ಬೆಳಗಾವಿ : ಕನ್ನಡದಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಉನ್ನತ ಹುದ್ದೆಗಳನ್ನು ಪಡೆಯಲು ಸಾಧ್ಯ. ಕನ್ನಡದ ಬಗ್ಗೆ ಕೀಳಿರಿಮೆಯನ್ನು ಹೊಂದದೆ ಪ್ರಬುದ್ಧವಾದ ಕನ್ನಡ ಭಾಷೆಯನ್ನು ಪ್ರೀತಿಸಬೇಕೆಂದು ಬೆಳಗಾವಿಯ ನಿವೃತ್ತ ಪ್ರಾದೇಶಿಕ ಆಯುಕ್ತ ಮಹಾಂತೇಶ ಜಿ.ಹಿರೇಮಠ ಹೇಳಿದರು.

ಅವರು ಲಿಂಗರಾಜ ಕಾಲೇಜಿನಲ್ಲಿ ಆಯೋಜಿಸಿದ ‘ಕನ್ನಡಹಬ್ಬ’ವನ್ನು ಉದ್ಘಾಟಿಸಿ ಮಾತನಾಡಿದರು. ಕನ್ನಡ ಭಾಷೆಯು ಜಗತ್ತಿನ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದ್ದು ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ಪಡೆದುಕೊಂಡಿದೆ. ೨೦೦೫ ವರೆಗೂ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಭಾರತೀಯ ಭಾಷೆಗಳಲ್ಲಿ ಒಂದಾಗಿತ್ತು. ಅದರ ಗತ ಪರಂಪರೆ ಹಾಗು ಸಂಸ್ಕೃತಿಯನ್ನು ಅರಿಯುವುದು ಅಗತ್ಯವಾಗಿದೆ. ಇಂದು ಕನ್ನಡ ಕ್ರಿಯಾಶೀಲಭಾಷೆಯಾಗಿ ಮುನ್ನಡೆಯುತ್ತಿದೆ. ಪ್ರಬುದ್ಧ ಭಾಷಾ ಸಂಪತ್ತನ್ನು ಹೊಂದಿರುವ ಕನ್ನಡದಲ್ಲಿಯೇ ನಾವು ಐಎಎಸ್ ಕೆಎಎಸ್ ಹಾಗೂ ಮತ್ತಿತರ ಪರೀಕ್ಷೆಗಳನ್ನು ಬರೆದು ಉನ್ನತ ಹುದ್ದೆಗಳನ್ನು ಪಡೆಯಲು ಸಾಧ್ಯ. ಇಂದು ಸೇವೆ ಸಲ್ಲಿಸುತ್ತಿರುವ ರಾಜ್ಯ ಅನೇಕ ಐಎಎಸ್ ಅಧಿಕಾರಿಗಳು ಕನ್ನಡದಲ್ಲಿಯೇ ಪರೀಕ್ಷೆಯನ್ನು ಬರೆದು ಆಯ್ಕೆಹೊಂದಿರುವುದು ನಮ್ಮ ಮುಂದೆ ಅನೇಕ ಉದಾಹರಣೆಗಳು ಇವೆ. ನಮ್ಮ ಭಾಷೆಯ ಬಗ್ಗೆ ಕೀಳರಿಮೆ ಹಾಗೂ ಸಣ್ಣತನ ಸಲ್ಲದು. ಕನ್ನಡ ಭಾಷೆಯನ್ನು ಪ್ರೀತಿಸುವ ಗೌರವಿಸುವ ಸೌಜನ್ಯತೆಗಳನ್ನು ನಾವು ಬೆಳೆಸಿಕೊಂಡಾಗ ಭಾಷೆಯನ್ನು ಉಳಿಸಿಕೊಳ್ಳಲು ಸಾಧ್ಯ. ಕನ್ನಡ ಅಭಿವೃದ್ಧಿ ನಾವೆಲ್ಲರೂ ಪ್ರಯತ್ನಿಸಬೇಕು. ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದೆ. ಸರ್ಕಾರದ ಎಲ್ಲ ವ್ಯವಹಾರಗಳು ಕನ್ನಡದಲ್ಲಿಯೇ ನಡೆಯುವುದನ್ನು ಗಮನಿಸಬೇಕು. ಸರ್ಕಾರಿ ನೌಕರಿಯನ್ನು ಪಡೆಯಬೇಕಾದರೂ ಕನ್ನಡ ವಿಷಯದಲ್ಲಿ ತೇರ್ಗಡೆಯಾಗಿರಲೇಬೇಕೆಂಬ ನಿಯಮವಿದೆ. ಇಂದು ದೇಶದಲ್ಲಿಯೇ ಮಹಿಳೆಯರಿಗೆ ಸರ್ಕಾರಿ ನೌಕರಿಯಲ್ಲಿ ಹೆಚ್ಚು ಮೀಸಲಾತಿಯನ್ನು ನೀಡಿದ ಗೌರವ ಕರ್ನಾಟಕಕ್ಕೆ ಸಲ್ಲುತ್ತದೆ. ಅಂದರೆ ಸರ್ಕಾರ ಕನ್ನಡವನ್ನು ಅನುಷ್ಠಾನಕ್ಕೆ ತರುವ ಮೂಲಕ ಕನ್ನಡವನ್ನು ಉಳಿಸುವ ಬೆಳೆಸುವ ಕಾರ್ಯವನ್ನು ಮಾಡುತ್ತಿದೆ.
ಇನ್ನು ಲಿಂಗರಾಜ ಕಾಲೇಜಿನಲ್ಲಿ ಕನ್ನಡಹಬ್ಬವನ್ನು ಆಚರಿಸುತ್ತಿರುವುದು ಅಭಿಮಾನದ ಸಂಗತಿ. ಗಡಿಭಾಗದಲ್ಲಿ ಮೊದಲಿನಿಂದಲೂ ಕೆಎಲ್‌ಇ ಸಂಸ್ಥೆಯ ಕನ್ನಡವನ್ನು ಕಟ್ಟುವ ಹಾಗೂ ಬೆಳೆಸುವ ಕೆಲಸವನ್ನು ಮಾಡಿದೆ. ಡಾ.ಪ್ರಭಾಕರ ಕೋರೆಯವರು ಗಡಿಭಾಗದಲ್ಲಿ ಕನ್ನಡದ ಪೋಷಣೆಯಲ್ಲಿ ನೀಡಿರುವ ಕೊಡುಗೆ ಅನುಪಮವೆನಿಸಿದೆ. ಲಿಂಗರಾಜ ಮಹಾವಿದ್ಯಾಲಯದ ೧೯೩೩ರಿಂದಲೂ ಕನ್ನಡಿಗರ ಸಾಂಸ್ಕೃತಿಕ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಅನೇಕ ಕನ್ನಡ ಸಾಹಿತಿಗಳನ್ನು ರೂಪಿಸಿದ ಶ್ರೇಯಸ್ಸು ಲಿಂಗರಾಜ ಕಾಲೇಜಿಗೆ ಸಲ್ಲುತ್ತದೆ. ಇಂದು ವಿದ್ಯಾರ್ಥಿಗಳಲ್ಲಿ ಕನ್ನಡ ಸಂಸ್ಕೃತಿಗೆ ಸಂಬಂಧಿಸಿದ ಜನಪದ, ನೃತ್ಯ, ಚಿತ್ರಕಲೆಯಂತಹ ಹಲವಾರು ಸಾಂಸ್ಕೃತಿಕ ನೆಲೆಗಳನ್ನು ಬಿತ್ತುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯವೆನಿಸಿದೆ. ಈ ಪರಂಪರೆಯು ಲಿಂಗರಾಜ ಕಾಲೇಜಿನಲ್ಲಿ ಮುಂದುವರೆಯಬೇಕು. ಕನ್ನಡ ನಾಡದೇವಿಯ ತೇರನ್ನು ನಾವೆಲ್ಲರೂ ಜೊತೆಯಾಗಿ ಎಳೆಯಬೇಕೆಂದು ವಿದ್ಯಾರ್ಥಿಗಳಿಗೆ ಕರೆನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ ಪ್ರಸ್ತುತ ದಿನಗಳಲ್ಲಿ ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸುವುದು ಅಗತ್ಯವೆನಿಸಿದೆ. ವಿದ್ಯಾರ್ಥಿಗಳ ಹೃದಯದಲ್ಲಿ ಕನ್ನಡದ ಅಸ್ಮಿತೆಯನ್ನು ಮೂಡಿಸುವ ನಿಟ್ಟಿನಲ್ಲಿ ಹಲವಾರು ಕನ್ನಡ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಅಂತೆಯೆ ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳಿಂದ ಅಸಂಖ್ಯ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಡಾ.ಎಚ್.ಎಂ.ಚೆನ್ನಪ್ಪಗೋಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಮಹೇಶ ಗುರನಗೌಡರ, ಸಿದ್ಧನಗೌಡ ಪಾಟೀಲ ನಿರೂಪಿಸಿದರು. ವೇದಿಕೆಯ ಮೇಲೆ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯ ಆರ್.ಎಸ್. ಸಂಬರಗಿಮಠ, ಪದವಿಪೂರ್ವ ಕಾಲೇಜಿನ ಪ್ರಾಚಾರ್ಯೆ ಪ್ರೊ.ಗಿರಿಜಾ ಹಿರೇಮಠ, ವಿದ್ಯಾರ್ಥಿ ಪ್ರತಿನಿಧಿ ಅಭಿಷೇಕ ಮಾಳಗೆ ಉಪಸ್ಥಿತರಿದ್ದರು.
ಕನ್ನಡದ ಕಲರವ : ಲಿಂಗರಾಜ ಮಹಾವಿದ್ಯಾಲಯವು ಕನ್ನಡ ಭಾವುಟ ಹಾಗೂ ಹೂವುಗಳಿಂದ ಅಲಂಕೃತ ಗೊಂಡಿತ್ತು. ನಾಡದೇವಿ ಭುವನೇಶ್ವರಿಯ ಭವ್ಯವಾದ ಮೂರ್ತಿಯನ್ನು ಶೃಂಗರಿಸಿದ್ದು ಆಕರ್ಷಣೀಯವೆನಿಸಿತ್ತು. ಎಲ್ಲಿ ನೋಡಿದರೂ ಹಸಿರಿನ ಮಧ್ಯೆ ಕನ್ನಡದ ಕಲರವ ಮನೆ ಮಾಡಿತ್ತು. ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಸಾಂಪ್ರದಾಯಿಕ ಉಡಿಗೆ ತೊಡಗೆಯಲ್ಲಿ ಆಗಮಿಸಿದ್ದರು. ೩೦ಕ್ಕೂ ಹೆಚ್ಚು ಕಾಲೇಜುಗಳಿಂದ ಆಗಮಿಸಿದ್ದ ಸ್ಪರ್ಧಾಳುಗಳು ನೃತ್ಯ, ಹಾಡು, ಚಿತ್ರಕಲೆ, ಕಿರುಚಿತ್ರಗಳಂತಹ ಅನೇಕ ಸ್ಪರ್ಧೆಗಳಲ್ಲಿ ಕನ್ನಡವನ್ನು ಅರಳಿಸಿ ವಿಸ್ಮಯವನ್ನುಂಟುಮಾಡಿದರು.