ಅವಧಿಯಲ್ಲಿ ಭೂಕುಸಿತ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಜೂನ್ 27ರಿಂದ ಸೆಪ್ಟೆಂಬರ್ 15ರವರೆಗೆ ಭಾರಿ ವಾಹನ ಸಂಚರಿಸದಂತೆ ಆದೇಶಿಸಲಾಗಿದೆ. ತೀರ್ಥಹಳ್ಳಿಯಿಂದ ಉಡುಪಿಗೆ ಹೋಗುವ ಭಾರೀ ವಾಹನಗಳು ತೀರ್ಥಹಳ್ಳಿ- ಮಾಸ್ತಿಕಟ್ಟೆ-ಸಿದ್ದಾಪುರ- ಕುಂದಾಪುರ ಮೂಲಕ ಉಡುಪಿಗೆ ಹೋಗಬಹುದು. ಉಡುಪಿಯಿಂದ ತೀರ್ಥ ಹಳ್ಳಿಗೆ ಬರುವವರು ಉಡುಪಿ-ಕುಂದಾಪುರ- ಸಿದ್ದಾಪುರ-ಮಾಸ್ತಿಕಟ್ಟೆ ಮೂಲಕ ತೀರ್ಥಹಳ್ಳಿಗೆ ಸಂಚರಿಸಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.