ಬೆಳಗಾವಿ : ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿಯಾಗಿ ಕರ್ನಾಟಕದ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಮತ್ತು ಇತರ ಪ್ರಮುಖ ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ವಿವಿಧ ಪ್ರಸ್ತಾವನೆಗಳಿಗೆ ಶೀಘ್ರವೇ ಅನುಮೋದನೆ ನೀಡುವಂತೆ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಬೆಳಗಾವಿ – ಹುನಗುಂದ- ರಾಯಚೂರು (NH748A) ಹೆದ್ದಾರಿ, ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ, ಸೂರತ್‌ ಚೆನ್ನೈ ಎಕ್ಸ್‌ಪ್ರೆಸ್‌ ವೇ, ಬೆಂಗಳೂರು ನಗರದ ಉಪನಗರ ವರ್ತುಲ ರಸ್ತೆ, ಗ್ರೀನ್‌ಫೀಲ್ಡ್‌ ಕಾರಿಡಾರ್‌ಗಳ ಅಭಿವೃದ್ಧಿಗೆ ಅನುಮೋದನೆ ನೀಡಿರುವುದಕ್ಕೆ ಕೇಂದ್ರ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಕೃತಜ್ಞತೆ ಸಲ್ಲಿಸಿದ್ದಾರೆ.

ರಾಜ್ಯ ಸರ್ಕಾರದ ಪ್ರಸ್ತಾವನೆಯಲ್ಲಿ ಸಲ್ಲಿಸಲಾಗಿರುವ ಪ್ರಮುಖ ವಿಷಯಗಳು
ದಿನಕ್ಕೆ 10,000 ಪಿಸಿಯು ವಾಹನ ದಟ್ಟಣೆ ಹೊಂದಿರುವ ರಾಜ್ಯ ಹೆದ್ದಾರಿಗಳನ್ನು ಉನ್ನತೀಕರಿಸಲು ಮನವಿ
ಶಿರಾಡಿ ಘಾಟ್‌ನಲ್ಲಿ ಮಾರನಹಳ್ಳಿಯಿಂದ ಅಡ್ಡಹೊಳೆ ನಡುವೆ ಟನೆಲ್‌ ನಿರ್ಮಾಣದ ಮೂಲಕ ಮಂಗಳೂರು ಬಂದರು ಸಂಪರ್ಕ ಇನ್ನಷ್ಟು ಸುಗಮಗೊಳಿಸುವುದು.
ಮೈಸೂರು ನಗರದ ಮಣಿಪಾಲ್‌ ಆಸ್ಪತ್ರೆ ಜಂಕ್ಷನ್‌ (ಕೊಲಂಬಿಯ ಏಷ್ಯಾ ಆಸ್ಪತ್ರೆ) ನಲ್ಲಿ ಫ್ಲೈಓವರ್‌ ನಿರ್ಮಾಣಕ್ಕೆ ಅನುಮೋದನೆ.
ಮೈಸೂರು ರಿಂಗ್‌ ರಸ್ತೆಯಲ್ಲಿ NH-275K ನಲ್ಲಿ 9 ಗ್ರೇಡ್‌ ಸೆಪರೇಟರುಗಳ ನಿರ್ಮಾಣಕ್ಕೆ ಅನುಮೋದನೆ

ಬೆಳಗಾವಿ ನಗರದಲ್ಲಿ ಹಳೆ NH4 ನಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಅನುಮೋದನೆ
ಬೆಳಗಾವಿ ಜಿಲ್ಲೆಯ ಗೋಕಾಕ ಜಲಪಾತದಲ್ಲಿ ಕೇಬಲ್‌ ಕಾರ್‌ ಸೌಲಭ್ಯ ಕಲ್ಪಿಸುವ ಯೋಜನೆ
ಕಿತ್ತೂರು ಪಟ್ಟಣದಿಂದ ಬೈಲಹೊಂಗಲವನ್ನು ಸಂಪರ್ಕಿಸುವ ರಸ್ತೆಯ ಸುಧಾರಣೆ.
ಕಲಬುರಗಿ ಮತ್ತು ರಾಯಚೂರಿನಲ್ಲಿ ಬೈಪಾಸ್‌ ನಿರ್ಮಾಣ
NH-373 ರ ಬೇಲೂರು ಚಿಕ್ಕಮಗಳೂರು ವಿಭಾಗದಲ್ಲಿ ಚತುಷ್ಪಥ ನಿರ್ಮಾಣ.
ಚಳ್ಳಕೆರೆ ಪಟ್ಟಣ ವ್ಯಾಪ್ತಿಯಲ್ಲಿ NH-150A ಯ ಒಂದು ಬಾರಿ ಸುಧಾರಣೆ.
ರಾಷ್ಟ್ರೀಯ ಹೆದ್ದಾರಿ NH-766 ರ 106 ಕಿ.ಮೀ. ರಸ್ತೆಯನ್ನು ಚತುಷ್ಪಥ, ಆರು ಪಥದ ಹೆದ್ದಾರಿಯಾಗಿ ಅಭಿವೃದ್ಧಿ ಪಡಿಸುವುದು.
ಈಗಾಗಲೇ ತಾತ್ವಿಕ ಅನುಮೋದನೆ ದೊರೆತಿರುವ ಕೇರಳದ ಕಲ್ಪೆಟ್ಟದಿಂದ ಮಾನಂದವಾಡಿ, ಎಚ್.ಡಿ.ಕೋಟೆ, ಜಯಪುರ ಮೂಲಕ ಮೈಸೂರನ್ನು ಸಂಪರ್ಕಿಸುವ 90 ಕಿ.ಮೀ. ಹೆದ್ದಾರಿ, ಮೈಸೂರಿನಿಂದ ಬನ್ನೂರು ಮೂಲಕ ಮಳವಳ್ಳಿಯನ್ನು ಸಂಪರ್ಕಿಸುವ 45 ಕಿ.ಮೀ. ಹೆದ್ದಾರಿ ಹಾಗೂ ಬೆಳಗಾವಿ ಜಿಲ್ಲೆಯ ಸಂಕೇಶ್ವರದಿಂದ ಗೋಕಾಕ- ಯರಗಟ್ಟಿ-ಮನವಳ್ಳಿ ಮೂಲಕ ನರಗುಂದವನ್ನು ಸಂಪರ್ಕಿಸುವ 127 ಕಿ.ಮೀ. ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಉನ್ನತೀಕರಿಸಲು ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ.